ಡಾ.ಬಾಬುಜಿ ಅವರಿಗೆ ಅವಮಾನ ಖಂಡಿಸಿ ಡಿಎಸ್‌ಎಸ್‌ ಹೋರಾಟ: ಕ್ರಮದ ಭರವಸೆ

KannadaprabhaNewsNetwork |  
Published : May 19, 2026, 03:00 AM IST
18ಕೆಡಿವಿಜಿ1, 2-ದಾವಣಗೆರೆ ಜಿಪಂ ಮುಂಭಾಗದಲ್ಲಿ ಡಿಎಸ್ಸೆಸ್ ದಾವಣಗೆರೆ, ಹರಿಹರ ಮುಖಂಡರ ನೇತೃತ್ವದಲ್ಲಿ ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲರಾವ್ ಅವರಿಗೆ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನರಾಂ ಅವರನ್ನು ಅವಮಾನಿಸಿದ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳನ್ನು ಅಮಾನತುಪಡಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಹಾಗೂ ಹರಿಹರ ತಾಲೂಕು ಘಟಕಗಳ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

- ಹರಿಹರ ತಾಲೂಕಿನಲ್ಲಿ ಬಾಬುಜಿ ಜಯಂತಿಯಲ್ಲಿ ಲೋಪ: ದಲಿತ ಮುಖಂಡರ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನರಾಂ ಅವರನ್ನು ಅವಮಾನಿಸಿದ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳನ್ನು ಅಮಾನತುಪಡಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಹಾಗೂ ಹರಿಹರ ತಾಲೂಕು ಘಟಕಗಳ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅವರಿಗೆ ಮನವಿ ಅರ್ಪಿಸಲಾಯಿತು.

ಇದೇ ವೇಳೆ ಸಂಘಟನೆ ಮುಖಂಡರು ಮಾತನಾಡಿ, ಏ.5ರಂದು ದಲಿತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಜಯಂತಿಯನ್ನು ಹರಿಹರ ತಾಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ಕಾಟಾಚಾರಕ್ಕೆ ಆಚರಿಸಿದ್ದಾರೆ. ಇದು ಬಾಬುಜಿ ಅವರಿಗೆ ಮಾಡಿದ ಅವಮಾನ. ಹರಿಹರ ತಾಲೂಕಿನ ಹೊಳೆಸಿರಿಗೆರೆ, ಬೆಳ್ಳೂಡಿ ಗ್ರಾಪಂ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಕೇವಲ ಒಬ್ಬರು ಹಾಜರಿದ್ದರು. ಕಡರನಾಯಕನಹಳ್ಳಿ, ಕುಣಿಬೆಳಕೆರೆ, ನಂದಿಗಾವಿ ಗ್ರಾ.ಪಂ.ನಲ್ಲಿ ಇಬ್ಬರು, ಭಾನುವಳ್ಳಿ, ರಾಜನಹಳ್ಳಿ, ಹನಗವಾಡಿ, ಕೊಂಡಜ್ಜಿ, ಉಕ್ಕಡಗಾತ್ರಿ, ಬನ್ನಿಕೋಡು ಗ್ರಾ.ಪಂ.ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಮೂವರು ಪಾಲ್ಗೊಂಡಿದ್ದರು ಎಂದು ಕಿಡಿಕಾರಿದರು.

