ಮಕ್ಕಳನ್ನು ದುಡಿಮೆಗೆ ಬಳಸದೆ ಶಿಕ್ಷಣ ನೀಡಿ

KannadaprabhaNewsNetwork | Published : Jun 17, 2024 1:32 AM

ಸಾರಾಂಶ

ಪೋಕ್ಸೋ ಕಾಯ್ದೆಯಡಿ ರಾಜಕಾರಣಿಗಳು, ಸ್ವಾಮೀಜಿಗಳು ಸಿಲುಕಿದ್ದು ಜಾಮೀನು ಸಿಗದೆ ಜೈಲಿನಲ್ಲಿ ಕೊಳೆಯುವಂತಾಗಿದೆ. ತಂದೆ ತಾಯಂದಿನ ಒಪ್ಪಿಗೆ ಮೇರೆಗೆ ಬಾಲ್ಯವಿವಾಹ ಮಾಡಿದರೆ ಕೇಸು ದಾಖಲಾಗುತ್ತದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಾರ್ಖಾನೆ ಹಾಗೂ ಯಾವುದೇ ಉದ್ಯೋಗದಲ್ಲಿ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಪರಾಧವಾಗಿದ್ದು ಓದುವ ವಯಸ್ಸಿನಲ್ಲಿ ದುಡಿಮೆಗೆ ಬಳಸಿಕೊಳ್ಳದೆ ಶಿಕ್ಷಣ ನೀಡಿ ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಪೋಷಕರು ಪ್ರೋತ್ಸಾಹಿಸಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೇಶವಮೂರ್ತಿ.ಬಿ ತಿಳಿಸಿದರು. ಪಟ್ಟಣದ ಬಂಗಾರಪೇಟೆ-ಕೋಲಾರ ಮುಖ್ಯರಸ್ತೆಯಲ್ಲಿರುವ ಎಸ್.ಜಿ ಕೋಟೆ ಹತ್ತಿರದ ಅರಿಹಂತ್ ಎಕ್ಸ್‌ಪೋರ್ಟ್ ಗಾರ್ಮೆಂಟ್ಸ್‌ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರವರ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಧಿಕಾರದ ನೆರವು ಪಡೆಯಿರಿ

ರಾಜ್ಯದ ಪ್ರತಿಯೊಂದು ನ್ಯಾಯಾಲಯದಲ್ಲೂ ಉಚಿತ ಕಾನೂನು ಸೇವಾ ಪ್ರಾಧಿಕಾರವಿದ್ದು ಎಲ್ಲಾ ಸಾರ್ವಜನಿಕರು ಕಛೇರಿಗೆ ಬಂದು ಅರ್ಜಿ ಸಲ್ಲಿಸುವುದರಿಂದ ಉಚಿತ ಕಾನೂನು ಸಲಹೆಯನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ ಪೋಕ್ಸೋದಡಿ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಿರುವುದು ಪ್ರತಿನಿತ್ಯ ನೋಡುತ್ತಿದ್ದೇವೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಯಲು ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ಪೋಕ್ಸೋ ಕಾಯ್ದೆಯಡಿ ರಾಜಕಾರಣಿಗಳು, ಸ್ವಾಮೀಜಿಗಳು ಸಿಲುಕಿದ್ದು ಜಾಮೀನು ಸಿಗದೆ ಜೈಲಿನಲ್ಲಿ ಕೊಳೆಯುವಂತಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ತಂದೆ ತಾಯಂದಿನ ಒಪ್ಪಿಗೆ ಮೇರೆಗೆ ಮದುವೆ ಮಾಡಿದರೂ ಬಾಲ್ಯವಿವಾಹ ವಿರೋಧಿ ಕಾಯ್ದೆಯಡಿ ಕೇಸು ದಾಖಲಾಗುತ್ತದೆ ಎಂದರುಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಧಯದ್ಯಕ್ಷರಾದ ಎಸ್.ನಾರಾಯಣಪ್ಪ ಮಾತನಾಡಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋದಿ ದಿನವಾದ ಇಂದು ಎಲ್ಲಾ ಕಾರ್ಮಿಕರಿಗೆ ಬಾಲಕಾರ್ಮಿಕ ಪದ್ದತಿ ಕುರಿತು ಅರಿವು ಮೂಡಿಸಬೇಕು ಎಂದರು.

ಬಾಲ್ಯವನ್ನು ಕಸಿದುಕೊಳ್ಳಬೇಡಿ

ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು ಇದನ್ನು ತಡೆಯಬೇಕು,ಬಾಲಕಾರ್ಮಿಕ ಪದ್ಧತಿ ಮಕ್ಕಳ ಮೇಲೆ ಎಸಗುವ ದೌರ್ಜನ್ಯ, ಇದನ್ನು ವಿರೋಧಿಸಲೇಬೇಕು. ಉತ್ತಮ ಬಾಲ್ಯ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಓದುವ, ಆಟವಾಡುವ ವಯಸ್ಸಿನಲ್ಲಿ ದುಡಿಮೆ ಮಗುವಿನ ಬಾಲ್ಯದ ಹಕ್ಕುಗಳನ್ನು ಕಸಿದುಕೊಳ್ಳುತ್ತದೆಂದರು.

ಈ ಸಂಧರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಬಿ.ಎಂ. ಆನಂದ್, ಪ್ಯಾನಲ್ ವಕೀಲರಾದ ರಮೇಶ್, ಪಂಕಜ, ಕಿರಣ್‌ಕುಮಾರ್ ಜಿ ಇಂಗಳೆ, ಕಮಲಿ, ಮತ್ತು ವಕೀಲರು ಹಾಗೂ ಕಾರ್ಖಾನೆಯ ಕಾರ್ಮಿಕರು ಹಾಜರಿದ್ದರು.

Share this article