;Resize=(412,232))
ಬೆಂಗಳೂರು : ಒಂದು ದಿನದ ಮಟ್ಟಿಗೆ ಟ್ರಾಫಿಕ್ ಪೊಲೀಸ್ ಆಗಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ಮಂಗಳವಾರ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್ ಆಗುವ ಅವಕಾಶವನ್ನು ನಾಗರಿಕರಿಗೆ ಕಲ್ಪಿಸಿದ್ದು, ಅದರಂತೆ ಮಂಗಳವಾರ ಟ್ರಾಫಿಕ್ ಪೊಲೀಸರ ಸಮವಸ್ತ್ರ ತೊಟ್ಟ ಸುರೇಶ್ ಕುಮಾರ್ ಅವರು ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸಿದರು. ಕರ್ತವ್ಯ ನಿರ್ವಹಣೆ ವೇಳೆ ಸಿಗ್ನಲ್‌ಗಳನ್ನು ಆಪರೇಟ್ ಮಾಡುವ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ನಿಯಮ ಉಲ್ಲಂಘಿಸಿದವರಿಗೆ ನಿಯಮ ಪಾಲಿಸುವಂತೆ ಕಿವಿಮಾತು ಹೇಳಿದರು.
ಸಂಚಾರ ನಿಯಮ ಪಾಲನೆಯಲ್ಲಿ ನಾಗರಿಕರ ಮಾನಸಿಕತೆಯೂ ಪ್ರಮುಖ ಸವಾಲಾಗಿದೆ ಎಂಬುದನ್ನು ಅವರು ಗಮನಿಸಿದರು. ಹೆಲ್ಮೆಟ್ ಧರಿಸದಿರುವುದು, ವಾಹನದಲ್ಲಿ ಹೆಚ್ಚು ಜನರನ್ನು ಸಾಗಿಸುವುದು ಮತ್ತು ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸುವಂತಹ ನಡವಳಿಕೆಗಳು ಸಂಚಾರಕ್ಕೆ ಅಡ್ಡಿಯಾಗುತ್ತವೆ ಎಂದು ವಾಹನ ಸವಾರರಿಗೆ ವಿವರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚಾಲುಕ್ಯ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಬೇಕು ಅಂತ ಆಸೆ ಇತ್ತು. ಅನೇಕ ಬಾರಿ ಮಳೆ ಬಂದಾಗ, ಟ್ರಾಫಿಕ್ ಜಾಮ್ ಆದಾಗ ಕೆಲ ಬಾರಿ ಅಲ್ಲಿ ನಿಂತುಕೊಂಡು ನಿಯಂತ್ರಣ ಮಾಡಿದ್ದೆ. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಂಚಾರ ನಿಯಂತ್ರಣ ಮಾಡಿದ್ದೇನೆ. ನಿಜವಾಗಿಯೂ ಸಂಚಾರ ಪೊಲೀಸರು ಸಂಚಾರ ನಿಯಂತ್ರಣದ ವೇಳೆ ಏನೇನು ಸಮಸ್ಯೆ ಎದುರಿಸುತ್ತಾರೆ ಮತ್ತು ಯಾವ್ಯಾವ ಸಮಸ್ಯೆಗಳು ಇವೆ ಎಂಬುದು ನಿಜವಾಗಿಯೂ ಅನುಭವಕ್ಕೆ ಬಂದಿದೆ ಎಂದರು.
ಸಂಚಾರ ನಿಯಮಗಳನ್ನು ಪಾಲಿಸಿದಷ್ಟು ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಜನರು ಸ್ವಯಂ ಪ್ರೇರಿತವಾಗಿ ನಿಯಮಗಳನ್ನು ಪಾಲಿಸಬೇಕು. ಈ ವಿನೂತನ ಯೋಜನೆಯಲ್ಲಿ ನಾಗರಿಕರ ಸಹಭಾಗಿತ್ವವಾದರೆ ಸಮಸ್ಯೆಗಳನ್ನು ನಿಯಂತ್ರಣ ಮಾಡಬಹುದು. ನಾನು ಜಂಟಿ ಆಯುಕ್ತರಿಗೆ ಮನವಿ ಮಾಡುತ್ತೇನೆ, ಒಂದು ವೇಳೆ ಅವರು ಒಪ್ಪುವುದಾದರೆ ನಾನು ಪ್ರತಿ ಸೋಮವಾರ ನಮ್ಮ ಕಾರ್ಯಕರ್ತರ ಜತೆ ಪೊಲೀಸ್ ಸಿಬ್ಬಂದಿಯೊಂದಿಗೆ ನಮ್ಮ ವಿಧಾನಸಭಾ ವ್ಯಾಪ್ತಿಯ ಪ್ರಮುಖ 8 ಜಂಕ್ಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.
ಶಾಸಕ ಸುರೇಶ್ ಕುಮಾರ್ ಅವರು, ಕರ್ತವ್ಯ ನಿರ್ವಹಿಸಿರುವುದು ನಮಗೆ ತುಂಬ ಸಂತೋಷ ಕೊಟ್ಟಿದೆ. ನಿಯಮ ಉಲ್ಲಂಘಿಸಿದವರಿಗೆ ಬುದ್ದಿವಾದ ಕೂಡ ಹೇಳಿದ್ದಾರೆ. ಅವರಿಂದ ಉತ್ತೇಜನ ಪಡೆದ ಸಾಕಷ್ಟು ನಾಗರಿಕರು ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆಗೂ 1100 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
-ಕಾರ್ತಿಕ್ ರೆಡ್ಡಿ, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