ಶಿಕ್ಷಣ, ಕಲಿಕೆ ಜೀವನ ಭಾಗಗಳು: ಸಮರ್ಥ ಶಾಮನೂರು

KannadaprabhaNewsNetwork |  
Published : Aug 03, 2026, 01:30 AM IST
ಸಾಕಿದ ಆನೆ ದಾಳಿಗೆ ಒಳಗಾದ ಲಕ್ಕು ಪಟಕಾರೆ | Kannada Prabha

ಸಾರಾಂಶ

ಜೀವನದಲ್ಲಿ ಶಿಕ್ಷಣ ಮತ್ತು ಕಲಿಕೆ ಎಂಬುದಕ್ಕೆ ಕೊನೆ ಇಲ್ಲವಾಗಿದ್ದು, ಇವು ನಮ್ಮ ಜೀವನದ ನಿರಂತರ ಪಯಣವಾಗಿವೆ. ಇಡೀ ಜೀವನವೇ ಕಲಿಕೆಯ ಭಾಗವಾಗಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಎಂ. ಶಾಮನೂರು ತಿಳಿಸಿದ್ದಾರೆ.

- ಬಾಪೂಜಿ ಸಮುದಾಯ ಭವನದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಸಮಾರಂಭ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜೀವನದಲ್ಲಿ ಶಿಕ್ಷಣ ಮತ್ತು ಕಲಿಕೆ ಎಂಬುದಕ್ಕೆ ಕೊನೆ ಇಲ್ಲವಾಗಿದ್ದು, ಇವು ನಮ್ಮ ಜೀವನದ ನಿರಂತರ ಪಯಣವಾಗಿವೆ. ಇಡೀ ಜೀವನವೇ ಕಲಿಕೆಯ ಭಾಗವಾಗಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಎಂ. ಶಾಮನೂರು ತಿಳಿಸಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಭಾನುವಾರ ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲದಕ್ಕೂ ಒಂದು ಸಮಯ ಎಂಬುದು ಇರುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ನಂತರ ಉದ್ಯೋಗ, ಮದುವೆ ಅಷ್ಟೇ ಜೀವನವೂ ಇಲ್ಲ. ಅದರೊಳಗೆ ಸಿಕ್ಕಿಕೊಳ್ಳಬಾರದು. ಲಕ್ಷ್ಮಿದೇವಿಯ ಪೂಜೆ ಎಲ್ಲರೂ ಮಾಡಲು ಉತ್ಸಾಹ ತೋರುತ್ತಾರೆ. ಆದರೆ, ನಮಗೆ ವಿದ್ಯೆ, ಬುದ್ಧಿ ನೀಡುವ ಸರಸ್ವತಿಯನ್ನು ಅಷ್ಟಾಗಿ ಪೂಜಿಸಲ್ಲ. ಲಕ್ಷ್ಮೀದೇವಿ ಜೊತೆಗೆ ಜ್ಞಾನದೇವತೆ ಸರಸ್ವತಿಯನ್ನೂ ಪೂಜಿಸಬೇಕು. ಸರಸ್ವತಿ ಆಶೀರ್ವಾದ ನಮ್ಮನ್ನು ಮುನ್ನೆಡೆಸಲು ನೆರವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜದ ಜಿಲ್ಲಾಧ್ಯಕ್ಷ, ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿ, 23 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ಇದರ ಉದ್ದೇಶ ನಮ್ಮ ಸಮಾಜದ ಮಕ್ಕಳು ಶೈಕ್ಷಣಿಕ ಸಾಧನೆ ಮಾಡಬೇಕೆಂಬುದಾಗಿದೆ. ಈಚಿನ ದಿನಗಳಲ್ಲಿ ಸಾಕಷ್ಟು ಅನುಕೂಲಗಳಿವೆ. ತಂದೆ-ತಾಯಿಯ ಜೊತೆಗೆ ಸರ್ಕಾರದ ಪ್ರೋತ್ಸಾಹವಿದೆ. ತಾಂತ್ರಿಕತೆ ಬಹಳ ಮುಂದುವರಿದಿದೆ. ಈ ಎಲ್ಲದರ ಸದುಪಯೋಗ ಪಡೆದು, ಸಮಾಜದ ಮಕ್ಕಳು ಸಾಧನೆ ಮಾಡಬೇಕು ಎಂದು ಹೇಳಿದರು.

