ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಶ್ವವಿದ್ಯಾಲಯ, ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಗಣಕ ವಿಜ್ಞಾನ ವಿಭಾಗದ ವತಿಯಿಂದ ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಗಾಂಧಿ ವಿಚಾರಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವುದರ ಜತೆಗೆ ಕೇಳಿಸಿಕೊಳ್ಳುವ ಆಸಕ್ತಿಯನ್ನೂ ಸಹ ಮೈಗೂಡಿಸಿಕೊಳ್ಳಬೇಕು. ವಿಷಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡಾಗ ಮಾತ್ರ ಆಳವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದರು.ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಮಾನತೆಗಾಗಿ ಹೋರಾಡಿದ್ದಾರೆ. ಅವರ ಚಿಂತನೆ ನಿಲುವು, ಆದರ್ಶವನ್ನು ಇಂದಿನ ಯುವ ಪೀಳಿಗೆಗಳು ಪಾಲಿಸಬೇಕು. ಗಾಂಧೀಜಿಯವರ ಆಶಯದಂತೆ ಇಂದು ಹೆಣ್ಣು ಮಕ್ಕಳು ಸ್ವತಂತ್ರ ಮತ್ತು ಸಮಾನತೆಯಿಂದ ಬದುಕುತ್ತಿದ್ದಾರೆ. ಗಂಡು ಮಕ್ಕಳನ್ನು ಮೀರಿ ಎಲ್ಲಾ ಕ್ಷೇತ್ರದಲ್ಲೂ ಮುಂದುವರೆಯುತ್ತಿದ್ದಾರೆ. ಪ್ರಸ್ತುತ ಮಹಿಳೆಯರು ಪ್ರವೇಶ ಮಾಡದೇ ಇರುವ ಕ್ಷೇತ್ರವಿಲ್ಲ, ಭಾರತದ ಯಶಸ್ಸಿಗೆ ಹಾಗೂ ಬದಲಾವಣೆಗಳಿಗೆ ಹೆಣ್ಣುಮಕ್ಕಳ ಸಮಾನತೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ ಎಂದರು.
ಗಾಂಧಿಯವರು ತಿಳಿಸದ ವಿಷಯವಿಲ್ಲ. ಸ್ವಚ್ಛತೆ, ಶ್ರಮ, ಕೃಷಿ, ಆಹಾರ, ಆರೋಗ್ಯ ಹಾಗೂ ಜೀವನ ಮೌಲ್ಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ಗಾಂಧೀಜಿಯವರು ಸರಳತೆಯ ಜೀವನಕ್ಕೆ ಪ್ರಮುಖವಾದ ಉದಾಹರಣೆಯಾಗಿದ್ದಾರೆ. ಸರಳತೆಯೇ ಜಗತ್ತಿನ ಸಾರ ಎಂದ ಅವರು ಶಸ್ತ್ರ ಹಿಡಿಯದೆ, ರಕ್ತ ಪಾತವಿಲ್ಲದೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ವಿಶ್ವದಲ್ಲಿಯೇ ಶಾಂತಿ, ಸೌಹಾರ್ದತೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದ ನಿದರ್ಶನ ಗಾಂಧಿಯವರದ್ದು ಮಾತ್ರ ಎಂದು ಬಣ್ಣಿಸಿದರು.ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಗಾಂಧೀಜಿಯವರು ಅಂದಿಗೂ ಇಂದಿಗೂ ಎಂದೆಂದಿಗೂ ಎಲ್ಲರಿಗೂ ಅನ್ವಯವಾಗುವಂತಹವರು. ಹಾಗಾಗಿ ಗಾಂಧಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಆರ್ಥಿಕತೆಯ ಚಿಂತಕನಾಗಿ ದೇಶದಲ್ಲಿ ಬಡತನ ನಿವಾರಣೆಯಾಗಬೇಕು ಹಾಗೂ ದೇಶ ಸುಸ್ತಿರತೆ ಕಾಣಬೇಕು ಎಂಬುದು ಅವರ ಆಶಯವಾಗಿತ್ತು ಎಂದು ವಿವರಿಸಿದರು.
