ಹಾವೇರಿ: ಧರ್ಮ ಜಾಗೃತಿಯ ಜೊತೆಗೆ ತ್ರಿವಿಧ ದಾಸೋಹದ ಮೂಲಕ ಮಾನವೀಯ ಮೌಲ್ಯದ ಸಮಾಜ ಕಟ್ಟುವಲ್ಲಿ ವೀರಶೈವ ಲಿಂಗಾಯತ ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ಕುಳೇನೂರ ಗ್ರಾಮದಲ್ಲಿ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ಭಕ್ತರ ದೇಣಿಗೆ ಹಣದಲ್ಲಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಗತ್ತಿನಲ್ಲಿ ಹಲವು ಧರ್ಮಗಳಿದ್ದರೂ ಯಾವ ಧರ್ಮವೂ ಮೇಲು-ಕೀಳಲ್ಲ. ವೀರಶೈವ ಲಿಂಗಾಯತ ಧರ್ಮ ಗುರುವಿರಕ್ತರು ಕೂಡಾ ಧರ್ಮ ಜಾಗೃತಿಯ ಜೊತೆಗೆ ವಸತಿ ಸಹಿತ ಅನ್ನ, ಜ್ಞಾನ ದಾಸೋಹ ಮಾಡುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಬಂಥನಾಳ ಶಿವಯೋಗಿಗಳ, ಸಿದ್ಧಗಂಗೆಯ ಶಿವಕುಮಾರ ಶ್ರೀಗಳು, ಸುತ್ತೂರು ಶ್ರೀಗಳು ಹೀಗೆ ವೀರಶೈವ ಲಿಂಗಾಯತ ಮಠಗಳು ಜಾತಿ, ಮತ-ಪಂಥ, ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಹತ್ತಾರು ಸಾವಿರ ಮಕ್ಕಳಿಗೆ ಜ್ಞಾನ, ಅನ್ನ, ಅರಿವು, ಆಚಾರ, ಸಂಸ್ಕೃತಿ ಸಹಿತ ಮಾನವೀಯ ಮೌಲ್ಯಗಳ ಸಹಿತ ಅಕ್ಷರ ದಾಸೋಹ ನೀಡುವ ಮೂಲಕ ಉತ್ತಮ ಸಂಸ್ಕಾರದ ಸಮಾಜ ಕಟ್ಟುವ ಸೇವೆ ಮಾಡುತ್ತಿದ್ದಾರೆ ಎಂದರು. ವೀರಶೈವ ಲಿಂಗಾಯತ ಮಠಗಳಲ್ಲಿ ಜ್ಞಾನ ಪಡೆದವರು ಇದೀಗ ಐಎಎಸ್, ಐಪಿಎಸ್ ಮಾತ್ರವಲ್ಲದೇ ಜಗತ್ತಿನಾದ್ಯಂತ ಉನ್ನತ ಸ್ಥಾನದಲ್ಲಿದ್ದು, ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆಲ್ಲ ಸಿದ್ಧಗಂಗಾ ಸೇರಿದಂತೆ ನಾಡಿನ ವೀರಶೈವ ಲಿಂಗಾಯತ ಧರ್ಮಗಳ ಮಠಾಧೀಶರ ಮಾನವೀಯ ಮೌಲ್ಯದ ಜ್ಞಾನ ಸಂಸ್ಕಾರವೇ ಪ್ರಮುಖ ಕಾರಣ ಎಂದರು.ಹಾವೇರಿಯ ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶ್ರೀಗಳು, ಉಪ್ಪುಣಿಸಿ ಮುರುಘಾಮಠದ ಜಯಬಸವ ಶ್ರೀಗಳು, ಕುಳೇನೂರ ಶಿವಲಿಂಗೇಶ್ವರ ಮಠದ ವಾಗೀಶ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು.ಕಾಂಗ್ರಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ವೀರೇಶ ಮತ್ತಿಹಳ್ಳಿ, ಹಾವೇರಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಎಂ.ಹಿರೇಮಠ, ತಾಲೂಕ ಅಧ್ಯಕ್ಷ ಶಂಭನಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಶಶಿಧರ ಮತ್ತಿಹಳ್ಳಿ, ಚಿನ್ನವ್ವ ಬಡವಣ್ಣವರ, ಮಲ್ಲೇಶ ಮತ್ತಿಹಳ್ಳಿ, ಬಸಲಿಂಗಪ್ಪ ಬಂಕಾಪುರ, ಚಂದ್ರಪ್ಪ ನೆಗಳೂರು, ವೀರಣ್ಣ ಹಾವೇರಿ, ಸಿ.ಬಿ.ಶೀಗಿಹಳ್ಳಿ, ಎಂ.ಎಂ. ಮೈದೂರು ಸೇರಿದಂತೆ ಇತರರು ಇದ್ದರು. ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡುವ ಜೊತೆಗೆ ಹಾವೇರಿ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹೇಳಿದರು.