- ಮೃತರ ಹೆಸರಿನಲ್ಲಿ 91,505 ಆಸ್ತಿಗಳು: ವಿಳಂಬಕ್ಕೆ ಸಬೂಬು ಹೇಳುತ್ತಿದ್ದರೆ ಸಹಿಸಲ್ಲ: ಕೃಷ್ಣ ಭೈರೇಗೌಡ ತರಾಟೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ 91,505 ಆಸ್ತಿಗಳು ಮೃತರ ಹೆಸರಿನಲ್ಲಿದ್ದು, ಇ-ಪೌತಿ ಖಾತೆ ಅಭಿಯಾನ ಆರಂಭಿಸಿದ್ದರೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಭಿಯಾನ ಆಮೆಗತಿಯಲ್ಲಿ ಸಾಗಿರುವುದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಸಾಮಾನ್ಯರ ಕೆಲಸ, ಕಾರ್ಯಗಳಲ್ಲಿ ವಿಳಂಬ ಧೋರಣೆ ಸಹಿಸಲು ಸಾಧ್ಯವಿಲ್ಲ. ಇ-ಪೌತಿ ಖಾತೆ ಅಭಿಯಾನದಲ್ಲಿ ದಾವಣಗೆರೆ ತಾಲೂಕಿನ ಪ್ರಗತಿ ಕಡಿಮೆ ಇದೆ. ಬೇರೆ ತಾಲೂಕಿನವರು ಇದನ್ನು ಮಾಡಲು ಸಾಧ್ಯವಾಗಿದ್ದರೆ ಇಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಕೆಲಸದ ವಿಳಂಬಕ್ಕೆ ಸಬೂಬು ಹೇಳಿಕೊಂಡು ಕೂಡುವುದನ್ನು ಸಹಿಸೋದಿಲ್ಲ. ನಿಮ್ಮ ತಾಲೂಕಿಗೆ ನೀಡಲಾದ ಗುರಿ ಮತ್ತು ಸಾಧನೆಯಲ್ಲಿ ಭಾರಿ ವ್ಯತ್ಯಾಸ ಇದೆ ಎಂದು ಸಚಿವರು ಕಿಡಿಕಾರಿದರು.
ಅಭಿಯಾನದಲ್ಲಿ ದಾವಣಗೆರೆ ತಾಲೂಕಿನಲ್ಲೇ 20636 ಅರ್ಜಿಗಳು ಬಾಕಿ ಇವೆ. ಈವರೆಗೆ ಕೇವಲ 728 ಅರ್ಜಿ ಮಾತ್ರ ಭೂಮಿ ಸಾಫ್ಟ್‌ವೇರ್‌ಗೆ ಬರುವಂತೆ ಮಾಡಲಾಗಿದೆ. ಕಳಪೆ ಸಾಧನೆ ಬಗ್ಗೆ ತಹಸೀಲ್ದಾರ್, ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿರುವುದು ಸ್ಪಷ್ಟವಾಗಿದೆ. ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು ಅಥವಾ ಒಟಿಪಿ ಸಮಸ್ಯೆ ಮುಂದಿಟ್ಟುಕೊಂಡು ಕೆಲಸ ವಿಳಂಬ ಮಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
₹9 ಕೋಟಿ ಪ್ರೋತ್ಸಾಹಧನ:
ಜಂಟಿ ಖಾತೆ ಮಾಡಲು ತಾಂತ್ರಿಕ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ತಕ್ಷಣ ಪರಿಹರಿಸಿಕೊಳ್ಳಿ. ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಸಾರ್ವಜನಿಕರ ಕೆಲಸ, ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳು, ಸಿಬ್ಬಂದಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಧಾರ್ ಅನ್ವಯ ಇ-ಜನ್ಮ ಪೋರ್ಟಲ್‌ಗೂ ಮುಂದಿನ ದಿನಗಳಲ್ಲಿ ಲಿಂಕ್ ಮಾಡುವುದರಿಂದ ಮರಣ ಹೊಂದಿದವರ ಜಮೀನುಗಳ ವಿವರ ಭೂಮಿಯಲ್ಲಿ ಲಭ್ಯವಾಗುತ್ತದೆ. ಮೊದಲು ಮೇ ತಿಂಗಳಲ್ಲಿ ಜಮಾಬಂದಿ ಮಾಡಲಾಗುತ್ತಿತ್ತು. ಆದರೆ, ಜಮಾಬಂದಿ ಮಾಡುವುದನ್ನು ಬಿಟ್ಟಿದ್ದರಿಂದ ಪೌತಿ ಖಾತೆಯೂ ಉಳಿದಿದೆ. ಮುಂದಿನ ದಿನಗಳಲ್ಲಿ ಜಮಾಬಂದಿ ಆರಂಭಿಸಲಾಗುವುದು. ರಾಜ್ಯದಲ್ಲಿ ಸುಮಾರು 50 ಲಕ್ಷ ಪಹಣಿಗಳು ಮೃತರ ಹೆಸರಿಗೆ ಇದ್ದು, ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆ ಲಾಭ, ನೀರಾವರಿ ಸಬ್ಸಿಡಿಯನ್ನು ಆಯಾ ಕುಟುಂಬಗಳು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಬೇಸರ ವ್ಯಕ್ತಪಡಿಸಿದರು.