ಹೊಳೆ ಸಿರಿಗೆರೆ, ಹನಗವಾಡಿ, ಕಡರನಾಯಕನಹಳ್ಳಿ, ಕುಂಬಳೂರು, ರಾಜನಹಳ್ಳಿ, ಕೊಂಡಜ್ಜಿ, ಕುಣಿಬೆಳಕೆರೆ, ಬೆಳ್ಳೂಡಿ, ಸಾಲಕಟ್ಟೆ, ಸಾರಥಿ, ವಾಸನ ಗ್ರಾಪಂ ಕಚೇರಿಗಳಲ್ಲಿ ಬಾಬುಜಿ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಸೌಜನ್ಯವನ್ನೂ ಅಧಿಕಾರಿ-ಸಿಬ್ಬಂದಿ ತೋರಿಲ್ಲ. ಭಾನುವಳ್ಳಿ ಗ್ರಾಪಂ ಕಚೇರಿಯಲ್ಲಿ ಹೂವಿನ ಹಾರ ಬದಲಿಗೆ ಪ್ಲಾಸ್ಟಿಕ್ ಹಾರ ಹಾಕಿದ್ದರು. ಅನೇಕ ಗ್ರಾ.ಪಂ.ಗಳಲ್ಲಿ ಗ್ರಾಪಂ ಆಡಳಿತಾಧಿಕಾರಿ, ಪಿಡಿಒ, ಬಿಲ್‌ ಕಲೆಕ್ಟರ್‌ಗಳು ಇನ್ನಿತರೇ ಸಿಬ್ಬಂದಿ ಸಹ ಬಾಬುಜಿ ಜಯಂತಿ ಆಚರಿಸಿಲ್ಲ. ಈ ಬಗ್ಗೆ ಜಿಪಂ ಸಿಇಒ ಹಾಗೂ ಹರಿಹರ ತಾಪಂ ಇಒ ಅವರಿಗೆ ದೂರು ನೀಡಿದ್ದೆವು ಎಂದು ತಿಳಿಸಿದರು.

ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು-2021ರ ನಿಯಮ-3(1)ನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಜಿಪಂ ಸಿಇಒ, ಹರಿಹರ ತಾಪಂ ಇ.ಒ.ಗಳ ಗಮನಕ್ಕೂ ಬಂದಿದೆ. ಯಾವುದೇ ಕಾರಣಕ್ಕೂ ಕಾಲಹರಣ ಮಾಡದೇ, ಸಂಬಂಧಿಸಿದ ಗ್ರಾಪಂಗಳ ಆಡಳಿತಾಧಿಕಾರಿಗಳು, ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನು ನಿಯಮಾನುಸಾರ ಅಮಾನತುಪಡಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಸಂಘಟನೆಯಿಂದ ಅನಿರ್ದಿಷ್ಟಾವಧಿವರೆಗೆ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಸಂಘಟನೆಯ ಮನವಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಕವೇ ಡಿಎಸ್‌ಎಸ್‌ ಮುಖಂಡರು, ಪ್ರತಿಭಟನಾಕಾರರು ಹೋರಾಟ ಕೈಬಿಟ್ಟರು. ಮುಖಂಡರಾದ ವಿಜಯಲಕ್ಷ್ಮೀ, ಬಿ.ಮುಗ್ದುಂ, ಚೌಡಪ್ಪ ಸಿ.ಭಾನುವಳ್ಳಿ, ತಿಮ್ಮಣ್ಣ ಸುಶೀಲಮ್ಮ ಕಡ್ಲೆಗೊಂದಿ, ಎಂ.ಎಸ್. ಮಂಜುನಾಥ ಕೊಕ್ಕನೂರು, ಡಿ.ರಾಮಣ್ಣ ಹಿಂಡಸಘಟ್ಟ, ಮಲ್ಲಯ್ಯನಹಳ್ಳಿ ಗುಡ್ಡಪ್ಪ, ಲೋಕೇಶ, ಶಿವಪ್ಪ ಇತರರು ಇದ್ದರು.

- - -

-18ಕೆಡಿವಿಜಿ1, 2: ಜಿಪಂ ಮುಂಭಾಗದಲ್ಲಿ ದಾವಣಗೆರೆ, ಹರಿಹರ ಡಿಎಸ್‌ಎಸ್‌ ಘಟಕಗಳ ಮುಖಂಡರ ನೇತೃತ್ವದಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರಿಗೆ ಮನವಿ ಅರ್ಪಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಟೀಕಿಸೋದು ಖರ್ಗೆಗೆ ಶೋಭೆ ತರೋದಿಲ್ಲ
ಕಲಬುರಗಿ: ಜಿಲ್ಲೆಯಲ್ಲಿ ಆಕರ್ಷಕ ಮೃಗಾಲಯ ಲೋಕಾರ್ಪಣೆ