ಕನ್ನಡಪ್ರಭ ವಾರ್ತೆ ತುಮಕೂರುಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಇ-ಸ್ವತ್ತು ದಾಖಲೆಗಳನ್ನು ನೀಡುವಲ್ಲಿ ನಡೆಯುತ್ತಿರುವ ವಿಳಂಬ ಮತ್ತು ಅವ್ಯವಸ್ಥೆ ಕುರಿತು ನಾಗರಿಕರಿಂದ ಜಿಲ್ಲಾಧಿಕಾರಿಗಳಿಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ದಿಢೀರ್ ಪಾಲಿಕೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಾಲಿಕೆಯ ಆಸ್ತಿ ದಾಖಲಾತಿ ವಿಭಾಗದಲ್ಲಿ ಆನ್‌ಲೈನ್ ಮೂಲಕ ಸಲ್ಲಿಕೆಯಾದ ಹಲವು ಅರ್ಜಿಗಳು ಕಂದಾಯ ನಿರೀಕ್ಷಕರ ಹಂತದಲ್ಲೇ ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿಸಿರುವುದು, ದಾಖಲೆಗಳ ಪರಿಶೀಲನೆಗೆ ತಿಂಗಳುಗಟ್ಟಲೆ ಕಾಯುವ ಅನಿವಾರ್ಯ ಪರಿಸ್ಥಿತಿ ಮತ್ತು ಕೆಲ ಕಡೆಗಳಲ್ಲಿ ಅಧಿಕಾರಿಗಳ ಅಸಮರ್ಪಕ ಸೇವಾ ಮನೋಭಾವ ಕಂಡು ಬಂದ ಕಾರಣ ಜಿಲ್ಲಾಧಿಕಾರಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಸಲ್ಲಿಸಿದ ಅಂಕಿ-ಅಂಶಗಳ ಪ್ರಕಾರ ನೂರಾರು ಇ-ಸ್ವತ್ತು ಅರ್ಜಿಗಳು ಕಂದಾಯ ನಿರೀಕ್ಷಕರ ಮಟ್ಟದಲ್ಲಿ ಬಾಕಿ ಉಳಿದಿದ್ದು, ಸಾರ್ವಜನಿಕರು ಸಮಯಕ್ಕೆ ದಾಖಲೆಗಳನ್ನು ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಾರ್ವಜನಿಕರನ್ನು ದಿನಗಟ್ಟಲೆ ಕಚೇರಿಯ ಸುತ್ತ ಸುತ್ತಿಸುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿ, ಇದೇ ರೀತಿಯ ವರ್ತನೆ ಮುಂದುವರಿದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.