- ಟೀಕೆಗಳು, ವಿಶ್ಲೇಷಣೆಗಳು ಆರೋಗ್ಯಕರವಾಗಿರುವಂತೆ ಸಲಹೆ - ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ಕನ್ನಡಪ್ರಭ ವಾರ್ತೆ ಮಂಡ್ಯ ವಸ್ತುನಿಷ್ಠ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮಗಳು ಮಾಡುವ ಟೀಕೆಗಳು ಹಾಗೂ ವಿಶ್ಲೇಷಣೆಗಳು ಆರೋಗ್ಯಕರವಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ಮಂಗಳವಾರ ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ಜವಾಬ್ದಾರಿಯುತ ಸ್ಥಾನವಿದೆ. ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಅವು ಕೆಲಸ ಮಾಡಬೇಕು. ಇಂದು ಪತ್ರಿಕೆಗಳು, ದೃಶ್ಯಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳು ಬಂದಿವೆ. ಹಿಂದೆಲ್ಲಾ ಸುದ್ದಿಗಾಗಿಯೇ ಒಂದು ಸಮಯವಿತ್ತು. ಈಗ ಎಲ್ಲಿ ಏನೇ ನಡೆದರೂ ತಕ್ಷಣಕ್ಕೆ ಸುದ್ದಿ ಗೊತ್ತಾಗುತ್ತದೆ. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಸುದ್ದಿ ಜನರಿಗೆ ಬಹಳ ವೇಗವಾಗಿ ತಲುಪುತ್ತಿದೆ. ಈ ಸಮಯದಲ್ಲಿ ವಸ್ತುನಿಷ್ಠ ವರದಿಗಾರಿಕೆಗೆ ಪ್ರಾಮುಖ್ಯತೆ ನೀಡಬೇಕು ಎಂದರು. ರಾಜಕಾರಣದಲ್ಲಿ ನಮಗೆ ಜವಾಬ್ದಾರಿ ಹೆಚ್ಚಾಗಿರುವಂತೆ ಪತ್ರಿಕಾಕ್ಷೇತ್ರದಲ್ಲಿ ನಿಮ್ಮ ಜವಾಬ್ದಾರಿಯೂ ಹೆಚ್ಚಿದೆ. ಮಾಧ್ಯಮಗಳು ಮೌಢ್ಯವನ್ನು ಬಿತ್ತಲೂ ಬಾರದು. ಪುಷ್ಠೀಕರಿಸಲೂ ಬಾರದು. ಪ್ರಸ್ತುತ ತನಿಖಾ ವರದಿಗಳು ಕಡಿಮೆಯಾಗಿವೆ. ಮಾಧ್ಯಮಗಳ ಮೇಲೆ ಜನರ ವಿಶ್ವಾಸ, ನಂಬಿಕೆ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು. ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ನಿಜವಾದ ಪತ್ರಕರ್ತ ಕ್ರಿಯಾಯೋಗಿಯಾಗಿರಬೇಕು. ಸರಳ ಜೀವಿಯಾಗಿ ತಪಸ್ವಿಯಂತಿರಬೇಕು. ಆಧುನಿಕ ಜ್ಞಾನಕ್ಕೆ ತಕಕ್ಕಂತೆ ನಮ್ಮ ಜ್ಞಾನವನ್ನೂ ಹೆಚ್ಚಿಸಿಕೊಳ್ಳಬೇಕು. ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡು ಜ್ಞಾನವನ್ನು ವೃದ್ಧಿಸಿಕೊಂಡಾಗ ಮಾತ್ರ ಕ್ರಿಯಾಯೋಗಿಯಾಗಿ ಬೆಳವಣಿಗೆ ಸಾಧಿಸಲು ಸಾಧ್ಯ ಎಂದರು. ಬುದ್ಧಿವಂತ ಮನಸ್ಸನ್ನು ಸದಾ ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಬೇಕು. ನಿಷ್ಠೆಯನ್ನು ಕಾಪಾಡಿಕೊಳ್ಳಬೇಕು. ವಿವೇಚನೆಯಿಂದ ವರದಿ ಮಾಡಿದರೆ ನಾಡಿಗೆ, ಜನರಿಗೆ ಉಪಯೋಗವಾಗುತ್ತದೆ. ತಮ್ಮೊಳಗಿರುವ ಜ್ಞಾನದಿಂದ ಸಮಾಜದ ಸೇವೆ ಮಾಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪತ್ರಕರ್ತರಿಗೆ ಅಪಘಾತ ವಿಮಾ ಪಾಲಿಸಿಯ ಬಾಂಡ್‌ಗಳನ್ನು ವಿತರಿಸಿದರು. ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ, ಕೆ.ಎಂ.ಉದಯ್, ಎಚ್.ಟಿ. ಮಂಜು, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ರವಿ ಬೊಜೇಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಂ.ಆರ್.ಜಯರಾಂ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಎನ್.ನವೀನ್‌ಕುಮಾರ್, ಸೋಮಶೇಖರ ಕೆರಗೋಡು, ಸಿ.ಎನ್.ಮಂಜುನಾಥ, ಪಿ.ಜೆ.ಚೈತನ್ಯಕುಮಾರ, ಕೆ.ಶ್ರೀನಿವಾಸ್ ಸೇರಿದಂತೆ ಇತರರಿದ್ದರು. (ಬಾಕ್ಸ್//) ಸಿಎಂ ಕಾರಿನ ಮೇಲೆ ಕಾಗೆ ಕುಳಿತಿದ್ದು ದೊಡ್ಡ ಸುದ್ದಿಯೇ? ಕನ್ನಡಪ್ರಭ ವಾರ್ತೆ ಮಂಡ್ಯ ಸಿಎಂ ಕಾರಿನ ಮೇಲೆ ಕಾಗೆ ಕುಳಿತಿದ್ದು ದೊಡ್ಡ ಸುದ್ದಿಯೇ. ಅದರ ಮೇಲೆ ಜೋತಿಷಿಗಳನ್ನಿಟ್ಟುಕೊಂಡು ಚರ್ಚೆ ಮಾಡುವುದು. ಮುಂದೆ ಹೀಗಾಗಬಹುದೆಂದು ಪ್ರಚಾರ ಮಾಡುವುದು ಸಮಾಜದೊಳಗೆ ಮೌಢ್ಯ ಬಿತ್ತಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾಗೆಗೆ ಇದು ಸಿಎಂ ಕಾರು, ಅದರ ಮೇಲೆ ಕುಳಿತುಕೊಳ್ಳಬಾರದು ಎಂದೇನಾದರೂ ಗೊತ್ತೇ. ಅದೇನೋ ಬಂದು ಕುಳಿತುಕೊಂಡಿತು. ಅದನ್ನು ಅಲ್ಲಿಗೆ ಬಿಡದೆ ಅದನ್ನು ವಿಡಿಯೋ ಮಾಡಿಕೊಂಡು. ಸಿಎಂ ಕಾರಿನ ಮೇಲೆ ಕಾಗೆ ಕುಳಿತದ್ದು ಅಪಶಕುನ. ಮುಂದೆ ಏನಾಗಬಹುದು. ಇವರು ಬಜೆಟ್ ಮಂಡಿಸುವರೇ, ಇಲ್ಲವೇ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಬಜೆಟ್ ಮಂಡಿಸುತ್ತಾರೆ, ಆನಂತರದಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನು ನೋಡಿ ನನಗೆ ಗಾಬರಿಯಾಯಿತು. ಆ ಚರ್ಚೆಯಾದ ಬಳಿಕವೂ ನಾನು ಪೂರ್ಣಾವಧಿಯವರೆಗೆ ಅಧಿಕಾರದಲ್ಲಿ ಮುಂದುವರೆದಿದ್ದೆ. ಇಂತಹ ಮೌಢ್ಯಗಳು ಸಮಾಜಕ್ಕೆ ಒಳ್ಳೆಯದಲ್ಲ. ಇಂತಹ ವರದಿಗಳು ಜನರನ್ನು ದಾರಿತಪ್ಪಿಸುತ್ತವೆ ಎಂದರು.