ಶಿಕ್ಷಣ ಬರೀ ಹಣ ಗಳಿಸುವ ಜ್ಞಾನವಾಗದಿರಲಿ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಶಿಕ್ಷಣವು ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮೆಲ್ಲರಿಗೂ ಅತ್ಯುನ್ನತ ಸಾಮರ್ಥ್ಯವನ್ನು ತಲುಪಲು ದಾರಿ ಮಾಡಿಕೊಡುತ್ತದೆ.

ಹೂವಿನಹಡಗಲಿ: ಶಿಕ್ಷಣ ಕೇವಲ ಹಣ ಗಳಿಸುವ ಜ್ಞಾನವಾಗದೆ ಜೀವನ ಮತ್ತು ಸಂಸ್ಕಾರ ಕನ್ನಡಿಯಾಗಬೇಕು ಎಂದು ಕರ್ನಾಟಕ ಗೋವಾ ಪ್ರಾಂತ್ಯಾಧಿಕಾರಿಯ ಸಲಹೆಗಾರರಾದ ಅಲ್ಪೋನ್ಸ್ ಬ್ರಿಟ್ಟೊ ತಿಳಿಸಿದರು.

ಪಟ್ಟಣದ ಮೌಂಟ್ ಕಾರ್ಮೆಲ್ ಸಿಬಿಎಸ್ಇ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಂತಿ ಸೌಹಾರ್ದತೆ ವೈವಿಧ್ಯಮಯ ದೇಶ ನಮ್ಮದು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ದೇಶಪ್ರೇಮವನ್ನು ಮೂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಶಿಕ್ಷಣವು ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮೆಲ್ಲರಿಗೂ ಅತ್ಯುನ್ನತ ಸಾಮರ್ಥ್ಯವನ್ನು ತಲುಪಲು ದಾರಿ ಮಾಡಿಕೊಡುತ್ತದೆ. ಜೀವನದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುವಾಗ, ಶಿಕ್ಷಣ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಆರ್‌ಪಿ ಚನ್ನವೀರನಗೌಡ, ಶಿಸ್ತು, ಸಂಯಮ ಮತ್ತು ಆಂಗ್ಲ ಭಾಷೆ ಕಲಿಕೆಯಲ್ಲಿ ಹಡಗಲಿ ಮೌಂಟ್ ಕಾರ್ಮೆಲ್ ಶಾಲೆ ಕೊಡುಗೆ ಆಪಾರ ಎಂದರು.

ಈ ಸಂದರ್ಭದಲ್ಲಿ ಹಡಗಲಿ ಬಾಲಯೇಸುವಿನ ದೇವಾಲಯದ ಮಠಾಧಿಪತಿ ಫಾದರ್ ಡೆನ್ಜಿಲ್ ವೇಗಸ್, ಮೌಂಟ್ ಕಾರ್ಮೆಲ್ ಶಾಲೆಯ ಪ್ರಾಂಶುಪಾಲರಾದ ವಿಕ್ಟರ್ ವಿಜಯ್ ಪೈಸ್, ಸಂಚಾಲಕರಾದ ಫಾದರ್ ಸಂದೀಪ್ ಕುಮಾರ್, ಬೆಂಗಳೂರಿನ ಫಾದರ್ ಹೆನ್ರಿ ಮೋರಸ್, ಬೇಲೂರಿನ ಫಾದರ್ ಸಿಲ್ವೆಸ್ಟರ್ ಪೀರೆರಾ, ಮಂಗಳೂರಿನ ವಲೇರಿಯನ್ ಲೋಬೊ, ಅಸ್ಸಿಸ್ ಕಾನ್ವೆಂಟ್‌ನ ಮುಖ್ಯಸ್ಥರಾದ ಸಿಸ್ಟರ್ ರೋಜಿಟಾ, ಬೇಲೂರು ಮೌಂಟ್ ಕಾರ್ಮೆಲ್ ಶಾಲೆಯ ಪ್ರಾಂಶುಪಾಲ ಫಾದರ್ ಪ್ರಕಾಶ್ ತಾವ್ರೂ, ಫಾದರ್ ಅನಿಲ್ ಪ್ರಶಾಂತ್, ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಜೀವನ್ ಕುಮಾರ್ ಡಿ.ಎಂ., ಪ್ರಶಾಂತ್ ಎಲ್. ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ರೂಪಾಕೃಷ್ಣ, ದಯಾನಂದ ಎಂ. ನಿರ್ವಹಿಸಿದರು. ಶೋಭಾ ವಂದಿಸಿದರು. ಫಾದರ್ ವಿಕ್ಟರ್ ವಿಜಯ್ ಪೈಸ್ ಸ್ವಾಗತಿಸಿದರು.

Share this article