ತಿಮ್ಮಕ್ಕ ಮ್ಯೂಸಿಯಂ ಬೇಲೂರಿಗೆ ಸ್ಥಳಾಂತರಿಸುವ ಹುನ್ನಾರ

KannadaprabhaNewsNetwork |  
Published : Dec 12, 2025, 01:00 AM IST
3.ಸಾಲುಮರದ ತಿಮ್ಮಕ್ಕ | Kannada Prabha

ಸಾರಾಂಶ

ತಿಮ್ಮಕ್ಕ ಯಾರನ್ನೇ ಆಶೀರ್ವಾದ ಮಾಡಬೇಕಾದರು ದೇವರ ಹೆಸರಿನಲ್ಲಿ ಮಾಡುತ್ತಿರಲಿಲ್ಲ. ಬದಲಿಗೆ ಪತಿರಾಯ ಒಳ್ಳೆದು ಮಾಡಲಿ ಎನ್ನುತ್ತಿದ್ದರು.

ಗಂ.ದಯಾನಂದ ಕುದೂರು

ಕನ್ನಡಪ್ರಭ ವಾರ್ತೆ ಕುದೂರು

ಸಾಲುಮರದ ತಿಮ್ಮಕ್ಕ ಅತ್ಯಂತ ಆಸ್ಥೆಯಿಂದ ಬೆಳೆಸಿದ ಸಾಲುಮರದ ನೆರಳಿನಲ್ಲಿ ಅವರ ಅಂತ್ಯಕ್ರಿಯೆ ಅಗಲು ಬಿಡಲಿಲ್ಲ. ಅವರು ಬಾಳಿ ಬದುಕಿದ ಮನೆ ಪಾಳು ಬಿದ್ದ ಮನೆಯ ಕಳೆ ಹೊತ್ತು ಮೌನರೋದನೆಯನ್ನು ಹೊತ್ತಂತಿದೆ. ಈಗ ಗಾಯದ ಮೇಲೆ ಬರೆ ಎಳೆದಂತೆ ತಿಮ್ಮಕ್ಕನ ಹೆಸರಿನ ಮ್ಯೂಸಿಯಂ ಹಾಸನ ಜಿಲ್ಲೆಯ ಬೇಲೂರು ಗ್ರಾಮದಲ್ಲಿ ಮಾಡಲು ಸರ್ಕಾರ ಮುಂದಾಗಿರುವುದು ವಿಪರ್ಯಾಸ ಎಂದು ಮಾಗಡಿ ತಾಲೂಕು ಹುಲಿಕಲ್ಲು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.ತಿಮ್ಮಕ್ಕನ ಬಾಯಲ್ಲಿ ಬರುತ್ತಿದ್ದ ಹೆಸರು ದೇವರದ್ದಲ್ಲ:ತಿಮ್ಮಕ್ಕ ಯಾರನ್ನೇ ಆಶೀರ್ವಾದ ಮಾಡಬೇಕಾದರು ದೇವರ ಹೆಸರಿನಲ್ಲಿ ಮಾಡುತ್ತಿರಲಿಲ್ಲ. ಬದಲಿಗೆ ಪತಿರಾಯ ಒಳ್ಳೆದು ಮಾಡಲಿ ಎನ್ನುತ್ತಿದ್ದರು. ಮಾಜಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಗೂ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಪತಿರಾಯ ಹೆಸರೇಳಿಯೇ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದವರು. ಪತಿ ಬಿಕ್ಕಲು ಚಿಕ್ಕಯ್ಯರವರೆಂದರೆ ತಿಮ್ಮಕ್ಕನಿಗೆ ಗೌರವ ಮಾತ್ರವಲ್ಲ ದೇವರಿಗಿಂತ ಹೆಚ್ಚಾಗ ಭಕ್ತಿ. ಪತಿಭಕ್ತಿ. ಇಂತಹ ತಿಮ್ಮಕ್ಕರವರು ನನ್ನ ಮರಣದ ನಂತರ ಪತಿರಾಯನ ಪಕ್ಕದಲ್ಲಿ ಸಂಸ್ಕಾರ ಮಾಡಿ ಎಂದು ಹೇಳದೆ ಬೆಂಗಳೂರು ನಗರದಲ್ಲಿ ಮಾಡಿ ಎಂದು ಹೇಳುತ್ತಾರೆಯೇ? ಓದು ಬರಹ ಗೊತ್ತಿಲ್ಲದ ತಿಮ್ಮಕ್ಕನಿಗೆ ವಿಲ್ ಪರಿಕಲ್ಪನೆಯಾದರೂ ಇದ್ದೀತೆ. ಸಾಕು ಮಗ ಉಮೇಶ್ ರವರ ಪೂರ್ವಯೋಜಿತ ಕ್ರಮದಿಂದಾಗಿ ವಿಲ್ ಬರೆಸಿ ಅದಕ್ಕೆ ತಿಮ್ಮಕ್ಕನ ಆಸೆ ಎಂದು ಸೇರಿಸಿ ತಿಮ್ಮಕ್ಕ ಬಾಳಿಬದುಕಿದ ಊರಿನಲ್ಲಿ ಸಂಸ್ಕಾರ ಆಗಲು ಬಿಡಲಿಲ್ಲ ಎಂದು ಗ್ರಾಮಸ್ಥರು ತಿಮ್ಮಕ್ಕನ ಸಾಕುಮಗ ಉಮೇಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.15 ವರ್ಷದ ತನಕ ತಿಮ್ಮಕ್ಕನ ವಾಸ ಹುಲಿಕಲ್ಲಿನಲ್ಲಿ:ತುಮಕೂರು ಜಿಲ್ಲೆ ಗುಬ್ಬಿ ಬಳಿಯ ಕಕ್ಕೇನಹಳ್ಳಿಯ ತಿಮ್ಮಕ್ಕ ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಬಿಕ್ಕಲು ಚಿಕ್ಕಯ್ಯರವರನ್ನು ಮದುವೆಯಾದಾಗಿನಿಂದ ವಾಸ ಬಾಳಿ ಬದುಕಿದ್ದು ಇದೇ ಹುಲಿಕಲ್ಲು ಗ್ರಾಮದಲ್ಲಿ. ಸುಮಾರು ಹದಿನೈದು ವರ್ಷದ ಹಿಂದೆ ಅನಾರೋಗ್ಯದ ಕಾರಣ ಹೇಳಿ ಅವರ ಸಾಕು ಮಗ ಉಮೇಶ್ ಸಾಲುಮರದ ನೆರಳಿನಿಂದ ಕಾಂಕ್ರಿಟ್ ಕಾಡಿಗೆ ಕರೆದುಕೊಂಡು ಹೋದರು. ಬೇಲೂರಿನಲ್ಲಿ ಮ್ಯೂಸಿಯಂ ಏಕೆ? ಇದರ ನಡುವೆ ಆಗಾಗ್ಗೆ ಉಮೇಶ್ ತನ್ನ ಹುಟ್ಟೂರು ಬೇಲೂರಿಗೆ ಹೋಗುವಾಗ ತಿಮ್ಮಕ್ಕರವರನ್ನು ಕೆರೆದುಕೊಂಡು ಹೋಗುತ್ತಿದ್ದ ಎಂಬುದನ್ನು ಬಿಟ್ಟರೆ ತಿಮ್ಮಕ್ಕರವರಿಗೂ ಬೇಲೂರಿಗೂ ಯಾವುದೇ ಸಂಬಂಧವಿಲ್ಲ. ಅಂತಹುದರಲ್ಲಿ ಹುಟ್ಟಿದ ಊರು ಬಿಟ್ಟು, ತನ್ನ ಗಂಡನ ಊರನ್ನು ಬಿಟ್ಟು ಬೇಲೂರಿನಲ್ಲಿ ನನ್ನ ಮ್ಯೂಸಿಯಂ ಮಾಡಿ ಎಂದು ತಿಮ್ಮಕ್ಕ ಹೇಳಿದ್ದಾರೆ ಎಂದರೆ ಯಾರಾದರೂ ನಂಬಲು ಸಾಧ್ಯವೇ? ಉಮೇಶ್ ಬರೆದ ಅಕ್ಷರಕ್ಕೆ ತಿಮ್ಮಕ್ಕ ಹೆಬ್ಬೆಟ್ಟು ಒತ್ತಿದ್ದಾರೆ. ಈ ಪತ್ರವನ್ನು ಮುಂದಿಟ್ಟುಕೊಂಡು ಉಮೇಶ್ ತಿಮ್ಮಕ್ಕನ ನಿಜವಾದ ಆಶಯಕ್ಕೆ ಕಲ್ಲುಹಾಕುತ್ತಿದ್ದಾರೆ ಎಂದು ಮಾಗಡಿ ತಾಲೂಕಿನ ಜನರು ಬೇಸರ ವ್ಯಕ್ತಪಡಿಸಿದ್ದಾರೆ.ಸಾಲುಮರದ ಬಳಿ ಮ್ಯೂಸಿಯಂ ಮತ್ತು ಪುತ್ಥಳಿ ಅಗಬೇಕು :ತಿಮ್ಮಕ್ಕ ಬೆಳೆಸಿದ ಸಾಲುಮರದ ಬಳಿ ಮ್ಯೂಸಿಯಂ ಮಾಡಬೇಕಾದದ್ದು ಧರ್ಮ. ಇದರ ನೆರಳಿನಲ್ಲಿ ನಡೆದು ಬಂದ ಜನರಿಗೆ ತಿಮ್ಮಕ್ಕನ ನಿಜವಾದ ಆಶಯ ಅರ್ಥವಾಗುತ್ತದೆ. ತಿಮ್ಮಕ್ಕನ ಬದುಕು ಬವಣೆಯ ಕಥೆಯ ಮ್ಯೂಸಿಯಂ ರೂಪಿಸಿದರರೆ ಒಂದಷ್ಟು ಜನರು ಸ್ಪೂರ್ತಿ ಪಡೆದು ಹೋಗುತ್ತಾರೆ. ತಿಮ್ಮಕ್ಕನ ಸಾಕುಮಗ ಉಮೇಶ್ ಹೇಳಿದ ಎಂಬ ಒಂದೇ ಒಂದು ಮಾತಿಗೆ ತಿಮ್ಮಕ್ಕ ಬಾಳಿ ಬದುಕಿದ ಸಾಲುಮರದ ನೆರಳಿನ ಹುಲಿಕಲ್ಲು ಗ್ರಾಮಕ್ಕೆ ಅನ್ಯಾಯ ಮಾಡಬೇಡಿ. ಈಗಾಗಲೇ ತಿಮ್ಕಕ್ಕನ ಹೆಸರಿನಲ್ಲಿ ಎರಡು ಎಕ್ಕರೆ ಜಮೀನು ಹುಲಿಕಲ್ಲಿನಲ್ಲಿದೆ. ಅದೇ ಜಮೀನಿನಲ್ಲಿಯೇ ಅವರ ಗಂಡ ಬಿಕ್ಕಲು ಚಿಕ್ಕಯ್ಯನವರ ಸಮಾಧಿಯೂ ಇದೆ. ಈ ಭೂಮಿಯನ್ನು ಪರಿಸರ ಸಂರಕ್ಷಣೆಯ ಅಧ್ಯಯನ ಕೇಂದ್ರವನ್ನು ನಿರ್ಮಾಣ ಮಾಡಲಿ ಬೇಕಿದ್ದರೆ ಅದನ್ನು ಅವರ ಸಾಕುಮಗ ಉಮೇಶ್ ರವರೇ ನೋಡಿಕೊಳ್ಳಲಿ ಅದನ್ನು ಬಿಟ್ಟು ಯಾವುದೇ ರೀತಿಯ ಭಾವುಕ ಸಂಬಂಧವಿಲ್ಲದ ಬೇಲೂರಿನಲ್ಲಿ ಮ್ಯೂಸಿಯಂ ಸ್ಥಾಪಿಸಿದರೆ ತಿಮ್ಮಕ್ಕನ ನಿಜವಾದ ಆಶಯ ಮುಂಬರುವ ತಲೆಮಾರಿಗೆ ಸ್ಪೂರ್ತಿಯಾಗುವುದಿಲ್ಲ. ಎಂದು ಮಾಗಡಿ ತಾಲೂಕಿನ ಜನರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

