ಮಧುಗಿರಿ: ಶ್ರದ್ಧೆ, ಏಕಾಗ್ರತೆ ಹಾಗೂ ಕಠಿಣ ಪರಿಶ್ರಮದಿಂದ ಪಡೆದ ಶಿಕ್ಷಣ ಸಾರ್ಥಕವಾಗುವುದು ಎಂದು ಗೌತಮ ಬುದ್ಧ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಿ.ಎನ್ . ದೊಡ್ಡಮಲ್ಲಯ್ಯ ತಿಳಿಸಿದರು.
ಪಟ್ಟಣದ ಟಿ.ವಿ.ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಗುರಿ- ಹಿರಿಯರನ್ನು ಗೌರವಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾದುದು. ಈ ಸಮಯದಲ್ಲಿ ಚನ್ನಾಗಿ ಓದಿ ಹೆತ್ತವರಿಗೆ - ಶಿಕ್ಷಣ ಕಲಿಸಿದ ಶಿಕ್ಷಕರಿಗೆ ಗೌರವ ತರಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್‌ಗಳಿಂದ ದೂರವಿದ್ದು ಸಚ್ಚಾರಿತ್ಯ, ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಿ. ಬೇರೆಯವರ ಆಸ್ತಿ, ಹಣ, ಸಂಪತ್ತಿಗೆ ಆಸೆ ಪಡಬೇಡಿ, ಜೀವನದುದ್ದಗಲಕ್ಕೂ ಶುದ್ಧ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದ ಏಳಿಗೆ ಹಾಗೂ ದೇಶದ ಪ್ರಗತಿಗೆ ನೆರವಾಗಿ ಎಂದರು.
ಮುಖ್ಯ ಅತಿಥಿ, ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಅಕ್ಷರ ಜ್ಞಾನ ಅಂತಃಕರಣ ಅರಳಿಸಿ ಆತ್ಮವಿಶ್ವಾಸ ಪೋಷಿಸಿ ಎಲ್ಲರ ಜೊತೆ ಬೆರೆತು, ಅರಿತು ಬದುಕುವ ಅಲೋಚನೆಗಳನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಬೆಳೆಸಿಕೊಳ್ಳಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಎಂ.ವೈ.ಹೊಸಮನಿ ಮಾತನಾಡಿ, ಶಿಕ್ಷಣ ಉತ್ತಮ ಪ್ರಜೆಗಳನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳಿ, ಸಮಾಜದಲ್ಲಿನ ಗುರು- ಹಿರಿಯರನ್ನು ನಿರ್ಲಕ್ಷಿಸದಿರಿ. ಸೇವಾ ಮನೋಭಾವ ಬೆಳೆಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಿರಿ, ಉನ್ನತ ಹುದ್ದೆಗಳನ್ನು ಗಳಿಸಿ ಸಮಾಜಮುಖಿಯಾಗಿ ಕೆಲಸ ಮಾಡುವಂತೆ ಪ್ರೇರೆಪಿಸಿದರು.
ಉಪನ್ಯಾಸಕ ರಂಗಶ್ಯಾಮಯ್ಯ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್ ಮೂರ್ತಿ ಮಾತನಾಡಿದರು.ಸಹನಾ ಹಾಗೂ ಸಂಗಡಿಗರು ಪ್ರಾರ್ಥಿಸಿ, ಭವ್ಯ ಸ್ವಾಗತಿಸಿ, ಮೋಹನ್ ಕುಮಾರ್ ಕಾವೇರಿ ನಿರೂಪಿಸಿ, ತ್ರಿವೇಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರರು ಇದ್ದರು.