ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಎಂಬ ಹಣೆಪಟ್ಟಿ ಹೊಂದಿರುವ ವಾಣಿಜ್ಯನಗರಿಯ ಧೂಳಿನ ಸಮಸ್ಯೆಗೆ ಮುಕ್ತಿ ನೀಡುವ ಕಾರ್ಯ ಆಗುತ್ತಿಲ್ಲ. ನಗರದಾದ್ಯಂತ ರಸ್ತೆಯಲ್ಲಿ ಧೂಳು, ಗುಂಡಿಗಳ ತಾಂಡವ ಮುಂದುವರೆದಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳು ಸಂಚರಿಸುವ ವೇಳೆ ಮಳೆಗಾಲದ ಮಂಜಿನಂತೆ ಏಳುವ ಧೂಳಿನಿಂದಾಗಿ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.ವಾಣಿಜ್ಯ ನಗರಿ ಎಂಬ ಹೆಸರು ಗಳಿಸಿದ ಹುಬ್ಬಳ್ಳಿಯಲ್ಲಿ ಮಳೆಗಾಲದಲ್ಲಿ ಕೆಸರಿನ ಮಜ್ಜನವಾದರೆ, ಚಳಿಗಾಲ ಮತ್ತು ಬೇಸಿಗೆಯಲ್ಲಿ ಎಲ್ಲಿ ನೋಡಿದರಲ್ಲಿ ಧೂಳೇ ಧೂಳು. ನಗರದಲ್ಲಿ ಸಂಚರಿಸುವವರಿಗೆ ಧೂಳು ಉಚಿತ, ರೋಗಗಳು ಖಚಿತ ಎಂಬಂತಾಗಿದೆ. ನಗರದ ಮುಖ್ಯ ರಸ್ತೆಗಳು, ಬಡಾವಣೆಗಳಲ್ಲಿನ ಯಾವುದೇ ರಸ್ತೆಗಿಳಿದರೂ ಸವಾರರು ಧೂಳು ಸೇವಿಸದೇ ಮನೆ ಸೇರಿವುದಿಲ್ಲ.
ಚೆನ್ನಮ್ಮ ವೃತ್ತ ಅಯೋಮಯಹುಬ್ಬಳ್ಳಿಗೆ ಮುಕುಟದಂತಿರುವ ಇಲ್ಲಿನ ಚೆನ್ನಮ್ಮ ವೃತ್ತ ಸೇರಿದಂತೆ ಸುತ್ತಮುತ್ತಲೂ ಫ್ಲೈಓವರ್ ಕಾಮಗಾರಿ ನಡೆಯುತ್ತಿದೆ. ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದಾಗಿ ವೃತ್ತ ಸೇರಿದಂತೆ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಈ ರಸ್ತೆಯಲ್ಲಿ ವಾಹನಗಳು ಹಾದುಹೋಗಲು ಇನ್ನಿಲ್ಲದ ನರಕಯಾತನೆ ಅನುಭವಿಸುವಂತಾಗಿದೆ.
ಚೆನ್ನಮ್ಮ ವೃತ್ತದಿಂದ ಹೊಸೂರ ಕ್ರಾಸ್ ವರೆಗಿನ ರಸ್ತೆಯಲ್ಲಿ ದಿನಕ್ಕೆ 3-4 ಬಾರಿ ಟ್ಯಾಂಕರ್ ನೀರು ಸುರಿಯಲಾಗುತ್ತಿದೆ. ಆದರೂ ಧೂಳು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನವಿಡಿ ಇಲ್ಲಿ ರಸ್ತೆ ಕಾಣದಷ್ಟು ಧೂಳು ಆವರಿಸಿಕೊಂಡಿರುತ್ತದೆ. ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿ-ಧಾರವಾಡದಾದ್ಯಂತ ಅದರಲ್ಲೂ ವಿಶೇಷವಾಗಿ ಇಲ್ಲಿನ ಐಟಿ ಪಾರ್ಕ್ ಮತ್ತು ಗೋಕುಲ್ ರಸ್ತೆ ಬಳಿಯ ಪ್ರಮುಖ ರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಸ್ಮಾರ್ಟ್ ಸಿಟಿ ಮತ್ತು ಇತರ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ರಸ್ತೆಗಳು ಸಹ ಹಾಳಾಗಿದ್ದು, ಧೂಳಿನಿಂದ ಆವೃತವಾಗಿವೆ. ರಸ್ತೆ ದುರಸ್ತಿಗೆ ಮುಂದಾಗಬೇಕಿದ್ದ ಮಹಾನಗರ ಪಾಲಿಕೆಯು ಮಳೆಗಾಲದ ನೆಪವೊಡ್ಡಿ ದುರಸ್ತಿ ಕಾರ್ಯ ಮುಂದೂಡಿತ್ತಿದೆ.
