ಶೋಷಿತರು ಪ್ರಜಾಸತ್ತಾತ್ಮಕ ಚಳವಳಿ ರೂಪಿಸಲಿ

KannadaprabhaNewsNetwork |  
Published : Jun 17, 2024, 01:32 AM IST
3 | Kannada Prabha

ಸಾರಾಂಶ

ಸಂವಿಧಾನ, ಮನುಸ್ಮೃತಿ ಸಂಘರ್ಷದ ನಡುವೆಯೇ ಶೋಷಿತರು, ದಮನಿತರು, ಅಲ್ಪಸಂಖ್ಯಾತರು ಸೇರಿ ಪ್ರಜಾಸತ್ತಾತ್ಮಕ ಚಳವಳಿ ರೂಪಿಸಬೇಕು ಎಂದು ಸಾಮಾಜಿಕ ಚಿಂತಕ ಶಿವಸುಂದರ್‌ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನ, ಮನುಸ್ಮೃತಿ ಸಂಘರ್ಷದ ನಡುವೆಯೇ ಶೋಷಿತರು, ದಮನಿತರು, ಅಲ್ಪಸಂಖ್ಯಾತರು ಸೇರಿ ಪ್ರಜಾಸತ್ತಾತ್ಮಕ ಚಳವಳಿ ರೂಪಿಸಬೇಕು ಎಂದು ಸಾಮಾಜಿಕ ಚಿಂತಕ ಶಿವಸುಂದರ್‌ ಕರೆ ನೀಡಿದರು.

ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ ಪ್ರೊ.ಕೆ. ರಾಮದಾಸ್‌ ನೆನಪಿನಲ್ಲಿ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜಕಾರಣ ನೈತಿಕ ನೆಲೆಗಟ್ಟು ಮತ್ತು ಪ್ರಸ್ತುತ ರಾಜಕಾರಣ ಕುರಿತು ವಿಷಯ ಮಂಡಿಸಿ, ಮಾತನಾಡಿದ ಅವರು, ಪ್ರಸ್ತುತ ನೈತಿಕತೆ ಮತ್ತು ಪ್ರಾಮಾಣಿಕತೆ ಮುಖ್ಯ. ಆ ಮೂಲಕ ಸಂವಿಧಾನ ಉಳಿಸುವುದು ಮುಖ್ಯ ಎಂದರು.

ಮೋದಿ ಪರ ಇರುವವರೆಲ್ಲಾ ರಾಷ್ಟ್ರಭಕ್ತರು. ವಿರುದ್ಧ ಇರುವವರೆಲ್ಲಾ ರಾಷ್ಟ್ರದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಮುಸ್ಲಿಂ ದ್ವೇಷ ಹರಡಲಾಗುತ್ತದೆ ಎಂದು ಕಿಡಿಕಾರಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನಾದೇಶ ಮೋದಿಯವರ ವಿರುದ್ಧವಾಗಿದೆ. ತಾಂತ್ರಿಕವಾಗಿ ಅವರು ಸರ್ಕಾರ ರಚಿಸಿರಬಹುದು. ನೈತಿಕತೆ ಇದ್ದಲ್ಲಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಾವು ಭ್ರಷ್ಟರಲ್ಲಿ ಕಡಿಮೆ ಭ್ರಷ್ಟರನ್ನು ಅಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇದೆ. ನಾವು ಕಾಂಗ್ರೆಸ್‌ ಅನ್ನು ಪ್ರೀತಿಯಿಂದ ಅಪ್ಪಿರುವುದಲ್ಲ, ಬಿಜೆಪಿಗೆ ಮತ್ತೊಂದು ಪರ್ಯಾಯ ಇಲ್ಲದಿರುವುದರಿಂದ ಕಾಂಗ್ರೆಸ್‌ ಬೆಂಬಲಿಸಿದ್ದೇವೆ. ಕಾಂಗ್ರೆಸ್‌ ವಿಚಾರವೇ ಬೇರೆ. ಜನಪರ ವಿಚಾರವೇ ಬೇರೆ ಎಂದರು.

ಗ್ಯಾರಂಟಿ ಯೋಜನೆಗಳು ಸಮಾಜವಾದವಲ್ಲ:

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಸಮಾಜವಾದವಲ್ಲ. ಅವಲಂಬನೆ ಇಲ್ಲದಂತೆ ಬದುಕುವುದನ್ನು ರೂಪಿಸುವುದು ಸಮಾಜವಾದ ಎಂದು ಅವರು ವ್ಯಾಖ್ಯಾನಿಸಿದರು.

ಈ ಯೋಜನೆಗಳಿಗೆ 56 ಸಾವಿರ ಕೋಟಿ ರು. ಬೇಕಾಗುತ್ತದೆ. ಇದಕ್ಕೆ ಬೇಕಾದ 16 ಸಾವಿರ ಕೋಟಿ ರು. ಹೊಂದಾಣಿಕೆ ಮಾಡಬಹುದು. ಉಳಿಕೆ 40 ಸಾವಿರ ಕೋಟಿ ರು. ತರುವುದು ಎಲ್ಲಿಂದ? ಎಂದು ಯೋಚಿಸಬೇಕು. ಇದಕ್ಕೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸಿದೆ. ಇದರಿಂದ ಎಲ್ಲಾ ಬೆಲೆಗಳು ಏರಿಕೆಯಾಗುತ್ತವೆ ಎಂದರು.

ಅಕಾಡೆಮಿಗಳು ಶಾಖಾ ಕಚೇರಿಗಳಲ್ಲ:

ರಾಜ್ಯದ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರು ಕೆಪಿಸಿಸಿ ಕಚೇರಿಗೆ ಹೋಗಿ ಅಧ್ಯಕ್ಷರೊಂದಿಗೆ ಸಭೆ ನಡೆಸಿರುವುದನ್ನು ತೀವ್ರವಾಗಿ ಟೀಕಿಸಿದ ಅವರು, ಅಕಾಡೆಮಿಗಳು ಪಕ್ಷದ ಶಾಖಾ ಕಚೇರಿಗಳಲ್ಲ ಎಂದರು.

ಅಂಕಣಕಾರ ನಾ. ದಿವಾಕರ ಅವರು ರಾಜಕಾರಣ ಮತ್ತು ಪ್ರಗತಿಪರರು ಕುರಿತು ವಿಚಾರ ಮಂಡಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಹಾರಾಜ ಕಾಲೇಜಿನ ಅಧ್ಯಾಪಕಿ ಡಾ.ಬಿ.ಎಸ್‌. ದಿನಮಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ಟ್ರಸ್ಟ್‌ ಅಧ್ಯಕ್ಷ ಕೃಷ್ಣ ಜನಮನ ಸ್ವಾಗತಿಸಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