- ರಾಜ್ಯ, ರಾಷ್ಟ್ರ, ವಿದೇಶಗಳಿಂದಲೂ ದಾವಣಗೆರೆಗೆ ಬರುತ್ತಿರುವ ಲಕ್ಷಾಂತರ ಭಕ್ತರು, ಬಂಧು-ಬಳಗ
- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ ಭಾನುವಾರ ಸಾರು ಹಾಕುವುದರೊಂದಿಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಕ್ಕಂತಾಗಿದೆ. ಅದ್ಧೂರಿ ಮಂಟಪವು ರಾಜ್ಯದ ಪ್ರಸಿದ್ಧ ಜಾತ್ರೆಗೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದೆ.
ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿ ಕಟ್ಟಿದ್ದ ದೇವಿಯ ಕೋಣಕ್ಕೆ ಗಾಂಧಿ ನಗರದಿಂದ ಪದ್ಧತಿಯಂತೆ ಮುಖಂಡರು, ಭಕ್ತರು ಹಲಗೆ ವಾದ್ಯದೊಂದಿಗೆ ಗುಡಿ ಬಳಿ ಬಂದು, ದುಗ್ಗಮ್ಮ ಹಾಗೂ ದೇವಿ ಕೋಣಕ್ಕೆ ಪೂಜೆ ಮಾಡಿದರು. ಅಲ್ಲಿಂದ ಕೋಣವನ್ನು ಬೃಹತ್ ಮೆರವಣಿಗೆಯಲ್ಲಿ ಗಾಂಧಿ ನಗರಕ್ಕೆ ಕರೆದೊಯ್ಯುತ್ತಾರೆ. ಕುರುಬರ ಕೇರಿ ಬಳಿಯಿಂದ ಪಂಜು ಹಿಡಿದ ಭಕ್ತರು, ಶಾನುಬೋಗರು, ಧರ್ಮದರ್ಶಿಗಳು, ಸಮಿತಿ ಪದಾಧಿಕಾರಿಗಳು ಗಾಂಧಿ ನಗರಕ್ಕೆ ಬಂದು, ಮಹಾಮಂಗಳಾರತಿ ಮಾಡುವ ಪದ್ಧತಿ ಎಂದಿನಂತೆ ನಡೆಯಿತು.ಅನಂತರ ರಾಜಬೀದಿಗಳಲ್ಲಿ ಕೋಣದ ಮೆರವಣಿಗೆ ಮಾಡಿ, ದುಗ್ಗಮ್ಮನ ಗುಡಿ ಬಳಿ ಕೋಣಕ್ಕೆ ಪೂಜೆ ಮಾಡಿ, ತಡರಾತ್ರಿ 2ರವರೆಗೆ ಹಳೆ ಭಾಗದಲ್ಲಿ ದುಗ್ಗಮ್ಮನ ಕೋಣದ ಮೆರವಣಿಗೆ ನಡೆಯುತ್ತದೆ. ಇದರೊಂದಿಗೆ ಶಕ್ತಿ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ಸಾರು ಹಾಕುವ ಸಂಪ್ರದಾಯ ನೆರವೇರುವುದರಿಂದ ದುಗ್ಗಮ್ಮ ಜಾತ್ರೆ ಈಗ ಮಹತ್ವದ ಘಟ್ಟಕ್ಕೆ ತಲುಪಿದಂತಾಗಿದೆ. ದುಗ್ಗಮ್ಮ ಜಾತ್ರೆ, ದುಗ್ಗಮ್ಮನ ಶಕ್ತಿ, ಪವಾಡಗಳಿಗೆ ಶರಣಾದ ಭಕ್ತರು ಎಲ್ಲಿಯೇ ಇದ್ದರೂ ದುಗ್ಗಮ್ಮನ ಜಾತ್ರೆಗೆಂದೇ ದಾವಣಗೆರೆಗೆ ಬರುವುದು ವಿಶೇಷ.
₹23.5 ಲಕ್ಷ ವೆಚ್ಚದಲ್ಲಿ ಮಂಟಪ (ಪೆಂಡಾಲ್):ದುಗ್ಗಮ್ಮನ ಜಾತ್ರೆ ಹಿನ್ನೆಲೆ ಈ ಸಲವೂ ಆಕರ್ಷಕ ಮಂಟಪವನ್ನು ಅರಮನೆ ದರ್ಬಾರ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀ ನಂಜುಂಡೇಶ್ವರ ಡೆಕೋರೇಟರ್ಸ್‌ಗೆ ಗುತ್ತಿಗೆ ಪಡೆದಿದೆ. ಸುಮಾರು ₹23.5 ಲಕ್ಷ ವೆಚ್ಚದಲ್ಲಿ ಪ್ರತಿ ವರ್ಷದಂತೆ ದೇವಸ್ಥಾನ ಮುಂಭಾಗದಲ್ಲಿ ಆಕರ್ಷಕ ಮಂಟಪ ನಿರ್ಮಿಸಿದ್ದಾರೆ. ಕಳೆದೊಂದು ತಿಂಗಳಿನಿಂದ 20ಕ್ಕೂ ಹೆಚ್ಚು ಕಾರ್ಮಿಕರು ಮಂಟಪ ನಿರ್ಮಾಣ ಮಾಡಿದ್ದಾರೆ. ಮಂಟಪಕ್ಕೆ ವಿದ್ಯುತ್ ಅಲಂಕಾರ, ಅಂತಿಮ ಸ್ಪರ್ಶದ ಕಾರ್ಯ ಭಾನುವಾರ ರಾತ್ರಿ ಭರದಿಂದ ಮುಕ್ತಾಯಗೊಂಡವು.
