ಸಾಹುಕಾರ್‌ ವಿರುದ್ಧ ತನಿಖೆ ಹೊಣೆ ಎಸ್ಪಿ ಹೆಗಲಿಗೆ

KannadaprabhaNewsNetwork |  
Published : Aug 03, 2026, 01:45 AM IST
Raghavendra hegde

ಸಾರಾಂಶ

ನೇಮಕಾತಿ ಹಗರಣ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ವಿರುದ್ಧ ತನಿಖೆಗೆ ಎಸ್ಪಿ ದರ್ಜೆ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ನೇಮಿಸಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ನೇಮಕಾತಿ ಹಗರಣ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ವಿರುದ್ಧ ತನಿಖೆಗೆ ಎಸ್ಪಿ ದರ್ಜೆ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ನೇಮಿಸಿದೆ.

ಹಗರಣದ ಆಳ-ಆಗಲ ವಿಸ್ತಾರಗೊಂಡಿರುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ತನಿಖಾ ತಂಡದಲ್ಲಿ ಕೂಡ ಮಹತ್ವದ ಬದಲಾವಣೆಯನ್ನು ಸಿಐಡಿ ಡಿಜಿಪಿ ಪ್ರವಣ್ ಮೊಹಂತಿ ತಂದಿದ್ದಾರೆ. ಹಗರಣದ ತನಿಖಾಧಿಕಾರಿಯಾಗಿ ಡಿವೈಎಸ್ಪಿ ಬದಲಿಸಿದ ಡಿಜಿಪಿ ಅವರು, ಎಸ್ಪಿ ರಾಘವೇಂದ್ರ ಹೆಗಡೆ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಆದೇಶಿಸಿದ್ದಾರೆ.

ಎಸ್ಪಿ ತನಿಖಾಧಿಕಾರಿ ಯಾಕೆ?:

ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪಡೆಯಲು ನಕಲಿ ಆದಾಯ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪ ಕೆಪಿಎಸ್ಸಿ ಅಮಾನತುಗೊಂಡಿರುವ ಅಧ್ಯಕ್ಷರ ಪುತ್ರಿ ವಿರುದ್ಧ ಕೇಳಿ ಬಂದಿತ್ತು. ಈ ಬಗ್ಗೆ ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಆಯೋಗದ ಕಾರ್ಯದರ್ಶಿ ದೂರು ಆಧರಿಸಿ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ಅದರ ಬೆನ್ನಲ್ಲೇ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಭಾರೀ ಹಣದ ಹೊಳೆ ಹರಿದಿದೆ ಎಂಬ ಆಪಾದನೆ ಕೇಳಿ ಬಂದಿತ್ತು.

ಅದೇ ಹೊತ್ತಿಗೆ ಆರೋಪಕ್ಕೆ ಪೂರಕವಾಗಿ ಕೆಲ ವಿಡಿಯೋ-ಆಡಿಯೋಗಳು ಬಹಿರಂಗವಾದವು. ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಕೆಪಿಎಸ್‌ಸಿ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಸೇರಿ 29 ಮಂದಿ ಹಾಗೂ ಮತ್ತೊಂದು ಏಜೆಂಟ್‌ಗಳ ವಿರುದ್ಧ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ ದಾಖಲಾದವು. ಹಣ ವಸೂಲಿ ಮಾಡಿದ್ದ ಇಬ್ಬರು ಏಜೆಂಟ್‌ಗಳನ್ನೂ ಪೊಲೀಸರು ಬಂಧಿಸಿದ್ದರು.

ಇನ್ನು ನೇಮಕಾತಿ ಭಾನಗಡಿ ವಿಚಾರವಾಗಿ ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷರ ವಿರುದ್ಧ ಸಿಐಡಿ ಕಠಿಣ ನಿಲುವು ತಾಳಿದೆ. ಹೀಗಾಗಿ ಶಿವಶಂಕರಪ್ಪ ಎಸ್.ಸಾಹುಕಾರ್ ವಿರುದ್ಧ ಕರ್ನಾಟಕ ಸಾರ್ವಜನಿಕ ಪರೀಕ್ಷಾ (ಭ್ರಷ್ಟಾಚಾರ ಮತ್ತು ಅನ್ಯಾಯ ನಿರ್ಬಂಧ) ಕಾಯ್ದೆ-2024ರ ಪ್ರಯೋಗವಾಗಿದೆ. ಈ ಕಾಯ್ದೆ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವುದರಿಂದ ತನಿಖಾಧಿಕಾರಿಯಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ದರ್ಜೆ ಹಿರಿಯ ಅಧಿಕಾರಿ ನೇಮಕವಾಗಬೇಕಿದೆ. ಹೀಗಾಗಿ ಈ ಮೊದಲು ಡಿವೈಎಸ್ಪಿ ಶ್ರೀನಿವಾಸ್ ನೇಮಕಾತಿ ಹಿಂಪಡೆದು ಸಿಐಡಿ, ಎಸ್ಪಿ ರಾಘವೇಂದ್ರ ಹೆಗಡೆ ಅವರಿಗೆ ಕೆಪಿಎಸ್ಸಿ ಅಕ್ರಮದ ತನಿಖಾಧಿಕಾರಿಯಾಗಿ ನಿಯೋಜಿಸಿದ್ದಾರೆ. ಈ ಮೊದಲು ತನಿಖಾ ತಂಡದ ಉಸ್ತುವಾರಿಯಾಗಿ ಎಸ್ಪಿ ಇದ್ದರು.

ಕೆಪಿಎಸ್ಸಿಗೆ ನೋಟಿಸ್:

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ದಾಖಲೆಗಳನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ಕೆಪಿಎಸ್‌ಸಿಗೆ ಸಿಐಡಿ ನೋಟಿಸ್ ನೀಡಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಹಾಗೂ ಅಭ್ಯರ್ಥಿಗಳ ಪೂರ್ವಾಪರ ಸೇರಿ ಎಲ್ಲ ಕಡತಗಳನ್ನು ನೀಡುವಂತೆ ಸಿಐಡಿ ಸೂಚಿಸಿದ್ದು, ತನಿಖಾ ತಂಡಕ್ಕೆ ಸೋಮವಾರ ದಾಖಲೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಮರ್ಪಕ ವಿದ್ಯುತ್‌, ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮಕ್ಕಳ ಮನೋವಿಕಾಸಕ್ಕೆ ಸ್ಪರ್ಧೆಗಳು ಅವಶ್ಯಕ: ಭೀಮಸೇನ್ ಆಚಾರ್ಯ