- - -
ದಾವಣಗೆರೆ: ಕಂದಾಯ ಇಲಾಖೆಯಲ್ಲಿ ಎಲ್ಲ ಕಡೆ ಇ-ಕಚೇರಿ ಮೂಲಕವೇ ಕಡತ ನಿರ್ವಹಣೆ ಮಾಡುತ್ತಿದ್ದು, ಎಲ್ಲ ತಾಲೂಕು ಕಚೇರಿ, ಎಸಿ ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳು ಇ-ಕಚೇರಿ ಮೂಲಕ ಕಡತ ನಿರ್ವಹಣೆ, ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ 3 ನಾಡ ಕಚೇರಿಗಳನ್ನು ಇ-ಕಚೇರಿ ಮಾಡಲಾಗಿದೆ. ಅಲ್ಲಿ ಕೇಸ್ವಾನ್ ನೆಟ್‍ವರ್ಕ್ ನೀಡಲಾಗಿದೆ. ಉಳಿದ ನಾಡ ಕಚೇರಿಗಳಿಗೂ ಕೇಸ್ವಾನ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಈಗಾಗಲೇ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‍ಟಾಪ್ ನೀಡಿದ್ದು, ಮುಂದಿನ ದಿನಗಳಲ್ಲಿ ಕಂದಾಯ ನಿರೀಕ್ಷಕರೂ ಸೇರಿದಂತೆ ಎಲ್ಲ ಹಂತದಲ್ಲಿ ಕಂಪ್ಯೂಟರ್ ಒದಗಿಸಲಾಗುವುದು. ಕಂದಾಯ ಇಲಾಖೆಯಿಂದ ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ದಾಖಲೆ ಕೋರುವ ಸಾರ್ವಜನಿಕರಿಗೆ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತಿದೆ. ಜನರು ಕಂದಾಯ ದಾಖಲೆಗಾಗಿ ತಾಲೂಕು ಕಚೇರಿಗೆ ಬರುವಂತಿಲ್ಲ. ನೇರವಾಗಿ ಆನ್‍ಲೈನ್ ಮೂಲಕವೇ ತಮ್ಮ ಮನೆಯಲ್ಲೇ ಕುಳಿತು, ಬೆರಳ ತುದಿಯಲ್ಲಿ ದಾಖಲೆ ಪಡೆಯಬಹುದು ಎಂದರು.
ಫೆ.14ರಂದು 1.10 ಲಕ್ಷ ಜನರಿಗೆ ಹಕ್ಕಪತ್ರ:ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 2.20 ಲಕ್ಷ ಹಕ್ಕುಪತ್ರ ಸಿದ್ಧಪಡಿಸಿದ್ದು, ಕಳೆದ ಮೇ 20ರಂದು ಹೊಸಪೇಟೆಯ ಸಮಾರಂಭದಲ್ಲಿ 1,11,000 ಹಕ್ಕುಪತ್ರ ನೀಡಲಾಗಿತ್ತು. ಫೆ.14ಕ್ಕೆ ಸರ್ಕಾರ 1 ಸಾವಿರ ದಿನ ಪೂರೈಸುವ ಹಿನ್ನೆಲೆಯಲ್ಲಿ ಹಾವೇರಿ ಸಮಾರಂಭದಲ್ಲಿ 1.10 ಲಕ್ಷ ಜನರಿಗೆ ಹಕ್ಕಪತ್ರ ನೀಡಲಾಗುತ್ತದೆ. ದಾವಣಗೆರೆಯಿಂದ ಬರುವ ಫಲಾನುಭವಿಗಳಿಗೆ ಆಸ್ತಿಯ ಪತ್ರ ನೋಂದಣಿ ಮಾಡಿಸಿ, ಸಿದ್ಧತೆ ಮಾಡಿಕೊಂಡು ಜನರನ್ನು ಹಾವೇರಿಗೆ ಕರೆ ತಂದು, ಹಕ್ಕುಪ್ರತ್ರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆಳಿಗೆ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.
- - --6ಕೆಡಿವಿಜಿ3, 4, 5.ಜೆಪಿಜಿ:
ದಾವಣಗೆರೆ ಡಿಸಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.