ಡ್ರಗ್ಸ್‌ನಿಂದ ಜೀವನ, ವೃತ್ತಿ ಅಧೋಗತಿಗೆ: ಮೋದಿ

KannadaprabhaNewsNetwork |  
Published : Aug 03, 2026, 01:45 AM IST
ಎಡಕುಮೇರಿ-ಸಿರಿಬಾಗಿಲು ನಡುವೆ ರೈಲು ಮಾರ್ಗಕ್ಕೆ ಮಣ್ಣು ಕುಸಿತ ಸಂಭವಿಸಿದ್ದು, ದುರಸ್ತಿ ಕಾರ್ಯಾಚರಣೆ ನಡೆಯುತ್ತಿದೆ | Kannada Prabha

ಸಾರಾಂಶ

‘ಮಾದಕ ದ್ರವ್ಯಗಳು ಕೆಲ ಕ್ಷಣ ಉಲ್ಲಾಸದ ಅನುಭವ ನೀಡಬಹುದು. ಆದರೆ ಇಡೀ ಜೀವನ ಮತ್ತು ವೃತ್ತಿ ಬದುಕನ್ನು ಅಧೋಗತಿಗೆ ನೂಕುತ್ತವೆ. ಹೀಗಾಗಿ ಯುವ ಜನತೆ ಈ ಮಾದಕ ದ್ರವ್ಯಗಳಿಂದ ದೂರವಿರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

‘ಮಾದಕ ದ್ರವ್ಯಗಳು ಕೆಲ ಕ್ಷಣ ಉಲ್ಲಾಸದ ಅನುಭವ ನೀಡಬಹುದು. ಆದರೆ ಇಡೀ ಜೀವನ ಮತ್ತು ವೃತ್ತಿ ಬದುಕನ್ನು ಅಧೋಗತಿಗೆ ನೂಕುತ್ತವೆ. ಹೀಗಾಗಿ ಯುವ ಜನತೆ ಈ ಮಾದಕ ದ್ರವ್ಯಗಳಿಂದ ದೂರವಿರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನಶಾ ಮುಕ್ತ ಯುವ-ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಭಾನುವಾರ ವರ್ಚುಯಲ್‌ ಮೂಲಕ ಚಾಲನೆ ನೀಡಿ ಮಾತನಾಡಿ, ದೇಶದ ಯುವಕರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ಹೀಗಾಗಿ ಎಲ್ಲಾ ರೀತಿಯ ಮಾದಕ ದ್ರವ್ಯಗಳ ಬಳಕೆಯಿಂದ ದೂರವಿರುವುದು ಅತ್ಯವಶ್ಯಕ ಎಂದು ತಿಳಿಸಿದರು.

ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ತರಲು ಈ ಮಾದಕವಸ್ತುಗಳನ್ನು ಸರಬರಾಜು ಮಾಡುವುದು ಶತ್ರು ರಾಷ್ಟ್ರಗಳ ಭಯೋತ್ಪಾದನಾ ಯೋಜನೆಯ ಒಂದು ಭಾಗ. ಈ ಬಗ್ಗೆ ಯುವ ಜನತೆ ಎಚ್ಚರ ವಹಿಸಬೇಕು. ಈ ಮಾದಕ ವ್ಯಸನದಿಂದ ಹೊರಬರುವವರು ಹೋರಾಟಗಾರರು. ಈ ವ್ಯಸನದಿಂದ ಹೊರಬರುವವರನ್ನು ಸಮಾಜ ಗೌರವಿಸಬೇಕು. ಈ ಮೂಲಕ ಅವರನ್ನು ಅಪ್ಪಿಕೊಂಡು ಅವರಿಗೆ ಎರಡನೇ ಅವಕಾಶ ನೀಡಬೇಕು ಎಂದು ಹೇಳಿದರು.

ವ್ಯಸನ ತೊಡೆದು ಹಾಕಬಹುದು:

ನಮ್ಮ ಸಂಸ್ಕೃತಿಯು ಸಮಾಜ, ಯೋಗ ಮತ್ತು ಧ್ಯಾನದ ಬೆಂಬಲದೊಂದಿಗೆ ಮಾದಕ ವ್ಯಸನವನ್ನು ತೊಡೆದು ಹಾಕಬಹುದು ಎಂದು ನಮಗೆ ಕಲಿಸುತ್ತದೆ. ‘ಈ ನಶಾ ಮುಕ್ತ ಯುವ’ ಅಭಿಯಾನವು ವ್ಯಕ್ತಿ, ಕುಟುಂಬ, ಸಮಾಜ ಮತ್ತು ಮುಖ್ಯವಾಗಿ ರಾಷ್ಟ್ರಕ್ಕೆ ಒಂದು ಸಂಕಲ್ಪವಾಗಿದೆ. ಈ ಉಪಕ್ರಮದ ಹೆಸರೇ ಅದರ ಉದ್ದೇಶ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಹಾನಿಕಾರಕ ವ್ಯಸನಗಳಿಂದ ದೂರುವಿರಿ:

ದೇಶವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿ ಹೊಂದಿದಾಗ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಯುವಕರು ಹಾನಿಕಾರಕ ವ್ಯಸನಗಳಿಂದ ದೂರವಿರುವುದು ಅತ್ಯಗತ್ಯ. ಈ ಅಭಿಯಾನದ ಮುಖ್ಯ ಉದ್ದೇಶವೂ ಇದೇ ಆಗಿದೆ. ಹೀಗಾಗಿ ಯುವಜನರು ಮಾದಕ ವ್ಯಸನದ ಅಪಾಯಗಳನ್ನು ಅರ್ಥಮಾಡಿಕೊಳ್ಳಬೇಕು. ಜಾಗೃತರಾಗಿರಬೇಕು. ಈ ನಿಟ್ಟಿನಲ್ಲಿ ಎಲ್ಲ ಯುವಕರು ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂದರು.

100 ವಾರಳ ಕಾಲ ಜನಭಾಗಿತ್ವದ ಅಭಿಯಾನ:

ಇಂದಿನಿಂದ ದೇಶಾದ್ಯಂತ ನಶಾ ಮುಕ್ತ ಯುವ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಇದು ಸಾಮೂಹಿಕ ಅಭಿಯಾನವಾದಾಗ, ಸ್ವಂತವಾಗಿ ಏನನ್ನಾದರೂ ಮಾಡಲು ಸಾಧ್ಯವಾಗದವರೂ ಹೊಸ ಶಕ್ತಿ ಪಡೆಯುತ್ತಾರೆ. ಇಂದು ತೆಗೆದುಕೊಂಡ ಸಂಕಲ್ಪ ಮುಂದಿನ 100 ವಾರಗಳ ಕಾಲ ದೇಶವ್ಯಾಪಿ ಜನ ಭಾಗಿತ್ವದ ಅಭಿಯಾನವಾಗಿದೆ. ಮುಂದಿನ 100 ಭಾನುವಾರ ಕಲೆ, ಸಂಸ್ಕೃತಿ, ಕ್ರೀಡೆ, ಧ್ಯಾನ, ಆಧ್ಯಾತ್ಮಿಕತೆ ಮತ್ತು ಸೇವೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ವ್ಯಸನ ಮುಕ್ತತೆ ಸಂದೇಶವು ಹೊಸ ಜನರನ್ನು ತಲುಪಲಿದೆ. ಈ ನೂರು ಭಾನುವಾರಗಳು ಮಾದಕ ದ್ರವ್ಯ ಮುಕ್ತ ಭಾರತದತ್ತ ನೂರು ಬಲವಾದ ಹೆಜ್ಜೆಗಳನ್ನು ಇಡುತ್ತವೆ ಎಂದು ಹೇಳಿದರು.

ವ್ಯಸನದಿಂದ ತಾಯಿ ನಗು, ತಂದೆ ಕನಸು ಛಿದ್ರ:

ಮಾದಕ ದ್ರವ್ಯ ವ್ಯಸನವು ದೇಹಕ್ಕೆ ಹಾನಿ ಮಾಡುವುದಲ್ಲದೆ, ತಾಯಿಯ ನಗುವನ್ನು ಕಸಿದುಕೊಳ್ಳುತ್ತದೆ. ತಂದೆಯ ಕನಸುಗಳನ್ನು ಛಿದ್ರಗೊಳಿಸುತ್ತದೆ. ಸಹೋದರಿಯ ಭರವಸೆ ದುರ್ಬಲಗೊಳಿಸುತ್ತದೆ ಮತ್ತು ಕಿರಿಯ ಸಹೋದರನ ಗೌರವ ಕಸಿದುಕೊಳ್ಳುತ್ತದೆ. ಕುಟುಂಬದ ಸದಸ್ಯರು ಪ್ರತಿದಿನ ಈ ನೋವಿನೊಂದಿಗೆ ಬದುಕುತ್ತಾರೆ. ತಮ್ಮ ಮಕ್ಕಳು ಕ್ರಮೇಣ ತಮ್ಮ ಕಣ್ಣೆದುರೇ ಕಳೆದುಕೊಳ್ಳುವುದನ್ನು ನೋಡುತ್ತಾರೆ. ಹೀಗಾಗಿ ಈ ಮಾದಕ ವಸ್ತುಗಳ ವಿರುದ್ಧದ ಈ ಅಭಿಯಾನದಲ್ಲಿ ಸರ್ಕಾರ ಯುವಕರ ಜೊತೆ ದೃಢವಾಗಿ ನಿಲ್ಲುತ್ತದೆ ಎಂದು ನುಡಿದರು.

ಮಾದಕ ದ್ರವ್ಯ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ:

ದೇಶಾದ್ಯಂತ ಮಾದಕ ದ್ರವ್ಯ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಂಧನಗಳು ಮೊದಲಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ. ಸಾವಿರಾರು ಕೋಟಿ ರುಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಸರ್ಕಾರ ಮಾದಕ ವಸ್ತುಗಳ ವಿರುದ್ಧ ಎಷ್ಟು ಬಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ವ್ಯಸನ ಮರೆ ಮಾಚಬೇಡಿ:

ಪೋಷಕರು ಸಮಾಜಕ್ಕೆ ಅಂಜಿ ತಮ್ಮ ಮಕ್ಕಳ ವ್ಯಸನಗಳನ್ನು ಮರೆ ಮಾಚಬಾರದು. ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸಬೇಕು. ಈ ವ್ಯಸನದಿಂದ ಅವರು ಹೊರಗೆ ಬರಲು ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ತಜ್ಞರು ಮತ್ತು ವೈದ್ಯರ ಸಹಾಯ ಪಡೆಯಬೇಕು ಎಂದು ಮನವಿ ಮಾಡಿದರು.ಏನಿದು ಅಭಿಯಾನ?:

‘ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ‘ನಶಾ ಮುಕ್ತ ಯುವ’ ಅಭಿಯಾನವು ಡ್ರಗ್ಸ್‌ ಸೇವನೆಯಿಂದ ಯುವಕರನ್ನು ದೂರವಿಡುವ ಗುರಿ ಹೊಂದಿದೆ. ಇದು 100 ಭಾನುವಾರ ನಡೆಯಲಿದ್ದು, ಪ್ರತಿ ವಾರವೂ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಇವುಗಳಲ್ಲಿ ಕ್ರೀಡಾಕೂಟ, ವಾಕಥಾನ್‌ಗಳು, ಧ್ಯಾನದ ಅವಧಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿ ನಾಟಕಗಳು, ಚರ್ಚಾ ವೇದಿಕೆ, ಕಲಾ ಸ್ಪರ್ಧೆ ಮತ್ತು ಸಮುದಾಯ ಸಹಭಾಗಿತ್ವದ ಕಾರ್ಯಕ್ರಮಗಳು ಸೇರಿರುತ್ತವೆ.ರಾಜ್ಯದ ವಿವಿಧೆಡೆ ‘ನಶೆ ಮುಕ್ತ’ ಕಾರ್ಯಕ್ರಮದಲ್ಲಿ ಜನರು ಭಾಗಿ:

ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ‘ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ’ ಅಭಿಯಾನಕ್ಕೆ ವರ್ಚುವಲ್‌ ಆಗಿ ಚಾಲನೆ ನೀಡಿ, ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು. ಅವರ ಭಾಷಣವನ್ನು ರಾಜ್ಯಾದ್ಯಂತ ಪ್ರಸಾರ ಮಾಡಲಾಯಿತು.ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಅವರ ಭಾಷಣವನ್ನು ಆಲಿಸಿದರು. ಈ ವೇಳೆ ಮಾತನಾಡಿದ ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ಅಧೀಕ್ಷಕ ಡಾ.ಮಹೇಶ್, ಆರೋಗ್ಯ ಕ್ಷೇತ್ರದಲ್ಲಿ ಇರುವವರು ಸಮಾಜದ ಅತ್ಯಂತ ವಿಶ್ವಾಸಾರ್ಹ ಧ್ವನಿಗಳಾಗಿರುತ್ತಾರೆ. ಆಸ್ಪತ್ರೆ ಮತ್ತು ಕಾಲೇಜುಗಳ ಗಡಿಯನ್ನು ದಾಟಿ, ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ನಶಾಮುಕ್ತ ಭಾರತದ ಕನಸನ್ನು ನನಸು ಮಾಡಿ ಎಂದು ಕರೆ ನೀಡಿದರು.ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಬಿಜಿಎಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ। ಎಸ್.ಎನ್.ಶ್ರೀಧರ್ ಸೇರಿದಂತೆ ವೈದ್ಯಕೀಯ ಮತ್ತು ನರ್ಸಿಂಗ್ ವಿಭಾಗದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಯಚೂರಿನಲ್ಲಿ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಈ ಸಂಬಂಧ ಸಮಾರಂಭ ಆಯೋಜಿಸಲಾಗಿತ್ತು. ಪ್ರಾಚಾರ್ಯರು, ಉಪನ್ಯಾಸಕರು, ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಬಾಗಲಕೋಟೆಯ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಸಭಾಭವನದಲ್ಲಿ ಭಾಷಣದ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಮತ್ತು ಬೋಧಕರನ್ನು ಒಳಗೊಂಡು 2 ಸಾವಿರಕ್ಕೂ ಹೆಚ್ಚು ಜನ ಭಾಷಣದ ನೇರಪ್ರಸಾರವನ್ನು ವೀಕ್ಷಿಸಿದರು. ಇದೇ ವೇಳೆ, ರಾಜ್ಯದ ಇತರೆಡೆಯೂ ಮೋದಿ ಭಾಷಣದ ನೇರ ಪ್ರಸಾರವನ್ನು ವಿದ್ಯಾರ್ಥಿಗಳು, ಜನರು ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ
ಶಿಕ್ಷಣದಿಂದ ಮಾತ್ರ ಪಿಡುಗುಗಳನ್ನು ತಡೆಯಬಹುದು: ನ್ಯಾ. ಯೋಗೇಂದ್ರ ಶೆಟ್ಟಿ ಸಲಹೆ