ಭಾಷೆ ಮೂಲಕ ಕಾವ್ಯ ಉಸಿರಾಡುತ್ತದೆ, ಕವಿಗಳು ಪದ ಬಳಕೆಯಲ್ಲಿ ಎಚ್ಚರ ವಹಿಸಬೇಕು

KannadaprabhaNewsNetwork |  
Published : Oct 21, 2024, 12:32 AM IST
1 | Kannada Prabha

ಸಾರಾಂಶ

ಭಾಷೆಯನ್ನು ಆಡಂಬರವಾಗಿ ಬಳಸಬಾರದು. ಅನುಭವನ್ನೇ ಕಾವ್ಯದ ಅಂಗಡಿಯಾಗಿ ಅಭಿವ್ಯಕ್ತಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ. ಹೀಗಾಗಿ, ಕವಿಗಳು ಪದ ಬಳಕೆಯಲ್ಲಿ ಎಚ್ಚರ ವಹಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಚ. ಸರ್ವಮಂಗಳಾ ತಿಳಿಸಿದರು.

ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ದಸರಾ ಕವಿ- ಕಾವ್ಯ ಸಂಭ್ರಮ ರಾಜ್ಯ ಮಟ್ಟದ ಕಾವ್ಯೋತ್ಸವ ಮತ್ತು ಡಾ. ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾಷೆಯನ್ನು ಆಡಂಬರವಾಗಿ ಬಳಸಬಾರದು. ಅನುಭವನ್ನೇ ಕಾವ್ಯದ ಅಂಗಡಿಯಾಗಿ ಅಭಿವ್ಯಕ್ತಿಸಬೇಕು. ಮನಸ್ಸಿಗೆ ಹಿಂಸೆಯಾದರೂ ಸರಿ ಸತ್ಯವನ್ನೇ ಹೇಳಬೇಕು. ಕಾವ್ಯ ರಚನೆಯ ಅಗತ್ಯಕ್ಕೆ ಅನುಗುಣವಾಗಿ ಪದಗಳನ್ನು ಬಳಸಬೇಕು. ಆದರೆ, ಕೆಟ್ಟ ಪದಗಳು ಬಳಸಿ ಭಾಷೆಯ ಅಂದವನ್ನು ಕೆಡಿಸಬಾರದು ಎಂದು ಅವರು ಹೇಳಿದರು.

ಕವಿಗಳು ಪದ ಬಳಕೆಯಲ್ಲಿ ಜಿಪುಣತನ ತೋರಿಸಬೇಕು. ಕವಿತೆ ಓದುಗರ ಎದೆಯೊಳಗೆ ಸದಾಶಯದ ಬೀಜ ಮೊಳೆಯುವಂತೆ ಪರಿಣಾಮಕಾರಿ ಆಗಿರಬೇಕು. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಕೆಟ್ಟ ಭಾಷೆಯ ಪ್ರಯೋಗ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಭಾಷೆ, ಕನ್ನಡ ಭಾಷೆಯ ಸೌಂದರ್ಯವನ್ನು ಮತ್ತು ಮನುಷ್ಯ ಬದುಕಿನಲ್ಲಿ ಅಳವಡಿಕೊಳ್ಳಬೇಕಾದ ಮೌಲ್ಯವನ್ನು ಸಾರುತ್ತದೆ ಎಂದು ಅವರು ತಿಳಿಸಿದರು.

ನಾವು ಕೆಟ್ಟ ಕಾಲದಲ್ಲಿ ಬದುಕುತ್ತಿದ್ದೇವೆ. ಭಾಷೆಗೂ ಒಂದು ಧರ್ಮವಿದ್ದು, ಕೆಟ್ಟ ಭಾಷೆ ಮತ್ತು ಕೆಟ್ಟ ಪದ ಬಳಕೆಯ ಮೂಲಕ ಭಾಷೆಯ ಧರ್ಮವನ್ನು ನಾಶ ಮಾಡಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿದರು.

ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಇಂದು ಪ್ರಪಂಚದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಯುದ್ಧವನ್ನು ನಿಲ್ಲಿಸುವ ಶಕ್ತಿ ಕಾವ್ಯಕ್ಕೆ ಇದೆ. ಹೀಗಾಗಿ, ಯುದ್ಧೋನ್ಮಾದಕ್ಕೆ ಪ್ರತಿರೋಧವಾಗಿ ಕವಿಗಳು ಕಾವ್ಯವನ್ನು ಕಟ್ಟಬೇಕು. ಆ ಮೂಲಕ ಬಂದೂಕು, ಮದ್ದು ಗುಂಡಿನ ಸದ್ದಡಗಿಸಲು, ಕಾವ್ಯಗಳೇ ಮದ್ದುಗುಂಡುಗಳಾಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್, ಸ್ಪಂದನಾ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಎಸ್. ಸತೀಶ್ ಜವರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎಚ್.ಕೆ. ರಾಮು, ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್‌ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಸತೀಶ್, ಮಡಿಲು ಸೇವಾ ಟ್ರಸ್ಟ್‌ ಸಂಸ್ಥಾಪಕ ಅರಸು ಮಡಿಲು, ನಿವೃತ್ತ ಮುಖ್ಯ ಶಿಕ್ಷಕ ಯೋಗೇಂದ್ರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