ಪೊಲೀಸ್ ಪರೀಕ್ಷೆ: ಹೊನ್ನಾಳಿಯಲ್ಲಿ ಬಸ್‌ಗಳಿಗೆ ಪರದಾಡಿದ ಪರೀಕ್ಷಾರ್ಥಿಗಳು!

KannadaprabhaNewsNetwork |  
Published : Aug 03, 2026, 01:30 AM IST
ಎಚ್.ಎಲ್.ಐ1ಎ  ದಾವಣಗೆರೆ ಕಡೆಗೆ ಹೋಗಲು ಸಾರಿಗೆ ಬಸ್ ಲಭ್ಯವಾಗದ ಕಾರಣ  ಕಾರಣ ಪರೀಕ್ಷಾರ್ಥಿಗಳು ಖಾಸಗಿ ಬಸ್‌ ಕಂಡಕ್ಟರ್ ಗಳಿಗೆ ಇನ್ನಿಲ್ಲದ ರೀತಿಯಲ್ಲಿ ಮನವೆ ಮಾಡಿ ಖಾಸಗಿ ಬಸ್ ಗೆ  ಹತ್ತುತ್ತಿರುವುದು.  | Kannada Prabha

ಸಾರಾಂಶ

ಪೊಲೀಸ್‌ ಇಲಾಖೆಯಲ್ಲಿನ ಸಿವಿಲ್‌ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿ ಹಿನ್ನೆಲೆ ಭಾನುವಾರ ಲಿಖಿತ ಪರೀಕ್ಷೆಗೆ ಹಾಜರಾಗಲು ಜಿಲ್ಲಾ ಕೇಂದ್ರ ದಾವಣಗೆರೆಗೆ ಹೋಗಬೇಕಿದ್ದ ಹೊನ್ನಾಳಿ, ನ್ಯಾಮತಿಯ ಸಹಸ್ರಾರು ವಿದ್ಯಾರ್ಥಿಗಳು ಅಗತ್ಯ ಸಾರಿಗೆ ಬಸ್‌ಗಳಿಲ್ಲದೇ ಪರದಾಡುವ ದುಸ್ಥಿತಿ ಎದುರಾಯಿತು. ಕಡೆಗೆ ಖಾಸಗಿ ಬಸ್‌ಗಳ ಮಾಲೀಕರ ಮನವೊಲಿಸಿ, ಗ್ರಾಮೀಣ ರೂಟ್‌ನ ಕೆಲ ಬಸ್‌ಗಳನ್ನೇ ನೇರವಾಗಿ ದಾವಣಗೆರೆ ನಗರಕ್ಕೆ ಸಂಚರಿಸುವ ವ್ಯವಸ್ಥೆ ಮಾಡಿ, ಪರೀಕ್ಷಾರ್ಥಿಗಳಿಗೆ ನೆರವು ಕಲ್ಪಿಸಲಾಯಿತು.

- ಮಾಲೀಕರ ಮನವೊಲಿಕೆ: ದಾವಣಗೆರೆಗೆ ಸಂಚರಿಸಿದ ಖಾಸಗಿ ಬಸ್‌ಗಳು

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪೊಲೀಸ್‌ ಇಲಾಖೆಯಲ್ಲಿನ ಸಿವಿಲ್‌ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿ ಹಿನ್ನೆಲೆ ಭಾನುವಾರ ಲಿಖಿತ ಪರೀಕ್ಷೆಗೆ ಹಾಜರಾಗಲು ಜಿಲ್ಲಾ ಕೇಂದ್ರ ದಾವಣಗೆರೆಗೆ ಹೋಗಬೇಕಿದ್ದ ಹೊನ್ನಾಳಿ, ನ್ಯಾಮತಿಯ ಸಹಸ್ರಾರು ವಿದ್ಯಾರ್ಥಿಗಳು ಅಗತ್ಯ ಸಾರಿಗೆ ಬಸ್‌ಗಳಿಲ್ಲದೇ ಪರದಾಡುವ ದುಸ್ಥಿತಿ ಎದುರಾಯಿತು. ಕಡೆಗೆ ಖಾಸಗಿ ಬಸ್‌ಗಳ ಮಾಲೀಕರ ಮನವೊಲಿಸಿ, ಗ್ರಾಮೀಣ ರೂಟ್‌ನ ಕೆಲ ಬಸ್‌ಗಳನ್ನೇ ನೇರವಾಗಿ ದಾವಣಗೆರೆ ನಗರಕ್ಕೆ ಸಂಚರಿಸುವ ವ್ಯವಸ್ಥೆ ಮಾಡಿ, ಪರೀಕ್ಷಾರ್ಥಿಗಳಿಗೆ ನೆರವು ಕಲ್ಪಿಸಲಾಯಿತು.

ಮುಂಜಾನೆಯಿಂದಲೇ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಪಟ್ಟಣ, ಗ್ರಾಮಿಣ ಪ್ರದೇಶಗಳಿಂದ ಬಂದ ಸಹಸ್ರಾರು ಪರೀಕ್ಷಾರ್ಥಿಗಳು ಹೊನ್ನಾಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಾವಣಗೆರೆ ಕಡೆಗೆ ಹೋಗಲು ಬಸ್‌ಗಳಿಗೆ ಕಾದು ಕಾದು ಸುಸ್ತಾದರೇ ಹೊರತು, ಒಂದೂ ಬಸ್ ಕೂಡ ಬರಲಿಲ್ಲ. ಭಾನುವಾರ ಮುಂಜಾನೆ 5 ಗಂಟೆಗಳಿಂದಳ ಬಂದ ಬಸ್‌ಗಳಲ್ಲೆಲ್ಲ ಜನವೋ ಜನ. ಗಂಡುಮಕ್ಕಳೊಂದಿಗೆ ಬಸ್ ಹತ್ತುವ ಪೈಪೋಟಿ ನಡೆಸಲಾಗದ ಬಹುತೇಕ ಹೆಣ್ಣುಮಕ್ಕಳು ಪೊಲೀಸ್‌ ಪರೀಕ್ಷೆ ತಪ್ಪುವ ಆಂತಕದಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಪರದಾಡಿದರು.

ಭಾನುವಾರ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆ ಇರುವುದು ಎಲ್ಲರಿಗೂ ತಿಳಿದಿತ್ತು. ಹೀಗಿದ್ದರೂ ಉದ್ಯೋಗ ಆಕಾಂಕ್ಷಿಗಳಿಗಾಗಿ ಹೆಚ್ಚುವರಿ ಅಥವಾ ಬೇರೆ ಬಸ್‌ಗಳ ವ್ಯವಸ್ಥೆ ಕೂಡ ಸಾರಿಗೆ ಅಧಿಕಾರಿಗಳು ಮಾಡಿರಲ್ಲಿಲ್ಲ. ಇಂತಹ ಅತಂತ್ರ ಪರಿಸ್ಥಿತಿಯಲ್ಲಿ ಪರೀಕ್ಷಾರ್ಥಿಗಳು ದಾವಣಗೆರೆಗೆ ಹೋಗಲು ಸಾರ್ವಜನಿಕರು ಹಾಗೂ ಪಾಲಕರು ಪರಿಸ್ಥಿತಿಯ ಗಂಭೀರತೆ ಅರಿತು ಖಾಸಗಿ ಬಸ್‌ಗಳ ಏಜೆಂಟರಿಗೆ ಮನವರಿಕೆ ಮಾಡಿಕೊಟ್ಟರು. ಬಸ್‌ ಏಜೆಂಟರು, ಚಾಲಕರ ಮನವೊಲಿಸಿ ಪರೀಕ್ಷಾರ್ಥಿಗಳನ್ನು ಖಾಸಗಿ ಬಸ್‌ನಲ್ಲಿ ಕಳುಹಿಸಿದ ಘಟನೆಯೂ ನಡೆಯಿತು.

ಪರೀಕ್ಷಾರ್ಥಿಗಳ ಹಿತ ಕಾಯಬೇಕಿದ್ದ ಸಾರಿಗೆ ಅಧಿಕಾರಿ ರಾಮಚಂದ್ರಪ್ಪ ಬಳಿ ಪರೀಕ್ಷಾರ್ಥಿಗಳು ಹಾಗೂ ಪಾಲಕರು ಎಷ್ಟೇ ಮನವಿ ಮಾಡಿದರೂ ದಾವಣಗೆರೆ ಕಡೆಗೆ ಹೋಗುವ ಬಸ್ ವ್ಯವಸ್ಥೆ ಮಾಡಿಕೊಡಲಿಲ್ಲ. ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಖಾಲಿ ಬಸ್‌ಗಳು ಹೋಗುತ್ತಿದ್ದವು. ಅವುಗಳನ್ನೇ ದಾವಣಗೆರೆ ಕಡೆಗೆ ಕಳುಹಿಸಿ ಎಂದರೂ ಹೊನ್ನಾಳಿ ಸಾರಿಗೆ ವ್ಯವಸ್ಥಾಪಕ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಪರೀಕ್ಷಾರ್ಥಿಗಳು, ಸಾರ್ವಜನಿಕರು ಹಾಗೂ ಪಾಲಕರು ಬೇಸರ ವ್ಯಕ್ತಪಡಿಸಿದರು.

ಹಬ್ಬ ಹರಿದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಿಗೆ ಇದೇ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯವರು ಹೆಚ್ಚುವರಿ ಬಸ್‌ಗಳನ್ನು ಕಳುಹಿಸುತ್ತಾರೆ. ಅದೇ ನಿರುದ್ಯೋಗಿ ಯುವಕರು ತಮ್ಮ ಭವಿಷ್ಯ ಕಂಡುಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗಲು ಬಸ್ ಸೌಕರ್ಯಗಳ ಕಲ್ಪಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ ಎಂದು ಸಾರಿಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಇಂತಹ ಬೇಜಾವಾಬ್ದಾರಿ ಅಧಿಕಾರಿಗಳು ಏಕೆ ಬೇಕು ಎಂದು ಬಸ್ ನಿಲ್ದಾಣದಲ್ಲಿ ಪರೀಕ್ಷಾರ್ಥಿಗಳು, ಪೋಷಕರು ಹಿಡಿಶಾಪ ಹಾಕುತ್ತಿದ್ದರು.

- - -

-ಎಚ್.ಎಲ್.ಐ1, 1ಎ.: ದಾವಣಗೆರೆಗೆ ಹೋಗುವ ಸಾರಿಗೆ ಬಸ್‌ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ತುಂಬಿರುವ ಜನರು.

-ಎಚ್.ಎಲ್.ಐ1ಎ: ದಾವಣಗೆರೆಗೆ ಸಾರಿಗೆ ಬಸ್‌ಗಳ ಕೊರತೆ ಹಿನ್ನೆಲೆ ಪರೀಕ್ಷಾರ್ಥಿಗಳು, ಪೋಷಕರು ಖಾಸಗಿ ಬಸ್‌ ಕಂಡಕ್ಟರ್‌, ಚಾಲಕರಿಗೆ ದುಂಬಾಲು ಬಿದ್ದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ, ಮರಗಳ ಮಾರಣ ಹೋಮ
ನೀರಿಲ್ಲದೆ ಬರಿದಾಗಿರುವ ದೊಡ್ಡಕೆರೆ ಕೆಲವರಿಂದ ಒತ್ತುವರಿ