ಮಧ್ಯವರ್ತಿಗಳ ಹಾವಳಿ ತಡೆಗೆ ಆನ್‌ಲೈನ್‌ ಖರೀದಿಗೆ ಪ್ರಯತ್ನ

KannadaprabhaNewsNetwork |  
Published : May 27, 2025, 12:03 AM IST
ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಲಿಂಬೆ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೆ ಆನ್‌ಲೈನ್‌ ಮುಖಾಂತರ ಖರೀದಿ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಲಿಂಬೆ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೆ ಆನ್‌ಲೈನ್‌ ಮುಖಾಂತರ ಖರೀದಿ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ನಿರ್ಮಿಸಿದ ಲೆಮನ್ ಟೀ ಪಾಯಿಂಟ್ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿಯೇ ಅತೀಹೆಚ್ಚು ಲಿಂಬೆ ಬೆಳೆಯುವ ಇಂಡಿಯಲ್ಲಿಯೇ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ ಕಚೇರಿ ಆರಂಭಿಸಲಾಗಿದೆ. ಈ ಭಾಗದ ಲಿಂಬೆಗೆ ರಾಜ್ಯಮಟ್ಟದ ಸ್ಥಾನಮಾನ ದೊರೆಯುವಂತೆ ಮಾಡಲಾಗಿದೆ. ಲಿಂಬೆಯಿಂದ ಹಲವು ಉಪಯೋಗಗಳಿದ್ದು, ಲಿಂಬೆಗೆ ಪ್ರೋತ್ಸಾಹಿಸುವ ಕೆಲಸ ಇನ್ನೂ ಹೆಚ್ಚಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಲಿಂಬೆ ಪ್ರಪಂಚದ ಮೂಲೆ ಮೂಲೆಯಲ್ಲಿ ಪ್ರಜ್ವಲಿಸಲಿ. ಕಾಫಿ ಮಂಡಳಿಯಂತೆ ಲಿಂಬೆ ಅಭಿವೃದ್ಧಿ ಮಂಡಳಿ ಮುಂಬರುವ ದಿನದಲ್ಲಿ ಅತ್ಯುನ್ನತ ಸ್ಥಾನ ಪಡೆಯಲಿದ್ದು, ಇಂಡಿ ರಾಜ್ಯದ ಗಡಿ ಭಾಗದಲ್ಲಿದ್ದರೂ ರಾಜ್ಯದ ಜನ ಇಂಡಿಯ ಕಡೆ ತಿರುಗಿ ನೋಡುವಂತೆ ಮಾಡಲಾಗಿದೆ ಎಂದು ತಿಳಿಸಿದರು.ಈ ಬಾರಿ ಬಜೆಟ್‌ನಲ್ಲಿ ಇಂಡಿಗೆ ಹೆಚ್ಚು ಅನುದಾನ ನೀಡಿದ್ದು, ₹ 3 ಸಾವಿರ ಕೋಟಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ, ₹ 531 ಕೋಟಿಯಲ್ಲಿ ಪಂಢರಪೂರ, ಚಡಚಣ, ಝಳಕಿ, ಇಂಡಿ ಹಾಗೂ ಆಲಮೇಲ, ಗಾಣಗಾಪೂರಕ್ಕೆ ರಸ್ತೆ ಅಭಿವೃದ್ಧಿ ಮಂಜೂರಾಗಿದೆ. ತೊಂದರೆಯಲ್ಲಿರುವ ರೈತರ ಸಹಾಯಕ್ಕೆ ಬರುವುದು ಮನುಷ್ಯ ಧರ್ಮ. ಕೆಬಿಜೆಎನ್ಎಲ್ ಹಿರಿಯ ಅಧಿಕಾರಿ ಮನೋಜಕುಮಾರ ಕಾಲುವೆ, ಹಳ್ಳ, ಬಾಂದಾರಗಳಿಗೆಲ್ಲ ನೀರು ಹರಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್‌ ಬಿ.ಎಸ್.ಕಡಕಭಾವಿ, ತಾಪಂ ಇಒ ನಂದೀಪ ರಾಠೋಡ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ್ ಸೌದಾಗರ, ಲಿಂಬೆ ಮಂಡಳಿ ಪ್ರಭಾರ ಎಂಡಿ ಎಸ್.ಎಸ್.ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಫಯಾಜ ದೇಸಾಯಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ಇಲಿಯಾಸ ಬೊರಾಮಣಿ, ಭೀಮಣ್ಣ ಕವಲಗಿ, ಜಾವೀದ ಮೊಮಿನ, ಸುಧೀರ ಕರಕಟ್ಟಿ, ಎಇಇ ದಯಾನಂದ ಮಠ, ಶಿವಾಜಿ ಬನಸೋಡೆ, ಡಿ.ಎ.ಮುಜಗೊಂಡ ಇತರರು ಇದ್ದರು.

-----

ಬಾಕ್ಸ್‌

ನಗರವನ್ನಾಳುವವರಿಗೆ ನಾಚಿಕೆ ಆಗಬೇಕು

ವಿಜಯಪುರ ನಗರದ 31 ವಾರ್ಡ್‌ಗಳಿಗೆ 15 ದಿನಕ್ಕೊಮ್ಮೆ ನೀರು ಒದಗಿಸುತ್ತಿದ್ದು, ನಗರವನ್ನಾಳುವವರಿಗೆ ನಾಚಿಕೆ ಆಗಬೇಕು. ಲಕ್ಷ ಜನಸಂಖ್ಯೆಗೆ ದೊರೆಯುವಂತೆ ಇಂಡಿ ಪಟ್ಟಣಕ್ಕೆ 24*7 ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ದಬ್ಬಾಳಿಕೆಗೆ ಇಲ್ಲಿ ಆಸ್ಪದ ಇರುವುದಿಲ್ಲ. ಸಹಬಾಳ್ವೆ, ಸೌಜನ್ಯಕ್ಕೆ ಮಾತ್ರ ಅವಕಾಶವಿದೆ. ಬಸವಣ್ಣನವರು ಜನಿಸಿದ ನಾಡಿನಲ್ಲಿ ಸರ್ವರು ಸಮಾನರಾಗಿ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಲಾಗಿದ್ದು, ಮಳೆ ಹಬ್ಬ ನಿರ್ಮಾಣವಾಗಲು ಪ್ರತಿಯೊಬ್ಬರು ಮನೆಗಳ ಮುಂದೆ, ರೈತರು ಜಮೀನಿನ ಬದುವಿಗೆ ಸಸಿಗಳನ್ನು ನೆಡಬೇಕು. ಸಿದ್ದೇಶ್ವರ ಶ್ರೀಗಳ ಪುಣ್ಯದಿಂದ ಸಾವಳಂಗ ಅರಣ್ಯ ಪ್ರದೇಶದಲ್ಲಿ ಅರಣ್ಯ ಬೆಳೆಸಿದ್ದರಿಂದ ಎಲ್ಲೆಡೆ ಹಚ್ಚ ಹಸಿರಾಗಿದೆ. ಈ ರೀತಿ ಎಲ್ಲೆಡೆ ಆಗಲು ಸಸಿಗಳನ್ನು ನೆಡಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್‌ಗೆ ಸ್ವಂತ ಆರ್ಥಿಕ ಸಂಪನ್ಮೂಲ: ಮಂಜುನಾಥಗೌಡ
ರವಿ ಗೂಡು ಸೇರಿದ ೮೦ ಮಂದಿ ನಿವೇಶನ ರಹಿತರು..!