ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶಿವಶಕ್ತಿ ಸಮುದಾಯಭವನದಲ್ಲಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ 11ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಸೋಮವಾರ ನಡೆದ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕೇವಲ ವಿದ್ಯಾರ್ಥಿಗಳ ಸರ್ಟಿಫಿಕೇಟ್ ಆಗಿ ಉಳಿಯಬಾರದು. ಶಿಕ್ಷಣ ಎಂದರೆ ಬಡವರ ನಿರ್ಗತಿಕರ ಕಣ್ಣೀರು ಒರೆಸುವ ರಕ್ಷಾ ಕವಚವಾಗಬೇಕು. ವಿದ್ಯಾರ್ಥಿಗಳ ಉತ್ತಮ ನಡವಳಿಕೆಯೇ ನಿಜವಾದ ಶಿಕ್ಷಣವಾಗುತ್ತದೆ ಎಂದರು.ಶಿಕ್ಷಣ ವಿದ್ಯಾರ್ಥಿಗಳಿಗೆ ಬದುಕು ಕಲಿಸುವ ಜೊತೆಗೆ ಆತ್ಮವಿಶ್ವಾಸ ತುಂಬುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಹುಟ್ಟು ಹಾಕುತ್ತದೆ. ಸಾಮಾನ್ಯ ಮನುಷ್ಯವನ್ನು ಅಸಾಮಾನ್ಯರನ್ನಾಗಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದರು.
ಶಿಕ್ಷಣ ಮತ್ತು ಸಂಸ್ಕಾರ ಒಟ್ಟಿಗೆ ಸಾಗಿದರೆ ಮಾತ್ರ ವಿದ್ಯಾರ್ಥಿಗಳ ಬದುಕು ಮುಗಿಲೆತ್ತರಕ್ಕೆ ಹೋಗುತ್ತದೆ. ಮನಸ್ಸಿಟ್ಟು ಕಲಿತ ಅಕ್ಷರ ಬೆವರು ಸುರಿಸಿ ದುಡಿದ ಹಣ ಭಕ್ತಿಯಿಂದ ಮಾಡಿದ ಪೂಜೆ ಎಂದಿಗೂ ವ್ಯರ್ಥವಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಎಂದಿಗೂ ಕುಗ್ಗಬಾರದು. ಅದರಲ್ಲಿಯೂ ಮುಖ್ಯವಾಗಿ ಕೀಳರಿಮೆ ಇರಬಾರದು ಎಂದರು.
ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಸಾಧನೆ ಎಂಬುದು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಒಂದು ಗುರಿ ಕನಸಿನೊಂದಿಗೆ ದೃಢ ಸಂಕಲ್ಪ ಮಾಡಿದರೆ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದರು.
ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ಇದ್ದೇ ಇರುತ್ತದೆ. ಇದಕ್ಕೆ ನಿರಂತರ ಕಲಿಕೆಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರ್‌ಗೆ ದಾಸರಾಗಿದ್ದಾರೆ. ಕಂಪ್ಯೂಟರ್ ಜ್ಞಾನ ಬೇಕು ನಿಜ. ಆದರೆ, ಜ್ಞಾನ ಮತ್ತು ಅಜ್ಞಾನಕ್ಕೆ ಬಹಳಷ್ಟು ವ್ಯತ್ಯಾಸವಿದೆ. ಜ್ಞಾನಿಗಳ ಸಂಖ್ಯೆ ಹೆಚ್ಚಾಗಬೇಕು. ಜ್ಞಾನದ ಜೊತೆ ಅಜ್ಞಾನವನ್ನು ಬೆಳೆಸಿಕೊಂಡರೆ ಮನಸ್ಸು ಹುಚ್ಚು ಕುದುರೆಯಾಗುತ್ತದೆ ಎಂದು ಎಚ್ಚರಿಸಿದರು.
ಬೊಬೈಲ್‌ನಿಂದ ದೂರ ಉಳಿದು ಪುಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಪಠ್ಯ ಪುಸ್ತಕದ ಜೊತೆಗೆ ಕೌಶಲ್ಯಾಭಿವೃದ್ಧಿ ತರಗತಿಗಳಲ್ಲಿ ಭಾಗವಹಿಸಬೇಕು. ಕಥೆ ಕಾದಂಬರಿ ಮತ್ತು ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಬದುಕಿನ ಭರವಸೆ ಮೂಡುತ್ತದೆ ಎಂದರು.
ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತುಪ್ರದರ್ಶನದ ಮೂಲಕ ಯುವಪೀಳಿಗೆಯನ್ನು ಪ್ರೋತ್ಸಾಹಿಸಿ ಅವರ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಮೂಲಕ ಯುವ ಸಮುದಾಯವನ್ನು ಭವಿಷ್ಯದ ವಿಜ್ಞಾನಿಗಳು ಹಾಗೂ ಮನುಷ್ಯತ್ವವುಳ್ಳರನ್ನಾಗಿಸಬೇಕೆಂಬ ಚಿಂತನೆ ಈ ಮೇಳದ ಉದ್ದೇಶವಾಗಿದೆ ಎಂದರು.