ಮನೆಬಾಗಿಲಿಗೇ ಇ-ಖಾತೆ: ಶಾಸಕ ಧೀರಜ್‌

KannadaprabhaNewsNetwork | Published : Apr 2, 2025 1:02 AM

ಸಾರಾಂಶ

ದೊಡ್ಡಬಳ್ಳಾಪುರ: ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ‌‌ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಖಾತಾ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.

ದೊಡ್ಡಬಳ್ಳಾಪುರ: ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ‌‌ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಖಾತಾ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಆವರಣದ ಶಾಸಕರ ಕಚೇರಿಯಲ್ಲಿ ಇ-ಖಾತಾ ಅಭಿಯಾನದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್‌ 4ರಂದು ವಿದ್ಯಾನಗರದ ಸರ್ಕಾರಿ ಶಾಲೆ ಆವರಣದಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಬಳಿಕ ಏಪ್ರಿಲ್ 22ರವರೆಗೆ ವಿವಿಧ ಸ್ಥಳಗಳಲ್ಲಿ ಅಭಿಯಾನ ನಡೆಯಲಿದೆ. ಅದೇ ರೀತಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏಪ್ರಿಲ್‌ 3ರಿಂದ 16ರವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

30 ದಿನದಲ್ಲಿ ಮನೆಬಾಗಿಲಿಗೆ ಇ-ಖಾತೆ:

ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ 30 ದಿನ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಸ್ವತ್ತುಗಳ ಮಾಲೀಕರ ಮನೆಬಾಗಿಲಿಗೆ ಇ-ಖಾತೆ ಪ್ರಮಾಣ ಪತ್ರವನ್ನು ತಲುಪಿಸಲಾಗುವುದು. ಒಂದು ಮಾಹಿತಿಯ ಅನ್ವಯ ನಗರಸಭೆ ವ್ಯಾಪ್ತಿಯಲ್ಲಿ 13 ರಿಂದ 14 ಸಾವಿರ ಅನಧಿಕೃತ ಸ್ವತ್ತುಗಳು, ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಅನಧಿಕೃತ ಖಾತೆಗಳು ಇರುವುದಾಗಿ ಮಾಹಿತಿ ಇದೆ ಎಂದು ವಿವರಿಸಿದರು.

ಎ ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಮಂಜೂರಾತಿ ಪತ್ರಗಳು, ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ , ಮಾಲೀಕರ ಗುರುತಿನ ದಾಖಲೆ ಪ್ರತಿ ನೀಡಬೇಕಿದೆ.

ಬಿ- ರಿಜಿಸ್ಟ‌ರ್ ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ: 10-09-2024 ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳು ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕಿದೆ ಎಂದು ವಿವರಿಸಿದರು.

ಬಾಕ್ಸ್‌............

ಮಧ್ಯವರ್ತಿಗಳ ಬಗ್ಗೆ ಎಚ್ಚರವಿರಲಿ:ಕರ್ನಾಟಕ ಸರ್ಕಾರ ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಇ-ಖಾತಾ ಅಭಿಯಾನ ಆರಂಭಿಸಿದೆ. ಇ-ಖಾತಾ ಪಡೆಯಲು ಯಾವುದೇ ಗಡುವು ನಿಗದಿ ಮಾಡಿಲ್ಲ. ಆದ್ದರಿಂದ ಜನರು ಯಾವುದೇ ಊಹಾಪೋಹಗಳಿಗೆ ಕಿವಿಗೊಟ್ಟು ಮಧ್ಯವರ್ತಿಗಳಿಂದ ಕಿರುಕುಳ ಅನುಭವಿಸುವುದು ಬೇಡ. ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಪಡೆಯಬಹುದು. ಇ-ಖಾತಾ ಆಂದೋಲನದಲ್ಲಿ ಸ್ವತ್ತಿನ ಮಾಲೀಕರು ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಿಗದಿತ ದಾಖಲೆಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

ಬಾಕ್ಸ್‌...............

ಪಿಎಂ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಿ:

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈವರೆಗೆ ಸುಮಾರು 3 ಸಾವಿರ ಜನರು ಅರ್ಜಿ ಸಲ್ಲಿಸಿ, ಮನೆ ಕಟ್ಟಲು ಅನುದಾನ ಕೋರಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಿವೇಶನವಿದ್ದು, ಮನೆ ಕಟ್ಟಿಕೊಳ್ಳಲು ಅನುದಾನ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಏ.30ರವರೆಗೆ ಅವಕಾಶ ನೀಡಲಾಗಿದೆ ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

1ಕೆಡಿಬಿಪಿ1-

ಶಾಸಕ ಧೀರಜ್‌ ಮುನಿರಾಜ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article