ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಬೇಕು: ಡಾ. ರಾಜಣ್ಣ

KannadaprabhaNewsNetwork | Published : Jun 23, 2024 2:08 AM

ಸಾರಾಂಶ

ಚಿಕ್ಕಮಗಳೂರು, ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡಿದರಷ್ಟೇ ಸಾಲದು, ಅವರಲ್ಲಿ ಉತ್ತಮ ಸಂಸ್ಕಾರ ಮತ್ತು ಸನ್ನಡತೆ ಕಲಿಸುವ ಕೆಲಸ ಮಾಡಬೇಕು ಎಂದು ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎ. ರಾಜಣ್ಣ ಸಲಹೆ ಮಾಡಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡಿದರಷ್ಟೇ ಸಾಲದು, ಅವರಲ್ಲಿ ಉತ್ತಮ ಸಂಸ್ಕಾರ ಮತ್ತು ಸನ್ನಡತೆ ಕಲಿಸುವ ಕೆಲಸ ಮಾಡಬೇಕು ಎಂದು ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎ. ರಾಜಣ್ಣ ಸಲಹೆ ಮಾಡಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣವಂತರ ಸಂಖ್ಯೆ ಹೆಚ್ಚಿದೆ. ಆದರೆ, ಅವರು ಕೇವಲ ವಿದ್ಯೆಯನ್ನಷ್ಟೇ ಕಲಿತಿದ್ದಾರೆ. ಅವರಲ್ಲಿ ಸಂಸ್ಕಾರದ ಕೊರತೆ ಇದೆ ಹಾಗಾಗಿ ಶಿಕ್ಷಣವಂತರೇ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಅಟ್ಟುತ್ತಿದ್ದಾರೆ, ರಾಷ್ಟ್ರದಲ್ಲಿ ಬಹಳಷ್ಟು ಅಪರಾಧ ಪ್ರಕರಣಗಳು ವಿದ್ಯಾವಂತರಿಂದಲೇ ನಡೆಯುತ್ತಿವೆ ಎಂದು ವಿಷಾಧಿಸಿದರು.

ಅವಿದ್ಯಾವಂತರು ತಮ್ಮ ಹೆತ್ತವರನ್ನು ವೃದ್ದಾಶ್ರಮಗಳಿಗೆ ಕಳುಹಿಸದೇ ತಾವೇ ಸಾಕಿ ಸಲಹುತ್ತಿದ್ದಾರೆ. ಕಾರಣ, ಅವರಲ್ಲಿ ಸಂಸ್ಕಾರವಿದೆ. ಪೋಷಕರು ಮತ್ತು ಶಿಕ್ಷಕರು ಇದನ್ನು ಮನಗಾಣಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರ ಸನ್ನಡತೆ ಹೆತ್ತವರನ್ನು ಸಲಹುವುದು ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು. ಹಾಗಾದಾಗ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗುತ್ತದೆ ಎಂದರು.ವಿದ್ಯಾರ್ಥಿ ಸಂಘಗಳು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿ ಎಂದ ಅವರು, ವಿದ್ಯಾರ್ಥಿಗಳು ಮೊಬೈಲ್ ನಿಂದ ಹೊರ ಬಂದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು, ಪ್ರಾಮಾಣಿಕತೆ, ಶಿಸ್ತು, ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಉತ್ತಮ ಹವ್ಯಾಸ ಬೆಳೆಸಿಕೊಂಡರೆ ನಾಯಕರಾಗಬಹುದು ಎಂದು ತಿಳಿಸಿದರು. ಸಂಜೀವಿನಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಎಸ್. ಶಾಂತಕುಮಾರಿ, ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳು ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವೆ ಸಂಪರ್ಕ ಸೇತುವಿನ ಹಾಗೆ ಕೆಲಸ ಮಾಡಬೇಕು. ಶಾಲೆ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸ್ಥೆ ಖಜಾಂಚಿ ಎಂ.ಪಿ. ಉಡುಪ, ಪ್ರಾಂಶುಪಾಲರಾದ ಎಸ್‌.ಆರ್‌. ಹೇಮಾ, ಉಪ ಪ್ರಾಂಶುಪಾಲರಾದ ಕುಮುದಾ ಎಂ. ಕಿಣಿ, ವಿದ್ಯಾರ್ಥಿಗಳಾದ ಬಿ.ಎಲ್. ಯೋಗೇಶ್ವರಿ, ನಿಶ್ಚಿತ, ಬೃಂದಾ, ಅಕ್ಷರಾ ಎಸ್. ಗೌಡ ಉಪಸ್ಥಿತರಿದ್ದರು.

22 ಕೆಸಿಕೆಎಂ 2ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಡಾ. ರಾಜಣ್ಣ ಉದ್ಘಾಟಿಸಿದರು. ಶಾಂತಕುಮಾರಿ, ಎಂ.ಪಿ. ಉಡುಪ, ಹೇಮಾ, ಕುಮುದಾ ಇದ್ದರು.

Share this article