ಬರೀ ಸರ್ಕಾರದ ಹುದ್ದೆ ನೆಚ್ಚಿಕೊಂಡು ಕೂಡದೇ, ಯುವ ಉದ್ಯಮಿಗಳಾಗಬೇಕು. ನಾಲ್ಕಾರು ಜನರಿಗೆ ಉದ್ಯೋಗ ನೀಡುವಂತಹ ಉದ್ಯೋಗದಾತರು ನೀವಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆ ಪೋಷಿಸುವ, ಪ್ರೋತ್ಸಾಹಿಸುವ ಕೆಲಸ ಹೆತ್ತವರು, ಸಮಾಜದಿಂದ ಆಗಬೇಕು. ಪಂಚಮಸಾಲಿ ಗಣ್ಯರಿಗೆ, ಹಿರಿಯ ಸಾಧಕ ವೈದ್ಯರು, ಯುವ ಉದ್ಯಮಿಗಳಿಗೆ, ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ, ಕ್ರೀಡೆ, ಕಲಾ ಕ್ಷೇತ್ರದ ಸಾಧಕರಿಗೆ, ಪ್ರಗತಿ ಪರ ರೈತರಿಗೆ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ, ತಾಲೂಕು ನೌಕರರ ಘಟಕ, ಮಹಿಳಾ, ಯುವ ಘಟಕಗಳ ಸಹಯೋಗದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂದು ನಿಮಗೆ ಸಮಾಜ ಗುರುತಿಸಿ ಗೌರವಿಸಿದೆ. ನೀವು ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲು ಸದಾ ಸಿದ್ಧರಿರಬೇಕು. ನಿಮ್ಮ ಜೊತೆಗಿರುವ ಸಮಾಜದವರಿಗೆ ಪ್ರೋತ್ಸಾಹ, ಮಾರ್ಗದರ್ಶನ, ಸಹಾಯ ಮಾಡುವುದನ್ನು ಮರೆಯಬೇಡಿ. ಎಲ್ಲರೂ ಕೈಜೋಡಿಸಿದರೆ ನಮ್ಮ ಸಮಾಜ ಮುಂದುವರಿಯಲು ಸಾಧ್ಯ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಎಲ್ಲರ ಸಹಕಾರ ಅತ್ಯವಶ್ಯಕ ಎಂದು ಮನವಿ ಮಾಡಿದರು.

ನಿವೃತ್ತ ಪ್ರಾಚಾರ್ಯ ಪ್ರೊ.ಬಾತಿ ಬಸವರಾಜ ಉಪನ್ಯಾಸ ನೀಡಿದರು. ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಕಾಶಿನಾಥ, ಉದ್ಯಮಿಗಳಾದ ಕಂಚಿಕೆರೆ ಮಹೇಶ, ಅಂದನೂರು ಮುರುಗೇಶಪ್ಪ, ಎಂ.ದೊಡ್ಡಪ್ಪ, ಎಸ್.ಕೆ.ಗಿರೀಶ, ಎಸ್.ಮಲ್ಲಿನಾಥ, ಜಿ.ಶೇಖರಪ್ಪ, ಮಹಿಳಾ ಅಧ್ಯಕ್ಷೆ ಮೀನಾ ಪ್ರಸಾದ, ಬಾದಾಮಿ ಮುರುಗೇಶ, ವಕೀಲ ಮಲ್ಲಿಕಾರ್ಜುನ ಕಣವಿ, ವಾಣಿ ಶಿವಣ್ಣ, ಎಂ.ಎಸ್.ದೇವರಾಜ, ಶ್ರೀಧರ ಸಣ್ಣಪ್ಪನವರ, ಚನ್ನಮಲ್ಲಿಕಾರ್ಜುನ, ನಂದೀಶ ಬಳ್ಳಾರಿ ಸೇರಿದಂತೆ ಸಮಾಜದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜ ಬಾಂಧವರು ಭಾಗವಹಿಸಿದ್ದರು.

ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಸಾಧಕರನ್ನು ಸನ್ಮಾನಿಸಲಾಯಿತು. ಚನ್ನಮ್ಮ ಬಳಗ ಪ್ರಾರ್ಥಿಸಿ, ಮಂಜುನಾಥ ಪುರುವಂತರ ಸ್ವಾಗತಿಸಿದರು. ಅಂಗಡಿ ಸಂಗಪ್ಪ, ವೀಣಾ ಬೆಳ್ಳೂಡಿ ನಿರೂಪಿಸಿ, ಕೈದಾಳ ಶಿವಣ್ಣ ವಂದಿಸಿದರು.

- - -

(ಕೋಟ್ಸ್‌) ವಿವಿಧತೆಯಲ್ಲಿ ಏಕತೆ ಗುರುತಿಸುವುದು ಎಂದರೆ ಅದು ದಾವಣಗೆರೆ. ಇಲ್ಲಿ ಎಲ್ಲ ಸಮಾಜಗಳೂ ಒಟ್ಟಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ವೀರಶೈವ ಲಿಂಗಾಯತ ಸಮಾಜವೂ ಒಂದು. ಅಭಾವೀಮ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರ ವಹಿಸಿಕೊಂಡ ನಂತರ ಇಡೀ ದೇಶವೇ ನಮ್ಮ ಜಿಲ್ಲೆಯತ್ತ ನೋಡುವಂತಾಯಿತು. ವೀರಶೈವ ಲಿಂಗಾಯತ ಬೇರೆಯಲ್ಲ, ಎರಡೂ ಒಂದೇ ಎಂದು ಪ್ರತಿಪಾದಿಸಿದ ಶಾಮನೂರು ಸಮಾಜಕ್ಕೆ ದೊಡ್ಡ ಶಕ್ತಿಯಾಗಿದ್ದರು.

- ಎಸ್.ಸಿ.ಕಾಶೀನಾಥ, ಪ್ರಧಾನ ಕಾರ್ಯದರ್ಶಿ, ಪಂಚಮಸಾಲಿ ಸಮಾಜ ಜಿಲ್ಲಾ ಘಟಕ.

- - - ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಘಟಕದಿಂದ 2004ರಿಂದಲೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. 2026 ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಈವರೆಗೆ ಸನ್ಮಾನಿಸಿ ಗೌರವಿಸಿದ್ದೇವೆ. ಯುವಕರಿಗೆ ಕಂಪ್ಯೂಟರ್ ಶಿಕ್ಷಣ, ಶಿಕ್ಷಕರಿಗೆ ತರಬೇತಿ, ಸಾಮೂಹಿಕ ವಿವಾಹ ಕಾರ್ಯಕ್ರಮವನ್ನೂ ಆಯೋಜಿಸಿಕೊಂಡು ಬಂದಿದ್ದೇವೆ.

- ಬಿ.ಸಿ.ಉಮಾಪತಿ, ಜಿಲ್ಲಾಧ್ಯಕ್ಷ, ಪಂಚಮಸಾಲಿ ಸಮಾಜ.

- - -

-(ಫೋಟೋಗಳಿವೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ, ಮರಗಳ ಮಾರಣ ಹೋಮ
ನೀರಿಲ್ಲದೆ ಬರಿದಾಗಿರುವ ದೊಡ್ಡಕೆರೆ ಕೆಲವರಿಂದ ಒತ್ತುವರಿ