ಸಂಪರ್ಕ ಸಭೆ । ಸಂತೆ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರರೈತರು ಆರ್ಥಿಕವಾಗಿ ಮುಂದುವರೆಯಲು ಸರ್ಕಾರದಿಂದ ರೈತರಿಗಾಗಿ ರೂಪಿಸುವ ಯೋಜನೆಗಳ ಬಳಕೆಯನ್ನು ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಬಳಕೆಯಿಂದ ರೈತರು ಆರ್ಥಿಕವಾಗಿ ಮೇಲೆ ಬಂದಲ್ಲಿ ಅವರ ಗಂಡು ಮಕ್ಕಳಿಗೂ ಹೆಣ್ಣು ಕೊಡುತ್ತಾರೆ ಎಂದು ಶಾಸಕ ಎ. ಮಂಜು ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಮಂಗಳವಾರ ಆಯೋಜನೆ ಮಾಡಿದ್ದ ಸಂತೆ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ, ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಹೊಳೆನರಸೀಪುರ ಸಮೀಪದ ಉಚ್ಚನಕೊಪ್ಪಲು ಏತ ನೀರಾವರಿ ಯೋಜನೆಯಿಂದ ಎಷ್ಟು ಕೆರೆ ತುಂಬಿಸಿದ್ದೀರಿ ಎಂದು ಎಂಜಿನಿಯರ್ ಒಬ್ಬರನ್ನು ಪ್ರಶ್ನಿಸಿದಾಗ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ, ಆದರೆ ಜಾಕನಹಳ್ಳಿ ಕೆರೆ ತುಂಬಿಸಿಲ್ಲ ಎಂದರು. ದ್ವೇಷದ ರಾಜಕಾರಣ ಬೇಡ, ಮೊದಲು ಆ ಹಳ್ಳಿಗೆ ನೀರು ಒದಗಿಸುವ ಕೆಲಸ ಮಾಡಿ, ಕಾರಣಗಳು ಬೇಕಿಲ್ಲ, ರೈತರಿಗೆ ಕೈಯಲ್ಲಾಗುವ ಸೇವೆ ಮಾಡೋಣ, ಅವರ ಸೇವೆ ಮಾಡಬೇಕಾದ್ದು ತಮ್ಮ ಜವಾಬ್ದಾರಿ ಎಂದು ತಿಳಿಸಿದರು.ಶಾಸಕ ಎ. ಮಂಜು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾದರ್ ಅವರ ಜತೆ ಮಾತನಾಡುತ್ತ, ‘ಹಳ್ಳಿಮೈಸೂರು ಹೋಬಳಿಯೂ ಹೊಳೆನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಇದ್ದು, ೧೨ ಗ್ರಾಮ ಪಂಚಾಯಿತಿ ಹೋಬಳಿಯಲ್ಲಿದೆ. ಆದರೆ ಹೋಬಳಿಯ ಗ್ರಾಪಂಗಳಿಗೆ ಉದ್ಯೋಗ ಖಾತ್ರಿಯಲ್ಲಿ ವಿವಿಧ ಯೋಜನೆಗಳ ಅನುದಾನ ಎಷ್ಟು ಕೊಟ್ಟಿದ್ದೀರಿ ಅಥವಾ ಬೇರೆ ಗ್ರಾಪಂಗೆ ಎಷ್ಟು ಕೊಟ್ಟಿದ್ದೀರಿ, ಈ ಹೋಬಳಿಗೆ ಕೊಟ್ಟಿಲ್ಲದಿದ್ದರೆ ಏಕೆ ಕೊಟ್ಟಿಲ್ಲ, ಏಕೆ ತಾರತಮ್ಯ ಮಾಡುತ್ತಿದ್ದೀರಿ, ಕಾರಣಗಳು ಏನು ಎಂಬುದನ್ನು ಲಿಖಿತದಲ್ಲಿ ನೀಡಬೇಕು’ ಎಂದು ಹೇಳಿದರು.
ಶಾಸಕರು ಹೋಬಳಿಯಲ್ಲಿ ಎಷ್ಟು ರೈತರ ಬೆಳೆ ವಿಮೆ ಮಾಡಿಸಿದ್ದೀರಿ ಎಂದು ಕೃಷಿ ಇಲಾಖೆ ಅಧಿಕಾರಿ ಸಪ್ನ ಅವರಿಂದ ಮಾಹಿತಿ ಪಡೆದು, ಬೇಸರ ವ್ಯಕ್ತಪಡಿಸಿದರು. ಹೋಬಳಿಯಲ್ಲಿ ನೀರಿನ ಕೊರತೆ ಜತೆಗೆ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ, ಇಂತಹ ಸನ್ನಿವೇಶದಲ್ಲಿ ಬೆಳೆ ವಿಮೆ ಮಾಡಿಸಿ, ರೈತರಿಗೆ ನೆರವಾಗಬೇಕಾದ್ದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಕೆಯ ನುಡಿಗಳನ್ನಾಡಿದ ಶಾಸಕರು, ಪ್ರತಿ ಗ್ರಾಮದ ಎಲ್ಲಾ ಮನೆ ಮನೆಗೂ ಭೇಟಿ ನೀಡಿ ಬೆಳೆ ವಿಮೆ ಮಾಡಿಸಿ, ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿ ನೀಡಬೇಕು. ಸರ್ಕಾರ ನಿಗದಿ ಪಡಿಸಿದ ಬೆಳೆ ವಿಮೆ ಹಣ ಪಾವತಿಸಿ ಎಂದು ರೈತರಿಗೆ ಸಲಹೆ ನೀಡಿದರು.ಗ್ರಾಪಂ ಅಧ್ಯಕ್ಷ ವಿಶ್ವನಾಥ್, ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೌಸರ್ ಅಹಮದ್, ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಮಂಜುನಾಥ್, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ಉಪ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್, ಪಶು ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ತಹಸೀಲ್ದಾರ್ ಎಚ್.ಎಂ. ಶಿವಕುಮಾರ್, ರಾಜಸ್ವ ನಿರೀಕ್ಷಕ ಉದಯ್ ಕುಮಾರ್, ಮುಖಂಡರಾದ ಮುತ್ತಿಗೆ ರಾಜೇಗೌಡ, ಪುಟ್ಟಸೋಮಪ್ಪ, ಶಿವಸ್ವಾಮಿ, ಬಾಲಗಂಗಾಧರ, ಸೋಮಶೇಖರ್, ಸಾಂಬಶಿವಪ್ಪ, ನಂದೀಶ, ಅಣ್ಣಯ್ಯ ಇದ್ದರು.
ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಗ್ರಾಮದ ಸಂತೆ ಮೈದಾನದಲ್ಲಿ ಶಾಸಕ ಎ.ಮಂಜು ಹಳ್ಳಿಸಂತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.