...ಕೋಟ್ ....ತಿಮ್ಮಕ್ಕನ ಬದುಕು ಜನರಿಗೆ ಇನ್ನಷ್ಟು ಹತ್ತಿರಕ್ಕೆ ತಲುಪಲು ಹುಲಿಕಲ್ಲು ಗ್ರಾಮ ಪರಿಸರ ಸಂರಕ್ಷಣೆಗೆ ಒಂದು ಉತ್ತಮ ಅಧ್ಯಯನ ಕೇಂದ್ರವನ್ನಾಗಲಿ ರೂಪಿಸಲು ಸರ್ಕಾರದೊಂದಿಗೆ ಮಾತನಾಡಿ ಮ್ಯೂಸಿಯಂನ್ನು ಕೂಡಾ ಹುಲಿಕಲ್ಲಿನಲ್ಲಿಯೇ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ.

- ಎಚ್.ಸಿ.ಬಾಲಕೃಷ್ಣ ಶಾಸಕ ಮಾಗಡಿ

...ಕೋಟ್ ....

ಸಂಸ್ಕಾರವೂ ಹುಲಿಕಲ್ಲಿನಲ್ಲಿಯೇ ಅವರ ಗಂಡನ ಪಕ್ಕದಲ್ಲಿಯೆ ಅಗಬೇಕಾಗಿತ್ತು. ಆದರೆ ಇನ್ನು ಮುಂದೆಯಾದರು ಇಂತಹ ತಪ್ಪು ಆಗದೇ ತಿಮ್ಮಕ್ಕರವರ ಪರಿಸರ ಸಂರಕ್ಷಣೆಯ ಆಶಯಗಳು ಈಡೇರಬೇಕಾದರೆ ಮತ್ತು ಪರಿಣಮಕಾರಿಯಾಗಿ ಇಂದಿನ ತಲೆಮಾರು ಪರಿಸರದ ಕೆಲಸ ಮಾಡಬೇಕಾದರೆ ಹುಲಿಕಲ್ಲು ಗ್ರಾಮದಲ್ಲಿ ಭವ್ಯವಾದ ಮ್ಯೂಸಿಯಂ ಮತ್ತು ಪುತ್ಥಳಿ ನಿರ್ಮಾಣವಾಗಬೇಕು.

- ರಾಜಣ್ಣ. ಉಪಾಧ್ಯಕ್ಷ ಬೆಂಗಳೂರು ಹಾಲು ಒಕ್ಕೂಟ11ಕೆಆರ್ ಎಂಎನ್ 3,4,5.ಜೆಪಿಜಿ.3.ಸಾಲುಮರದ ತಿಮ್ಮಕ್ಕ

4.ಹುಲಿಕಲ್ಲು ಗ್ರಾಮದ ಸಾಲುಮರಗಳು5.ತಿಮ್ಮಕ್ಕ ಬಾಳಿ ಬದುಕಿದ ಮನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