ಈಚೆಗೆ ಗಣೇಶ ಹಬ್ಬದ ಸಮಯದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ಮುಚ್ಚುವ ಕಾರ್ಯವಾಗಿತ್ತು. ಆದರೆ, ಈ ರಸ್ತೆಗಳೂ ಸಹ ಈಗ ಮತ್ತೆ ಹಾಳಾಗಿವೆ. ಜತೆಗೆ ಮೂರುಸಾವಿರ ಮಠ ರಸ್ತೆ, ಹೊಸ ಕೋರ್ಟ್ ರಸ್ತೆ, ದೋಬಿ ಘಾಟ್, ಅಯೋಧ್ಯಾ ನಗರ, ಹಳೆಯ ಹುಬ್ಬಳ್ಳಿ, ಹೆಗ್ಗೇರಿ ಕಾಲನಿಯಿಂದ ಸಿದ್ಧಾರೂಢ ಮಠದ ವರೆಗೆ, ಐಟಿ ಪಾರ್ಕ್, ಅಕ್ಷಯ್ ಪಾರ್ಕ್, ಗೋಕುಲ್ ರಸ್ತೆ, ಹೊಸೂರು ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಚೆನ್ನಪೇಟ್ ರಸ್ತೆಯಿಂದ ಇಂಡಿ ಪಂಪ್ ರಸ್ತೆ ಹೀಗೆ ಹೇಳುತ್ತಾ ಹೋದರೆ ಆಂಜನೇಯನ ಬಾಲದಂತೆ ಗುಂಡಿಗಳ ರಸ್ತೆಗಳು ಹೆಸರುಗಳು ಬೆಳೆಯುತ್ತಾ ಸಾಗುತ್ತವೆ. ಆಟೋ ಚಾಲಕರಿಂದ ಮಾಸ್ಕ್ ಹಂಚಿಕೆನಗರದಲ್ಲಿನ ರಸ್ತೆಗಳೆಲ್ಲ ಹಾಳಾಗಿ ಹೋಗಿದ್ದು, ನಗರವಿಡೀ ಧೂಳಿನಿಂದ ಆವರಿಸುತ್ತಿರುವುದನ್ನು ಗಮನಿಸಿದ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪಾಲಿಕೆ ಅಧಿಕಾರಿಗಳು ದುರಸ್ತಿಗೆ ಮುಂದಾಗದ ಹಿನ್ನೆಲೆಯಲ್ಲಿ ಈಚೆಗೆ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ನೇತೃತ್ವದಲ್ಲಿ ನೂರಾರು ದ್ವಿಚಕ್ರ ವಾಹನ ಸವಾರರಿಗೆ ಮಾಸ್ಕ್ ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದುಂಟು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪಾಲಿಕೆಯ ಅಧಿಕಾರಿಗಳು ಜಾಣಕುರುಡು ನೀತಿ ಅನುಸರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ನಗರದಲ್ಲಿ ರಸ್ತೆಗಳ ಪರಿಸ್ಥಿತಿ ನೋಡಿದರೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲೇಬಾರದು ಎಂಬಂತಾಗಿದೆ. ಎಲ್ಲಲ್ಲೂ ತೆಗ್ಗು-ಗುಂಡಿಗಳದ್ದೇ ಸಾಮ್ರಾಜ್ಯ. ಧೂಳಿನ ಸ್ಥಿತಿಯಂತೂ ಹೇಳತೀರದಾಗಿದೆ. ಆದಷ್ಟು ಬೇಗನೆ ರಸ್ತೆಗಳನ್ನು ದುರಸ್ತಿಗೊಳಿಸಿ ಧೂಳಿನಿಂದ ಮುಕ್ತಿ ನೀಡುವ ಕಾರ್ಯವಾಗಲಿ ಎಂದು ಸ್ಥಳೀಯ ನಿವಾಸಿ ಸುಧೀರ ಬೆಟಗೇರಿ ಆಗ್ರಹಿಸಿದ್ದಾರೆ.ನಗರದಲ್ಲಿರುವ ರಸ್ತೆಗಳ ದುರಸ್ತಿಗೆ ಈಗಾಗಲೇ ₹5.25 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ನಗರದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳ ದುರಸ್ತಿಗೆ ವಿಳಂಬವಾಗಿದೆ. ಇನ್ನೊಂದು ವಾರದಲ್ಲಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ ಆರ್. ತಿಳಿಸಿದ್ದಾರೆ.