ಹಿಂದಿನ ಜಾತ್ರೆ ವೇಳೆ ಮಂಟಪವು ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಲ್ಪಿಟ್ಟಿದ್ದರೆ, ಈ ಸಲ ₹23.5 ಲಕ್ಷ ವೆಚ್ಚದಲ್ಲಿ ಸಿದ್ಧಗೊಂಡಿದೆ. ದುಗ್ಗಮ್ಮನ ಗುಡಿ ಅಂಗಳದ ಸುಮಾರು 5 ಸಾವಿರ ಅಡಿ ವಿಸ್ತೀರ್ಣದಲ್ಲಿ ಮಹಾಮಂಟಪ ಅಂದರೆ ಪೆಂಡಾಲು ಸಿದ್ಧವಾಗಿದೆ. ಪ್ರತಿ ವರ್ಷದಂತೆ ಜಾತ್ರೆ ಪೆಂಡಾಲ್ ಸಹ ಗಮನ ಸೆಳೆಯುತ್ತಿದೆ. ಈ ಸಲವೂ ಸೋಷಿಯಲ್ ಮೀಡಿಯಾ, ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಂ, ರೀಲ್ಸ್‌ಗಳಲ್ಲಿ ಮಂಟಪದ ಸುಂದರ ದೃಶ್ಯ ಗಮನ ಸೆಳೆಯುತ್ತಿದೆ. ಇನ್ನೂ ವಿಶೇಷವೆಂದರೆ ಮಂಟಪದಲ್ಲಿ ಶಿಲಾ ಬಾಲಕಿಯರು ಈ ಸಲದ ಆಕರ್ಷಣೆಯಾಗಿದ್ದಾರೆ.ಜಾತ್ರೆ ಕಾರ್ಯ ಭಾನುವಾರದಿಂದ ಶುರುವಾಗಿ ಫೆ.24ರವರೆಗೆ ಅತ್ಯಂತ ಮಹತ್ವದ್ದಾಗಿರುತ್ತದೆ. ಜಾತ್ರೆ ಹಿನ್ನೆಲೆ ದೇವಸ್ಥಾನಗಳು, ವೃತ್ತಗಳು ಸುಣ್ಣಬಣ್ಣ ಕಂಡಿವೆ. ಹಲವಾರು ವೃತ್ತಗಳು ಸ್ವಚ್ಛಗೊಂಡು ಕಂಗೊಳಿಸುತ್ತಿವೆ. ದುಗ್ಗಮ್ಮನ ಗುಡಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದವರೆಗೆ ವಿದ್ಯುದೀಪಾಲಂಕಾರ ಗಮನ ಸೆಳೆಯುತ್ತಿವೆ. ಗಾಂಧಿ ನಗರದ, ದುಗ್ಗಮ್ಮನ ದೇವಸ್ಥಾನದ ಸುತ್ತಮತ್ತಲ ಪ್ರದೇಶ, ವೀರ ಮದಕರಿ ನಾಯಕ ವೃತ್ತ, ಕುರುಬರ ಕೇರಿ, ಗಾಂಧಿ ನಗರ, ಹಳೇ ಪೇಟೆ, ಶಿವಾಜಿ ನಗರ ಸೇರಿದಂತೆ ಇಡೀ ಹಳೇ ಭಾಗದ ಊರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.
