ವಿದ್ಯೆ ಯಾರಿಂದಲೂ ಕದಿಯಲಾಗದ ಸಂಪತ್ತು: ರೇಣುಕಾಚಾರ್ಯ

KannadaprabhaNewsNetwork | Published : Jul 17, 2024 12:47 AM

ಸಾರಾಂಶ

ಯಾರಿಂದಲೂ ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ. ದೇಶದ ಭವಿಷ್ಯ ರೂಪಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಇದೆ. ಇಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸಾಮರ್ಥ್ಯ ಇರುವುದು ಗುರುಗಳಿಗೆ ಮಾತ್ರ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರ.ದ. ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಸಮಾರೋಪ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಯಾರಿಂದಲೂ ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ. ದೇಶದ ಭವಿಷ್ಯ ರೂಪಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಇದೆ. ಇಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸಾಮರ್ಥ್ಯ ಇರುವುದು ಗುರುಗಳಿಗೆ ಮಾತ್ರ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-2024ನೇ ಸಾಲಿನ ಕ್ರೀಡೆ. ಎನ್.ಎಸ್.ಎಸ್., ವಿವಿಧ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದವರು ಒಂದು ದಿನ ಮಾಜಿಗಳಾಗುತ್ತಾರೆ. ಆದರೆ ವಿದ್ಯಾರ್ಥಿಗಳು ಎಂದಿಗೂ ಮಾಜಿಗಳಾಗಲಾರರು. ಅವರು ಹಳೇ ವಿದ್ಯಾರ್ಥಿಗಳು ಎಂದಷ್ಟೇ ಅಗುತ್ತಾರೆ. ಕಲಿಕೆಗೆ ಜಾತಿ, ಧರ್ಮ, ಲಿಂಗ, ವರ್ಣ ಬೇಧ ಇರುವುದಿಲ್ಲ. ಯಾವ ವ್ಯಕ್ತಿ ಭವಿಷ್ಯದ ಬಗ್ಗೆ ಗಮನವಿಟ್ಟು ಸತತ ಸಾಧನೆ ಮಾಡುತ್ತಾರೋ ಅಂಥವರು ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮುತ್ತಾರೆ. ವಿದ್ಯಾರ್ಥಿಗಳು ಸಹ ಭವಿಷ್ಯದ ಬಗ್ಗೆ ನಿರ್ದಿಷ್ಟ ಗುರಿ ಹೊಂದಿರಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಇನ್ ಸೈಟ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಪದವಿ ಮುಗಿಸುತ್ತಿದ್ದಂತೆಯೇ ಮುಂದೆ ಏನು ಎನ್ನುವ ಪ್ರಶ್ನೆ ಕಾಡುತ್ತಿರುತ್ತದೆ. ಇದು ಸಹಜ ಕೂಡ. ಈ ಹಂತದಲ್ಲಿ ಯುವ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೇ ಅವರ ಮುಂದಿನ ಭವಿಷ್ಯ ನಿರ್ಧಾರ ಆಗುತ್ತದೆ ಎಂದರು.

ಇನ್ ಸೈಟ್ ಐಎಎಸ್‌ ಸಂಸ್ಥೆ ಹಲವಾರು ದಶಕಗಳಿಂದ ದೇಶದ ನಾನಾ ಭಾಗಗಳಲ್ಲಿ ಶಾಖೆಗಳನ್ನು ಹೊಂದಿ ಐಎಎಸ್, ಐಪಿಎಸ್, ಐಆರ್‌ಎಸ್‌ಗಳಂಥ ಉನ್ನತ ಹುದ್ದೆಗಳಿಗಾಗಿ ತರಬೇತಿ ತರಗತಿಗಳನ್ನು ನಡೆಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಓದಿ, ದೇಶದ ವಿವಿಧೆಡೆ ಉನ್ನತ ಅಧಿಕಾರಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕೂಡ ಶಾಖೆ ತೆರೆಯಲಿದ್ದೇವೆ ಎಂದು ತಿಳಿಸಿದರು.

ಕ್ರೀಡೆ ಮತ್ತು ಓದಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಪದವಿ ಮುಗಿಸಿ ಕಾಲೇಜಿನಿಂದ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಚನ್ನಯ್ಯ ಬೆನ್ನೂರು ಮಠ, ದಾವಣಗೆರೆ ವಿ.ವಿ.ಯ ಪ್ರಥಮ ರ್ಯಾಂಕ್‌ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸಿಂಧೂಬಾಯಿ ಎಸ್., ಉಪನ್ಯಾಸಕ ನಾಗೇಶ್ ಕೆ., ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟಿ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

- - -

ಕೋಟ್‌

ವಿದ್ಯಾರ್ಥಿಗೆ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಕೀಳರಿಮೆ ಇರಬಾರದು. ಏನೇ ಆದರೂ ಸಾಧಿಸಿಯೇ ತೀರುತ್ತೇನೆ ಎನ್ನುವ ಧನಾತ್ಮಕ ಮನೋಭಾವನೆ ಇರಬೇಕು. ಆಗ ಮಾತ್ರ ಆ ವಿದ್ಯಾರ್ಥಿ ಜೀವನದಲ್ಲಿ ಮೇಲಕ್ಕೆ ಬರುತ್ತಾನೆ

- ವಿನಯ ಕುಮಾರ, ಸಂಸ್ಥಾಪಕ, ಇನ್‌ಸೈಟ್‌ ಐಎಎಸ್‌ ತರಬೇತಿ ಸಂಸ್ಥೆ

- - - -16ಎಚ್.ಎಲ್.ಐ1.:

ಸಮಾರಂಭದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

Share this article