ಹಾನಗಲ್ಲ: ಯುವಕರಲ್ಲಿ ದೇಶಪ್ರೇಮ ಬೆಳೆಸುವ ಶಿಕ್ಷಣ ಅಗತ್ಯವಾಗಿದೆ. ಎನ್‌ಎಸ್‌ಎಸ್‌ನಂತಹ ಶಿಬಿರಗಳು ಸಮಾಜಸೇವೆ, ದೇಶದ ಏಕತೆಗೆ ಬೇಕಾಗುವ ಸಂಸ್ಕಾರವನ್ನು ನೀಡಲಿ ಎಂದ ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಪ್ರಕಾಶ್ ಹೊಳೇರ, ಇಂದಿನ ಯುವ ಜನಾಂಗ ಗ್ರಾಮವನ್ನು ತೊರೆದು ನಗರದ ಪ್ರದೇಶವನ್ನು ಇಷ್ಟಪಡುತ್ತಿದ್ದು, ಇಂದು ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಇಂದಿನ ಯುವಕರು ಗ್ರಾಮಗಳಲ್ಲಿ ವಾಸವಾಗುವ ಜತೆಗೆ ಸರ್ಕಾರದ ಹಲವಾರು ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ಮುಟ್ಟಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ವಿಶ್ವನಾಥ ಬೊಂದಾಡೆ, ಈ ಗ್ರಾಮದಲ್ಲಿ ಕೈಗೊಳ್ಳುವ ಹಾಗೂ ಮಾಡಬೇಕಾದಂತಹ ಕಾರ್ಯಗಳಾದ ರಕ್ತದಾನ ಶಿಬಿರ, ವನಮಹೋತ್ಸವ ಹಾಗೂ ನುಡಿ ಸಂಭ್ರಮ ಕಾರ್ಯಕ್ರಮ ಮತ್ತು ಜಾಗೃತಿಯ ಕಾರ್ಯಕ್ರಮಗಳ ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಶ್ರೀ ಕುಮಾರೇಶ್ವರ ಸಲಹಾ ಮಂಡಳಿಯ ಸದಸ್ಯ ಗುರುಸಿದ್ದಪ್ಪ ಕೊಂಡೋಜಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಜ್ಞಾವಿಧಿಯನ್ನು ಪ್ರಾಚಾರ್ಯ ಡಾ. ಸದಾಶಿವಪ್ಪ ಎನ್. ನಡೆಸಿಕೊಟ್ಟರು. ಗ್ರಾಪಂ ಅಧ್ಯಕ್ಷೆ ಶಿಲ್ಪಾ ರಾಜೇಂದ್ರ ಪದ್ಮೋಜಿ, ಅನಂತರಾಜು ಹವಳಣ್ಣನವರ್, ಮುಖ್ಯೋಪಾಧ್ಯಾಯ ರಾಜಶೇಖರ್ ಹಳ್ಳಿಬೈಲ, ಸೂರಜ್ ಅಸುಂಡಿ, ನಂದಿನಿ ಪಾಟೀಲ್ ಹಾಗೂ ಡಾ. ಪ್ರಕಾಶ್ ಹುಲ್ಲೂರ ಮತ್ತು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.