ಪ್ರತಿಭಾ ಪುರಸ್ಕಾರ, ಸಾಧಕರಿಗೆ, ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ
ಮೀನುಗಾರಿಕೆ ಉದ್ಯೋಗ ಹಲವರಿಗೆ ಬದುಕನ್ನು ನೀಡುತ್ತದೆ. ಅನ್ಯರಿಗೆ ಉದ್ಯೋಗ ನೀಡುವ ಮೀನುಗಾರರೇ ಇದೀಗ ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಪ್ಪಿಸಲು ಸಮಾಜದಲ್ಲಿ ಶಿಕ್ಷಣವಂತರ ಸಂಖ್ಯೆ ಹೆಚ್ಚಿದಷ್ಟೂ ಶಕ್ತಿಯುತ ಸಮಾಜ ಕಟ್ಟಲು ಸಾಧ್ಯ ಎಂದು ರಾಜ್ಯ ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.
ಮುರ್ಡೇಶ್ವರದ ಆರ್.ಎನ್.ಎಸ್.ಸಭಾಭವನದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ 20ನೇ ವರ್ಷದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಮತ್ತು ಸಮಾಜದ ಹಿರಿಯರಿಗೆ ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮೀನುಗಾರರ ಸಮುದಾಯ ಸಣ್ಣದಾದರೂ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಮೆಟ್ಟಿಲು ಏರುತ್ತಿರುವುದು ಹೆಮ್ಮೆಯ ಸಂಗತಿ. ಇದು ಶಿಕ್ಷಣದಿಂದ ಸಾಧ್ಯವಾಗಿದೆ ಎಂದರು.ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಮೀನುಗಾರರ ಸಮುದಾಯದಲ್ಲಿ ಶಿಕ್ಷಣಕ್ಕೆ ಅತಿ ಪ್ರಾಮುಖ್ಯತೆ ನೀಡಬೇಕಾಗಿದೆ. ಅಲ್ಲದೇ ಸಮುದಾಯದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಹೊರ ಹೊಮ್ಮಬೇಕಾಗಿದೆ ಎಂದರು.
ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾಜದ 11 ಸಾಧಕ ವಿದ್ಯಾರ್ಥಿಗಳನ್ನು ಮತ್ತು ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಾಂತ ಸ್ವಾಗತಿಸಿದರು. ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಶಿವಾನಂದ ತಾಂಡೇಲ್ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ದುರ್ಗೇಕರ್ ವಂದಿಸಿದರು. ನಂದಿತಾ ಜನಾರ್ದನ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಮುನ್ನ ಸಚಿವರು ಹಾಗೂ ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.