ತುಂಡಾಗಿ ಬಿದ್ದಿರುವ ವಿವಿಧ ಬಗೆಯ ಕಲಾಕೃತಿಗಳು । ತುಕ್ಕು ಹಿಡಿದ ಆಟಿಕೆ ಸಾಮಗ್ರಿಪ್ರಸಾದ್ ನಗರೆ
ಕರಾವಳಿ ಭಾಗದ ಪ್ರಮುಖ ತಾಲೂಕುಗಳಲ್ಲಿ ಒಂದಾದ ಹೊನ್ನಾವರ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರಲ್ಲೂ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಇಕೋ ಬೀಚ್ ಹೆಚ್ಚು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಡಿಸೆಂಬರ್ ತಿಂಗಳಲ್ಲಿ ಹೆಚ್ಚು ರಶ್ ಆಗುವ ಇಕೋ ಬೀಚ್‌ನ ಪಾರ್ಕ್ ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿರುವುದು ಪ್ರವಾಸಿಗರಲ್ಲಿ ನಿರಾಸೆ ಮೂಡಿಸುತ್ತಿದೆ.
ಕಾಸರಕೋಡಿನಲ್ಲಿರುವ ಇಕೋ ಬೀಚ್‌ಗೆ ಪ್ರವಾಸಿಗರ ದಂಡೆ ಹರಿದು ಬರುತ್ತದೆ. ಅದರಲ್ಲೂ ಇಕೋ ಬೀಚ್‌ಗೆ ಮುಖ್ಯವಾಗಿ ಶಾಲಾ ಮಕ್ಕಳು ಹೆಚ್ಚಾಗಿ ಬರುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳ ಪ್ರವಾಸಗಳು ನಡೆಯುವುದರಿಂದ ಈ ಸಮುದ್ರ ತೀರ ಜಂಗುಳಿಯಿಂದ ಕೂಡಿರುತ್ತದೆ. ಇಲ್ಲಿ ಮಕ್ಕಳಿಗೆ ಆಟವಾಡಲು ಪಾರ್ಕ್ ಸಹ ಇದ್ದು ವಿವಿಧ ಬಗೆಯ ಆಟಿಕೆಗಳು, ಜೋಕಾಲಿ, ಜಾರುಬಂಡಿ ಮುಂತಾದವುಗಳಿವೆ. ಮರದ ನೆರಳಿನಲ್ಲಿ ಆಟವಾಡಲು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.ಸರಿಯಾದ ನಿರ್ವಹಣೆ ಇಲ್ಲ:ಇನ್ನು ಮಕ್ಕಳು ಆಟವಾಡಲು ಇಷ್ಟಪಡುವ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ವಿವಿಧ ಬಗೆಯ ಕಲಾಕೃತಿಗಳು ತುಂಡಾಗಿ ಬಿದ್ದು ವರ್ಷಗಳೆ ಕಳೆದರೂ ಅದನ್ನು ನೋಡುವವರು ಇಲ್ಲ ಎನ್ನುವಂತಾಗಿದೆ. ಜಾರುಬಂಡಿಗಳು ಸರಿಯಾಗಿ ಜಾರುತ್ತಿಲ್ಲ. ಜೋಕಾಲಿಗೆ ಕಟ್ಟಿದ ಹಗ್ಗಗಳು ಗಟ್ಟಿಯಾಗಿ ಇದೆ ಅನ್ನೋದಕ್ಕೆ ಯಾವ ಗ್ಯಾರಂಟಿಯಿಲ್ಲ. ಮಕ್ಕಳು ಆಡುವ ಕುದುರೆ ಮೊದಲಾದ ಆಟಿಕೆಗಳಿಗೆ ಜಂಗು ಹಿಡಿದು ತುಂಡಾಗಿದೆ, ಅದನ್ನು ಸರಿ ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಸ್ನಾನಗೃಹದ ಬಳಿಯಿಲ್ಲ ಸ್ವಚ್ಛತೆ:
ಇನ್ನು ಬಂದಂತಹ ಪ್ರವಾಸಿಗರು ಸಮುದ್ರದಲ್ಲಿ ಮಿಂದೆದ್ದು ಬಂದ ಬಳಿಕ ಸ್ನಾನಕ್ಕೆ ತೆರಳುತ್ತಾರೆ. ಅಲ್ಲಿಯೂ ಸ್ವಚ್ಛತೆ ಮಾಯವಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ನಾನಗೃಹವಿದ್ದರೂ ಬೀಚ್‌ಗೆ ಜನರ ಆಗಮನ ಹೆಚ್ಚಾದಾಗ ಮಹಿಳೆಯರ ಸ್ನಾನಗೃಹ ಇನ್ನಷ್ಟು ಬೇಕಿತ್ತು ಎನಿಸುತ್ತದೆ. ಅಲ್ಲದೆ ಈಗ ಮಹಿಳೆಯರಿಗೆ ಇರುವ ಶವರ್‌ಗಳು ಸ್ನಾನ ಗೃಹದ ಹೊರಭಾಗದಲ್ಲಿಯೂ ಇದೆ. ಇದು ಸಹ ಬದಲಾವಣೆ ಆಗಬೇಕಿದೆ.ಎಂಟ್ರಿ ಫೀಸ್ ಇದ್ದರೂ ನಿರ್ವಹಣೆಗೆ ತತ್ವಾರ:
ಇನ್ನು ಪಾರ್ಕ್‌ನ ನಿರ್ವಹಣೆಯನ್ನು ಮಾಡುವುದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಅರಣ್ಯ ಇಲಾಖೆ ಈ ಪಾರ್ಕ್ ನಿರ್ವಹಣೆಯನ್ನು ಮಾಡುವುದನ್ನೆ ಮರೆತಂತಿದೆ. ಸ್ಥಳೀಯರು ಮತ್ತು ಹೊರಗಿನವರಿಗೆ ಪ್ರತಿಯೊಬ್ಬರಿಗೆ ₹10 ಪ್ರವೇಶ ಶುಲ್ಕ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿನ ಪಾರ್ಕ್ ಮಾತ್ರ ತುಂಬಾ ಹಾಳಾಗುವತ್ತ ಸಾಗುತ್ತಿದೆ. ಪಾರ್ಕ್ ಒಳಗೆ ಮಾಡಿದ ವಿವಿಧ ಬಗೆಯ ಶಿಲ್ಪಗಳು ಮುರಿದು ಬಿದ್ದಿವೆ.ಇಕೋ ಬೀಚ್ ಹಾಗೂ ಇಲ್ಲಿನ ಪಾರ್ಕ್ ಜನರನ್ನು ಆಕರ್ಷಿಸುವಂಥದ್ದಾಗಿದೆ. ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯವರು ಸೇರಿ ಇದನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ಬಹುಶಃ ತಾಲೂಕಿಗೆ ಇನ್ನಷ್ಟು ಜನರು ಪ್ರವಾಸಕ್ಕೆಂದು ಬರುವಂತಾಗುತ್ತದೆ.