ಸಮೃದ್ದಿ ಸತೃಪ್ತಿಯಡಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ
ದೇಶದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸನ್ನದ್ಧರಾಗಿದ್ದು ತಮ್ಮದೇ ಶೈಲಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನಿಂದ ಗುರುವಾರ ಏರ್ಪಡಿಸಿದ್ದ ಸಮೃದ್ಧಿ ಸತೃಪ್ತಿಯಡಿ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಸೋಲಾರ್ ಟೈಲರಿಂಗ್ ಯಂತ್ರಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.ಜಿಲ್ಲೆಯ ಮಹಿಳೆಯರು ತಮ್ಮಲ್ಲಿ ಅಡಗಿರುವ ಕಲೆ ಹಾಗೂ ಬುದ್ದಿವಂತಿಕೆ ಬಳಸಿ, ಉದ್ಯೋಗ ಸೃಷ್ಟಿಸಿಕೊಂಡು ಸಮಾಜ ದಲ್ಲಿ ಪುರುಷರಿಗೆ ಸಮಾನವಾಗಿ ಕಾಯಕ ಮಾಡುತ್ತಿರುವುದು ಸಂತಸ ಸಂಗತಿ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರು ಹೆಚ್ಚು ಸಾಧನೆ ಮಾಡಿದ್ದಾರೆ ಎಂದರು.
ಆಧುನಿಕತೆ ಬೆಳೆದಂತೆ ಸಮಾಜದ ಪ್ರತಿ ಕ್ಷೇತ್ರಗಳಲ್ಲಿ ಹೆಣ್ಣು ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗುಡಿಕೈಗಾರಿಕೆ, ಟೈಲರಿಂಗ್, ಸಿರಿಧಾನ್ಯಗಳ ತಯಾರಿಕೆ ಸೇರಿದಂತೆ ಆಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೇವಲ ಅಂಕಗಳಿಸಿದರೆ ಸಾಲದು ಬದುಕಿನ ಹಾದಿ ತಿಳಿಯುವಂಥ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಡಿ ಕೈಗಾರಿಕೆಯಲ್ಲಿ ಯಶಸ್ಸು ಗಳಿಸಿರುವ ಮಹಿಳೆಯರನ್ನು ಕೆಲವು ಕಂಪನಿಗಳು ಗುರುತಿಸಿ ಪ್ರಚಾರಕ್ಕೆ ಮುಂದಾಗುವ ಸಾಧ್ಯತೆಯಿದೆ. ಹೀಗಾಗಿ ಮಹಿಳೆಯರು ಧೃತಿಗೆಡದೇ ಪ್ರಕೃತಿಗೆ ಪೂರಕವಾದ ಕಾಯಕವನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು. ಅಲ್ಲದೇ ಕಂಪನಿಗಳಿಂದ ದೊರೆಯುವ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಅನೇಕ ದೊಡ್ಡ ಕಂಪನಿಗಳು ಅಲ್ಪಪ್ರಮಾಣ ಹೂಡಿಕೆಯಿಂದ ಪ್ರಾರಂಭಿಸಿ ಇಂದು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿರುವುದು ಸಾಮಾನ್ಯ ವಿಚಾರವಲ್ಲ. ಹೀಗಾಗಿ ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಮಹಿಳೆಯರು ಸ್ವಾಲವಂಬಿ ಬದುಕಿಗಾಗಿ ಮುಂದಾದರೆ ಸರ್ಕಾರದಿಂದ ಸಾಲ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಉಪ ಮಹಾಪ್ರಬಂಧಕ ಗುರುಪ್ರಕಾಶ್ ಶೆಟ್ಟಿ ಮಾತನಾಡಿ, ನಾಡಿನ ಜನತೆ ಸ್ವಾಲವಂಬಿ ಬದುಕಿಗಾಗಿ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ, ಸೌರ ಕುಲುಮೆ, ಹಾಲು ಕರೆಯುವ ಯಂತ್ರ, ಸೌರಶಕ್ತಿ ಚಾಲಿತ ತಂಪುಕಾರಕ, ಪ್ರಿಂಟರ್, ರೊಟ್ಟಿ ಲಟ್ಟಿಸುವ ಯಂತ್ರ, ಕುಂಬಾರಿಕೆಗೆ ಸೌರಚಕ್ರ, ಹಗ್ಗ ಹೊಸೆಯುವ ಯಂತ್ರ, ಹಪ್ಪಳ ಒತ್ತುವ ಯಂತ್ರ ಸೇರಿದಂತೆ ಅನೇಕ ವ್ಯವಸ್ಥೆಯನ್ನು ಸಂಸ್ಥೆಯಿಂದ ಕಲ್ಪಿಸಿಕೊಡಲಾಗಿದೆ ಎಂದರು.
16 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮೃದ್ಧಿ ಸಂತೃಪ್ತಿಯಡಿ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗುರುವಾರ ಸೋಲಾರ್ ಟೈಲರಿಂಗ್ ಯಂತ್ರ ಚಲಿಸುವ ಮೂಲಕ ಉದ್ಘಾಟಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಗುರುಪ್ರಕಾಶ್ ಶೆಟ್ಟಿ ಇದ್ದರು.