ವಕ್ಫ್‌ ಆಸ್ತಿ ಕುರಿತು ನಮ್ಮ ಹೋರಾಟ ಹೈಜಾಕ್‌ ಮಾಡಿದ್ದು ಬಿ.ವೈ.ವಿಜಯೇಂದ್ರ : ಭಿನ್ನರು

KannadaprabhaNewsNetwork |  
Published : Nov 18, 2024, 12:05 AM ISTUpdated : Nov 18, 2024, 07:16 AM IST
ಬಿಜೆಪಿ | Kannada Prabha

ಸಾರಾಂಶ

ವಕ್ಫ್‌ ಆಸ್ತಿ ಕುರಿತು ರಾಜ್ಯಾದ್ಯಂತ ಉಂಟಾಗಿರುವ ಸಮಸ್ಯೆ ಬಗ್ಗೆ ಹೋರಾಟ ನಡೆಸುವ ಉದ್ದೇಶವನ್ನು ಹೈಜಾಕ್ ಮಾಡಿದ್ದು ನಾವಲ್ಲ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತವರ ತಂಡವೇ ನಮ್ಮ ಉದ್ದೇಶವನ್ನು ಹೈಜಾಕ್‌ ಮಾಡಿದೆ ಎಂದು ಬಿಜೆಪಿಯ ಅತೃಪ್ತ ನಾಯಕರ ಬಣ ಆಕ್ರೋಶ ವ್ಯಕ್ತಪಡಿಸಿದೆ.

 ಬೆಂಗಳೂರು : ವಕ್ಫ್‌ ಆಸ್ತಿ ಕುರಿತು ರಾಜ್ಯಾದ್ಯಂತ ಉಂಟಾಗಿರುವ ಸಮಸ್ಯೆ ಬಗ್ಗೆ ಹೋರಾಟ ನಡೆಸುವ ಉದ್ದೇಶವನ್ನು ಹೈಜಾಕ್ ಮಾಡಿದ್ದು ನಾವಲ್ಲ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತವರ ತಂಡವೇ ನಮ್ಮ ಉದ್ದೇಶವನ್ನು ಹೈಜಾಕ್‌ ಮಾಡಿದೆ ಎಂದು ಬಿಜೆಪಿಯ ಅತೃಪ್ತ ನಾಯಕರ ಬಣ ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಬೆಳಗ್ಗೆ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿ ವಕ್ಫ್ ಬೋರ್ಡ್‌ನಿಂದ ಆಗಿರುವ ಅವಾಂತರ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ‘ಜನಜಾಗೃತಿ ಅಭಿಯಾನ’ ಹಮ್ಮಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಸಭೆಯ ಬಳಿಕ ಅತೃಪ್ತ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ, ರಮೇಶ್ ಜಾರಕಿಹೊಳಿ ಮತ್ತು ಅರವಿಂದ್ ಲಿಂಬಾವಳಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅಭಿಯಾನದ ಘೋಷಣೆ ಮಾಡಿದರು.

ಅದಾದ ಕೆಲವು ಗಂಟೆಗಳ ಬಳಿಕ ವಿಜಯೇಂದ್ರ ಅವರು ಪಕ್ಷದ ಕಚೇರಿಗೆ ಆಗಮಿಸಿ ಮುಖಂಡರು ಹಾಗೂ ತಮ್ಮ ಆಪ್ತರೊಂದಿಗೆ ಅತೃಪ್ತ ನಾಯಕರ ಸಭೆಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಪಕ್ಷದ ವತಿಯಿಂದ ತಂಡ ರಚಿಸುವ ನಿರ್ಧಾರ ಪ್ರಕಟಿಸಿದರು ಎಂಬ ಆರೋಪ ಅತೃಪ್ತ ನಾಯಕರ ಬಣದಿಂದ ಕೇಳಿಬಂದಿದೆ.

‘ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ವಕ್ಫ್ ಕುರಿತಂತೆ ಪರಿಣಾಮಕಾರಿಯಾದ ಹೋರಾಟ ಹಮ್ಮಿಕೊಳ್ಳಲು ಮೀನಮೇಷ ಎಣಿಸುತ್ತಿರುವುದರಿಂದಲೇ ನಾವು ಸಭೆ ಸೇರಿ ಈ ತಿಂಗಳ 25ರಿಂದ ಮುಂದಿನ ಡಿಸೆಂಬರ್ 25ರವರೆಗೆ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಬೇಕಾಯಿತು. 

ಒಂದು ವೇಳೆ ವಿಜಯೇಂದ್ರ ಅವರೇ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳುವ ನಿರ್ಧಾರ ಕೈಗೊಂಡಿದ್ದರೆ ನಾವು ಹೋರಾಟ ನಡೆಸುವ ತೀರ್ಮಾನವನ್ನೇ ಮಾಡುತ್ತಿರಲಿಲ್ಲ. ಜನರ ಸಂಕಷ್ಟಗಳನ್ನು ಅರಿತುಕೊಂಡು ನಾವಾಗಿಯೇ ಜನಜಾಗೃತಿಗೆ ಚಾಲನೆ ನೀಡಲು ಮುಂದಾಗಿದ್ದೇವೆ ಹೊರತು ಇದರಲ್ಲಿ ಸ್ವಾರ್ಥವಿಲ್ಲ. ಈಗ ಅವರ ಯೋಚನೆಯನ್ನು ನಾವು ಹೈಜಾಕ್ ಮಾಡಿದ್ದೇವೆ ಎಂಬಂತೆ ಬಿಂಬಿಸುವುದು ಸರಿಯಲ್ಲ’ ಎಂದು ಅತೃಪ್ತರ ಬಣದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