ಮಹಿಳೆಯರು ಭೌತಿಕ, ಆರ್ಥಿಕ, ರಾಜಕೀಯ ಹಾಗೂ ಸಮಾಜಿಕವಾಗಿ ಸಬಲೀಕರಣ ಹೊಂದಬೇಕು ಎಂದು ಗಾಂಧಿಯವರು ಮೊದಲಿಗೆ ಹೇಳಿದ್ದರು. ಈ ನಿಟ್ಟಿನಲ್ಲಿ ಮಹಿಳೆಯರು ಪುರುಷರಿಗಿಂತಲೂ ಹೆಚ್ಚಾಗಿ ಆರ್ಥಿಕ, ರಾಜಕೀಯ ಹಾಗೂ ಸಮಾಜಿಕವಾಗಿ ಅಲ್ಲದೆ ತಂತ್ರಜ್ಞಾನದಲ್ಲೂ ಸಾಧನೆ ಮಾಡುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದರು.ಕಾರ್ಯಕ್ರಮದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕರಾದ ಜಿ.ಬಿ.ಶಿವರಾಜು ಹಾಗೂ ರಾಜ್ಯ ಸಂಪನ್ಮೂಲ ಕೇಂದ್ರ ನಿವೃತ್ತ ನಿರ್ದೇಶಕರಾದ ಎಸ್.ತುಕಾರಾಂ ಅವರು ಉಪನ್ಯಾಸ ಮಾಡಿದರು.
ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕಿ ಡಾ. ಸುಮಾರಾಣಿ ಶಂಭು, ಉಪ ಕುಲ ಸಚಿವ ಡಾ.ಎಂ. ವೈ.ಶಿವರಾಮು, ಮೌಲ್ಯಮಾಪನ ಕುಲಸಚಿವ ಜಿ. ವಿ ವೆಂಕಟರಮಣ, ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಜಿ. ವಿ ಪ್ರೇಮ್‌ಸಿಂಗ್ ಹಾಜರಿದ್ದರು.ನಾಳೆ ರಾಜ್ಯಮಟ್ಟದ ಕವಿ-ಕಾವ್ಯ ಸಮ್ಮಿಲನ
ಕನ್ನಡಪ್ರಭ ವಾರ್ತೆ ಮಂಡ್ಯಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಡಿ.13ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮಿಲನ, ಗೀತ-ಗಾಯನ, ಸಾಧಕರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉಪಸ್ಥಿತಿಯಲ್ಲಿ ಶಾಸಕ ಪಿ.ರವಿಕುಮಾರ್ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಧರಣೇಂದ್ರಯ್ಯ ಅಧ್ಯಕ್ಷತೆ ವಹಿಸುವರು. ಲಯನ್ಸ್ ಸಂಸ್ಥೆಗಳ ಒಕ್ಕೂಟದ ಮಾಜಿ ರಾಜ್ಯಪಾಲ ನಾಗರಾಜ್ ಭೈರಿ, ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಕವನ ಸಂಕಲನ ಬಿಡುಗಡೆ ಮಾಡುವರು. ಟ್ರಸ್ಟ್ ಅಧ್ಯಕ್ಷ ಕಟ್ಟೆ ಕೃಷ್ಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುವರು. ಇದೇ ವೇಳೆ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಲೋಕಪಾವನಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಸುಜಾತ ಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಬಸವೇಶ್ವರ ಆಗ್ರೋ ರೈಸ್ ಇಂಡಸ್ಟ್ರೀಸ್ ಮಾಲೀಕ ಎಸ್.ಸಿ. ಬಸವರಾಜು, ಬೆಟ್ಟಹಳ್ಳಿ ಮಂಜುನಾಥ್, ಎಂ. ಶಿವಕುಮಾರ್, ಕೊತ್ತತ್ತಿ ರಾಜು, ವೈ.ಎಚ್. ರತ್ನಮ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಟ್ರಸ್ಟ್ ಅಧ್ಯಕ್ಷ ಕಟ್ಟೆ ಕೃಷ್ಣಸ್ವಾಮಿ ತಿಳಿಸಿದ್ದಾರೆ.