ಸತೀಶ ಜಾರಕಿಹೊಳಿ ಅವರ ಮನೆಗೆ ಇಡಿ ದಾಳಿ : ಎರಡು ಟ್ರಂಕ್‌ಗಳಲ್ಲಿ ಹಣ ಬ್ಯಾಂಕ್‌ಗೆ

KannadaprabhaNewsNetwork |  
Published : Sep 11, 2026, 04:15 AM IST
Money

ಸಾರಾಂಶ

ಗೋಕಾಕ ನಗರದಲ್ಲಿರುವ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ ಶೋಧ ಕಾರ್ಯಾಚರಣೆಯಲ್ಲಿ ಸೀಜ್ ಮಾಡಲಾಗಿದೆ ಎನ್ನಲಾದ ಅಪಾರ ಪ್ರಮಾಣದ ಹಣವನ್ನು ಅಧಿಕಾರಿಗಳು ಬ್ಯಾಂಕ್‌ಗೆ ರವಾನಿಸಿದ್ದಾರೆ.

ಬೆಳಗಾವಿ : ಗೋಕಾಕ ನಗರದಲ್ಲಿರುವ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ ಶೋಧ ಕಾರ್ಯಾಚರಣೆಯಲ್ಲಿ ಸೀಜ್ ಮಾಡಲಾಗಿದೆ ಎನ್ನಲಾದ ಅಪಾರ ಪ್ರಮಾಣದ ಹಣವನ್ನು ಅಧಿಕಾರಿಗಳು ಬ್ಯಾಂಕ್‌ಗೆ ರವಾನಿಸಿದ್ದಾರೆ.

ಗೋಕಾಕಿನ ಇಂಡಿಯನ್ ಬ್ಯಾಂಕ್‌ಗೆ ಹಣವನ್ನು ಹಸ್ತಾಂತರಿಸಲಾಗಿದ್ದು, ಬೊಲೆರೋ ವಾಹನದಲ್ಲಿ ತರಲಾಗಿದ್ದ ಎರಡು ಟ್ರಂಕ್‌ಗಳಲ್ಲಿ ಹಣವನ್ನು ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಮಾಧ್ಯಮದವರ ಕಣ್ಣತಪ್ಪಿಸಿ, ಇಂಡಿಯನ್ ಬ್ಯಾಂಕ್‌ಗೆ ಸೇರಿದ ವಾಹನದಲ್ಲಿ ಹಣವಿದ್ದ ಟ್ರಂಕ್‌ಗಳನ್ನು ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ ಹಣವನ್ನು ಬ್ಯಾಂಕ್‌ಗೆ ರವಾನಿಸಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸೀಜ್ ಮಾಡಲಾದ ಹಣದ ಪ್ರಮಾಣ ಎಷ್ಟು ಎಂಬುದು ಇನ್ನಷ್ಟೇ ಅಧಿಕೃತವಾಗಿ ತಿಳಿದುಬರಬೇಕಿದೆ.ಇದೇ ವೇಳೆ ಸಚಿವರ ಪುತ್ರ ರಾಹುಲ್ ಜಾರಕಿಹೊಳಿ ಅವರ ಹೇಳಿಕೆಯನ್ನು ಇಡಿ ಅಧಿಕಾರಿಗಳು ದಾಖಲಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರ ಹೇಳಿಕೆ ಪೂರ್ಣಗೊಂಡ ಬಳಿಕ ಗೋಕಾಕಿನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯನ್ನು ಅಂತ್ಯಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಹಣದ ಮೂಲವೇನು, ಯಾವ ದಾಖಲೆಗಳ ಆಧಾರದ ಮೇಲೆ ಹಣವನ್ನು ಸೀಜ್ ಮಾಡಲಾಗಿದೆ ಮತ್ತು ತನಿಖೆಯಲ್ಲಿ ಈ ಹಣದ ಪಾತ್ರವೇನು ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಮಂಜುನಾಥ ಮನೆಯಲ್ಲಿ 36 ಗಂಟೆ ಇಡಿ ಶೋಧ ಅಂತ್ಯ

ಸಚಿವ ಸತೀಶ ಜಾರಕಿಹೊಳಿ ಅವರ ಬಾಮೈದ , ಅಬಕಾರಿ ಇಲಾಖೆ ಅಪರ ಆಯುಕ್ತ ವೈ.ಮಂಜುನಾಥ ಅ‍ವರ ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಮನೆಯಲ್ಲಿ ನಡೆದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸತತ 36 ಗಂಟೆಗಳ ಶೋಧ ಕಾರ್ಯಾಚರಣೆ ಗುರುವಾರ ಅಂತ್ಯಗೊಂಡಿದೆ.ಬುಧವಾರ ಬೆಳಗ್ಗೆ 6 ಗಂಟೆಗೆ ಮಂಜುನಾಥ ಅವರ ನಿವಾಸಕ್ಕೆ ಪ್ರವೇಶಿಸಿದ್ದ ಇಡಿ ಅಧಿಕಾರಿಗಳು ಸುದೀರ್ಘವಾಗಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ವೈ. ಮಂಜುನಾಥ ಹಾಗೂ ಅವರ ಪತ್ನಿಯನ್ನು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. 36 ಗಂಟೆಗಳ ಬಳಿಕ ಶೋಧ ಕಾರ್ಯಾಚರಣೆ ಪೂರ್ಣಗೊಳಿಸಿದ ಅಧಿಕಾರಿಗಳ ತಂಡ ನಿವಾಸದಿಂದ ಹೊರಟಿತು.

ದಾಖಲೆಗಳನ್ನು ವಶಕ್ಕೆ

ಶೋಧದ ವೇಳೆ ದೊರೆತ ಕೆಲವು ದಾಖಲೆಗಳನ್ನು ಅಧಿಕಾರಿಗಳು ತಮ್ಮೊಂದಿಗೆ ತೆಗೆದುಕೊಂಡು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಯಾವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಅವುಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.ಇದೇ ವೇಳೆ ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ವೈ. ಮಂಜುನಾಥ್ ಅವರಿಗೆ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ 36 ಗಂಟೆಗಳ ಶೋಧ ಅಂತ್ಯಗೊಂಡಿದ್ದರೂ ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.ಸತೀಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಬೆನ್ನಲ್ಲೇ, ಅವರ ಕುಟುಂಬದ ಆಪ್ತರು ಹಾಗೂ ಸಂಬಂಧಿಕರಿಗೆ ಸೇರಿದ ಸ್ಥಳಗಳಲ್ಲೂ ದಾಖಲೆಗಳ ಪರಿಶೀಲನೆ ನಡೆದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಾಳೆಯಿಂದ ಬೃಹನ್ಮಠದ ಗುರುಪಟ್ಟಾಧಿಕಾರ ಮಹೋತ್ಸವ
ಕೋರೆ ಸಕ್ಕರೆ ಕಾರ್ಖಾನೆ ಡಿಸ್ಟಿಲರಿ ಘಟಕಕ್ಕೆ ಗೋಲ್ಡ್ ಪ್ರಶಸ್ತಿ