ಹರಕೆ ತೀರಿಸಲು ಭಕ್ತರು ದೀಡು ನಮಸ್ಕಾರ, ಬೇವಿನುಡುಗೆ ಹರಕೆ ಸೇವೆ ಸಲ್ಲಿಸುವ ಹಿನ್ನೆಲೆ ದುಗ್ಗಮ್ಮನ ದೇವಸ್ಥಾನದ ಸುತ್ತಲೂ ಮರಳು ಹಾಕಿಸಿ, ನಿರಂತರ ನೀರು ಪೂರೈಸಲಾಗುತ್ತಿದೆ. ದೇವಸ್ಥಾನದ ಹಿಂಭಾಗ ಮತ್ತು ಎದುರಿನಲ್ಲಿ ಸ್ನಾನಕ್ಕೆ, ಮಡಿವಸ್ತ್ರ ಧರಿಸಲು ಭಕ್ತರಿಗೆ ಅನುಕೂಲ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಈಗಾಗಲೇ ಪಾಲಿಕೆಗೆ ಸೂಚನೆ ನೀಡಿದ್ದು, ಅದರ ಕೆಲಸಗಳೂ ಸಾಗಿವೆ. ಇದೆಲ್ಲದರ ವ್ಯವಸ್ಥೆಯನ್ನು ಪಾಲಿಕೆ ವಹಿಸಿಕೊಂಡಿದೆ. ದುಗ್ಗಮ್ಮನ ಜಾತ್ರೆಯೆಂದರೆ ಅಂತಿಂಥ ಜಾತ್ರೆ ಅಲ್ಲ, ದುಗ್ಗಮ್ಮನ ಜಾತ್ರೆ ಕಣ್ಣಾರೆ ಕಂಡರಷ್ಟೇ ತಾಯಿಯ ಮೇಲಿನ ಭಕ್ತಿ ಏನೆಂಬುದು ಅರಿವಾಗುತ್ತದೆ.ದಾವಣಗೆರೆ ವಾಸಿಗಳು, ಪರಸ್ಥಳದಿಂದ ಇಲ್ಲಿ ಬಂದು ಬದುಕು ಕಟ್ಟಿಕೊಂಡವರು ದುಗ್ಗಮ್ಮನ ಜಾತ್ರೆಗೆ ತಮ್ಮ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳನ್ನು ಆಹ್ವಾನಿಸುತ್ತಾರೆ. ಆರೇಳು ಲಕ್ಷ ಜನಸಂಖ್ಯೆಯ ದಾವಣಗೆರೆಗೆ ಅದರ ದುಪ್ಪಟ್ಟು ಜನರು ಜಾತ್ರೆಗೆಂದೇ ಇಲ್ಲಿಗೆ ಬರುವುದು ವಾಡಿಕೆ. ಇನ್ನು ಫೆ.23ರಿಂದ 4 ದಿನಗಳ ಕಾಲ ದೇವಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಂತೂ ಅಪಾರವಾಗಿರುತ್ತದೆ. ಕಿಮೀಗಟ್ಟಲೇ ಸರದಿಯಲ್ಲಿ ನಿಂತು ಭಕ್ತರು ದುಗ್ಗಮ್ಮ ನಿನ್ನಾಲ್ಕು ಉಧೋ... ಉಧೋ... ಎಂಬ ಜಯಘೋಷ ಮೊಳಗಿಸುತ್ತಾ ದೇವಿ ಜಪ ಮಾಡುತ್ತಾ ಕೊನೆಗೂ ದೇವಿ ದರ್ಶನ ಮಾಡಿ, ಪುನೀತರಾಗುತ್ತಾರೆ.
ದೇವಿ ದರ್ಶನಕ್ಕೆ ಬರುವ ಭಕ್ತರಿಗಾಗಿ ದುಗ್ಗಮ್ಮನ ಗುಡಿಯಿಂದ ದೊಡ್ಡಪೇಟೆ ಶ್ರೀ ಗಣೇಶ ದೇವಸ್ಥಾನದವರೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಕಿಮೀಗಟ್ಟಲೇ ದೇವಿ ದರ್ಶನಕ್ಕೆ ಭಕ್ತರ ಸಾಲು 8-10 ದಿನಗಳವರೆಗೆ ಇರಲಿದೆ. ಇನ್ನೂ ವಿಶೇಷವೆಂದರೆ ಜಾತ್ರೆ ಹಿನ್ನೆಲೆಯಲ್ಲಿ ದುಗ್ಗಮ್ಮನ ಕಾಣಿಕೆಯ ಡಬ್ಬಿ ಗಡಿಗೆಗೆ ಭಕ್ತರು ನಾಣ್ಯಗಳಿಂದ ನೋಟುಗಳವರೆಗೆ ಅರ್ಪಿಸುವ, ಬಡವ-ಬಲ್ಲಿದ ಎನ್ನದೇ ತಮ್ಮ ಶಕ್ತ್ಯಾನುಸಾರ, ಭಕ್ತ್ಯಾನುಸಾರ ಸಲ್ಲಿಸುವ ಡಬ್ಬಿಗಡಿಗೆ ಕಾಣಿಕೆ ಹಣದಿಂದಲೇ ಶ್ರೀ ದುಗ್ಗಮ್ಮನಿಗೆ ಸೀರೆ, ಕಾಲುಂಗುರ, ತಾಳಿ ಇತರೆ ಪೂಜಾ ಸಾಮಗ್ರಿ ಖರೀದಿಸುವುದು ಸಹ ಇಲ್ಲಿ ಸಂಪ್ರದಾಯ ಆಗಿರುವುದು ವಿಶೇಷ.- - -
-22ಕೆಡಿವಿಜಿ1, 2.ಜೆಪಿಜಿ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ.-22ಕೆಡಿವಿಜಿ3: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ.