ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಸಾಂವಿಧಾನಿಕ ಆಶಯವಾಗಿದೆ ಎಂದು ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಒತ್ತಾಯಿಸಿದರು.ಕರ್ನಾಟಕ ಸ್ಟೇಟ್ ಕನ್ಸ್‌ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆ ವತಿಯಿಂದ ಮಹಿಳಾ ಸೇವಾ ಸಮಾಜದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ನೋಟ್‍ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗೆ ಸರ್ಕಾರ ನಿವೇಶನಗಳನ್ನು ಕೊಡಬೇಕು. ಕೊಳಗೇರಿ ನಿವಾಸಿಗಳು ಬಡತನವೆಂಬ ಕಾರಣಕ್ಕಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಮಕ್ಕಳಿಗೆ ಬಾಲ್ಯ ವಿವಾಹ ಮಾಡಿದರೆ ತಂದೆ-ತಾಯಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎನ್ನುವ ಜಾಗೃತಿ ಎಲ್ಲರಲ್ಲಿಯೂ ಇರಬೇಕು. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದೆಂದರು.ನೋಟ್ ಬುಕ್ ವಿತರಿಸಿ ಮಾತನಾಡಿದ ಉದ್ಯಮಿ ಸೈಟ್ ಬಾಬು, ಕೊಳಗೇರಿ ನಿವಾಸಿಗಳ ಬಗ್ಗೆ ಗಣೇಶ್ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಬಡ ಮಕ್ಕಳಿಗೆ ನೋಟ್‍ಬುಕ್‍ಗಳನ್ನು ವಿತರಿಸುವುದು ನಿಜಕ್ಕೂ ಮೆಚ್ಚುವಂತಹದ್ದು. ಇಂತಹ ಕಾರ್ಯಕಗಳಿಗೆ ತಾವು ಸದಾ ಕೈ ಜೋಡಿಸುವುದಾಗಿ ಹೇಳಿದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಹಾಗೂ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷ ರುದ್ರಸ್ವಾಮಿ ಮಾತನಾಡಿ, ಮಹಿಳೆಯರು ಕಾರ್ಮಿಕರಾಗಿ ಹೊರಗಡೆಯೂ ದುಡಿದು ನಂತರ ಮನೆಯಲ್ಲಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗಬೇಕು. ಮಹಿಳೆಯಲ್ಲಿ ಅಂತಹ ಸಮಾಧಾನ, ತಾಳ್ಮೆಯ ಗುಣವಿದೆ. ಕೊಳಗೇರಿ ನಿವಾಸಿಗಳು ಮಕ್ಕಳನ್ನು ಚಿಕ್ಕಂದಿನಿಂದಲೇ ಕೆಲಸಕ್ಕೆ ಕಳಿಸಿ ಕಾರ್ಮಿಕರನ್ನಾಗಿ ಮಾಡಬೇಡಿ. ಕಡ್ಡಾಯವಾಗಿ ಶಿಕ್ಷಣ ಕೊಡಿಸಿದರೆ ದೊಡ್ಡ ದೊಡ್ಡ ಹುದ್ದೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.ಮಹಿಳಾ ಸೇವಾ ಸಮಾಜದ ಮಾಜಿ ಉಪಾಧ್ಯಕ್ಷೆ ಸುಮನ ಅಂಗಡಿ ಮಾತನಾಡಿ, ಕಾರ್ಮಿಕರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಮೂಲಭೂತ ಸೌಲಭ್ಯಗಳಿರಬೇಕು. ಮಾಲೀಕರುಗಳು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಬಾರದು.ದಿನಕ್ಕೆ ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ ಹಾಗೂ ಎಂಟು ಗಂಟೆಗಳ ಕಾಲ ಮನೋರಂಜನೆ ಹಾಗೂ ಮತ್ತಿತರೆ ಕೆಲಸಗಳಲ್ಲಿ ತೊಡಗಿಕೊಳ್ಳುವುದು ನಮ್ಮ ಹಕ್ಕು ಎಂದು ಕಾರ್ಮಿಕರು ದೊಡ್ಡ ಚಳುವಳಿ ನಡೆಸಿದ ಪರಿಣಾಮ ಸರ್ಕಾರ ಅನೇಕ ಕಾನೂನು ಗಳನ್ನು ಜಾರಿಗೆ ತಂದಿದೆ. ಕೆಲಸ ಮಾಡುವ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣೆ, ವರ್ಷಕ್ಕೊಮ್ಮೆ ಬೋನಸ್, ವಿಮಾ ಯೋಜನೆ ಕೊಡಬೇಕು. ತಿಂಗಳಲ್ಲಿ 20 ದಿನ ಕೆಲಸ ಮಾಡಿದರೆ ಗಳಿಕೆ ರಜೆ ತೆಗೆದುಕೊಳ್ಳಬಹುದು ಎಂದರು.
ಜಾನಪದ ಜಾಗೃತಿ ಪರಿಷತ್ ರಾಜ್ಯಾಧ್ಯಕ್ಷ ಹೆಚ್.ಪ್ಯಾರೇಜಾನ್, ಜಿಲ್ಲಾಧ್ಯಕ್ಷ ಬಿ.ಕೃಷ್ಣಪ್ಪ, ಕೆಕೆಎನ್ಎಸ್ಎಸ್.ಉಪಾಧ್ಯಕ್ಷ ಎನ್.ರಂಗಸ್ವಾಮಿ, ನ್ಯಾಯವಾದಿ ಲತ ಉಮೇಶ್, ಭಾಗ್ಯ ಕುಮಾರ್ ವೇದಿಕೆಯಲ್ಲಿದ್ದರು.ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.