ಮೌಢ್ಯತೆಯಿಲ್ಲದ ವೈಚಾರಿಕ ನೆಲೆಯ ಪ್ರಗತಿಯೇ ನೈಜ ಅಭಿವೃದ್ಧಿ

KannadaprabhaNewsNetwork | Published : Jun 17, 2024 1:32 AM

ಸಾರಾಂಶ

ಮೌಢ್ಯತೆಯಿಲ್ಲದ ವೈಚಾರಿಕ ನೆಲೆಯ ಪ್ರಗತಿಯೇ ನಿಜವಾದ ಅಭಿವೃದ್ಧಿಯ ಮಾನದಂಡ

ಬಳ್ಳಾರಿ: ರಸ್ತೆಗಳು, ಶಾಲೆ, ಸೇತುವೆಗಳ ನಿರ್ಮಾಣ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ, ತಲಾ ಆದಾಯದ ಏರಿಕೆ ಇತ್ಯಾದಿಗಳು ಯಾವುದೇ ದೇಶ ಅಥವಾ ಪ್ರದೇಶದ ಅಭಿವೃದ್ಧಿಯ ಮಾನದಂಡವಲ್ಲ. ಮೌಢ್ಯತೆಯಿಲ್ಲದ ವೈಚಾರಿಕ ನೆಲೆಯ ಪ್ರಗತಿಯೇ ನಿಜವಾದ ಅಭಿವೃದ್ಧಿಯ ಮಾನದಂಡ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತಾಶ್ರಯದಲ್ಲಿ ‘ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ನೀತಿ 2016 (ಪರಿಷ್ಕರಣೆ-2023)’ ಕುರಿತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಸರ್ಕಾರಿ, ಅನುದಾನಿತ ಪ್ರೌಢಶಾಲೆಯ ಮುಖ್ಯ ಗುರುಗಳಿಗೆ ಜಿಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚಾಗಿವೆ. ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು ಬಹಳ ಅಗತ್ಯವಿದೆ. ಮಕ್ಕಳ ರಕ್ಷಣಾ ಸಮಿತಿ ಸೇರಿದಂತೆ ಸಂಬಂಧಿಸಿದ ಇಲಾಖೆ ಸಿಬ್ಬಂದಿ ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ, ಬಾಲ್ಯವಿವಾಹವು ಸಾಮಾಜಿಕ ಪಿಡುಗು. ಹೆಣ್ಣು ಮಕ್ಕಳ ಮೇಲೆ ಮಾನಸಿಕ ಒತ್ತಡ ಮತ್ತು ದೈಹಿಕವಾಗಿ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಶಿಕ್ಷಕರು ಮಹತ್ವದ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು ಪ್ರಾಂಶುಪಾಲರು ಹಾಗೂ ಮುಖ್ಯಗುರುಗಳಿಗೆ ಹಮ್ಮಿಕೊಂಡಿರುವ ಕಾರ್ಯಾಗಾರದಿಂದ ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್, ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡದಿರುವ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಸಮಿತಿ ರಚನೆ ವಿಚಾರದಲ್ಲಿ ನಿಷ್ಕಾಳಜಿ ತೋರುವುದು ಸರಿಯಲ್ಲ ಎಂದು ಹೇಳಿದರು.

ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಅರಿತುಕೊಂಡು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಒದಗಿಸಬೇಕು. ಸರ್ಕಾದ ಆದೇಶದಂತೆ ಪ್ರತಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.

ಬಳಿಕ ಕೊಪ್ಪಳ ಯೂನಿಸೇಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ನೀತಿ 2016 (ಪರಿಷ್ಕರಣೆ-2023)’ ಕುರಿತು ಮಾಹಿತಿ ನೀಡಿದರು.

ಡಿಡಿಪಿಐ ಬಿ.ಉಮಾದೇವಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಲಾಲಪ್ಪ ಎ.ಕೆ. ಸಿಬ್ಬಂದಿ ಸೇರಿದಂತೆ ಕಾಲೇಜು ಪ್ರಾಂಶುಪಾಲರು, ಶಾಲಾ ಮುಖ್ಯೊಪಾಧ್ಯಾಯರು ಉಪಸ್ಥಿತರಿದ್ದರು.

Share this article