ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈದುಲ್‌ ಫಿತ್ರ್‌ ಸಡಗರ

KannadaprabhaNewsNetwork |  
Published : Apr 01, 2025, 12:48 AM IST
ಬಾವುಟಗುಡ್ಡೆ ಮಸೀದಿಯಲ್ಲಿ ಹಬ್ಬದ ಪ್ರಾರ್ಥನೆಯಲ್ಲಿ ನಿರತರಾದ ಸ್ಪೀಕರ್‌ ಯು.ಟಿ. ಖಾದರ್. | Kannada Prabha

ಸಾರಾಂಶ

ಪ್ರಾರ್ಥನೆ ಬಳಿಕ ಪರಸ್ಪರ ಹಸ್ತ ಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ವಿಶೇಷ ಭೋಜನ ಬಳಿಕ, ನೆರೆಹೊರೆಯವರು, ಸಂಬಂಧಿಕರ ಮನೆಗೆ ತೆರಳಿ ಹಬ್ಬದ ಶುಭಾಶಯ ತಿಳಿಸಲಾಯಿತು. ಇದೇ ವೇಳೆ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಬಿರತ್‌ಗಾಗಿ ಪ್ರಾರ್ಥಿಸಿದರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್‌ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಶ್ರದ್ಧೆಯಿಂದ ಸಂಭ್ರಮಿಸಿದರು.

ಎಲ್ಲ ಮಸೀದಿಗಳಲ್ಲಿ ಹಬ್ಬದ ಪ್ರಾರ್ಥನೆ, ಡ್ರಗ್ಸ್‌ ಮುಕ್ತ ಜಿಲ್ಲೆ ಮಾಡಲು ಧರ್ಮಗುರುಗಳು, ಮುಖಂಡರ ಕರೆ

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸೋಮವಾರ ಈದುಲ್‌ ಫಿತ್ರ್‌ ಹಬ್ಬವನ್ನು ಸಡಗರದಿಂದ ಆಚರಿಸಿದರು. ಮುಂಜಾನೆಯಿಂದಲೇ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.ಪವಿತ್ರ ರಮಝಾನ್‌ನ 29 ವ್ರತಗಳನ್ನು ಅನುಷ್ಠಾನಗೊಳಿಸಿದ ಮುಸ್ಲಿಮರು ಕೊನೆ ದಿನ ಈದುಲ್‌ ಫಿತ್ರ್‌ ಆಚರಿಸುವುದರೊಂದಿಗೆ ದೇವರ ಕೃಪೆಗೆ ಪಾತ್ರರಾದರು.ವಿವಿಧ ಮಸೀದಿಗಳಲ್ಲಿ ಈದ್‌ ನಮಾಝ್‌- ಪ್ರವಚನ ನಡೆಯಿತು.

ಪ್ರಾರ್ಥನೆ ಬಳಿಕ ಪರಸ್ಪರ ಹಸ್ತ ಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ವಿಶೇಷ ಭೋಜನ ಬಳಿಕ, ನೆರೆಹೊರೆಯವರು, ಸಂಬಂಧಿಕರ ಮನೆಗೆ ತೆರಳಿ ಹಬ್ಬದ ಶುಭಾಶಯ ತಿಳಿಸಲಾಯಿತು. ಇದೇ ವೇಳೆ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಬಿರತ್‌ಗಾಗಿ ಪ್ರಾರ್ಥಿಸಿದರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್‌ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಶ್ರದ್ಧೆಯಿಂದ ಸಂಭ್ರಮಿಸಿದರು.

ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಝೀನತ್‌ ಬಕ್ಷ್‌ ಕೇಂದ್ರ ಜುಮ್ಮಾ ಮಸೀದಿಯ ಖತೀಬ ಅಬುಲ್‌ ಅಕ್ರಮ್‌ ಮುಹಮ್ಮದ್‌ ಬಾಖವಿ ನಮಾಝ್ ನೆರವೇರಿಸಿದರು. ಮಂಗಳೂರು ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಖುತ್ಬಾ ಪ್ರವಚನ ನೀಡಿದರು.

ಪ್ರೀತಿ ವಿಶ್ವಾಸದ ಸಂದೇಶ ಸಾರೋಣ- ಖಾದರ್‌:

ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಹಬ್ಬದ ಸಂದೇಶ ನೀಡಿ, ಪರಸ್ಪರ ಪ್ರೀತಿ, ವಿಶ್ವಾಸದ ಸಂದೇಶ ಸಾರುವುದೇ ಹಬ್ಬದ ಉದ್ದೇಶ. ರಂಜಾನ್‌ನ ಒಂದು ತಿಂಗಳಲ್ಲಿ ಉಪವಾಸ ವ್ರತ, ಪರೋಪಕಾರ, ಸಹನೆ, ತಾಳ್ಮೆಯನ್ನು ಕಲಿತಿರುವ ಮುಸ್ಲಿಮರು, ಅದನ್ನು ಒಂದು ತಿಂಗಳಿಗೆ ಸೀಮಿತಗೊಳಿಸದೆ, ಮುಂದಿನ ದಿನಗಳಲ್ಲೂ ಮುಂದುವರಿಸಿ ಬಲಿಷ್ಠ ಭಾರತ ಕಟ್ಟಲು ತಮ್ಮ ಕೊಡುಗೆ ನೀಡಬೇಕು. ಡ್ರಗ್ಸ್‌ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಕೈಜೋಡಿಸಬೇಕು. ವಿಶ್ವ ಶಾಂತಿಗಾಗಿ ಪ್ರಾರ್ಥಿಸಬೇಕು ಎಂದರು.

ಝೀನತ್‌ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ ಮಾತನಾಡಿ, ರಮ್ಜಾನ್‌ ತಿಂಗಳಿಡೀ ಇಬಾದತ್‌ ಮಾಡಿದ್ದು, ಅದರ ಸಮಾರೋಪವಾಗಿ ಈದ್‌ ಆಚರಿಸುತ್ತಿದ್ದೇವೆ. ಎಲ್ಲರೂ ಪ್ರವಾದಿ ಹೇಳಿದಂತೆ ನಡೆಯುವ ಮೂಲಕ ಅಲ್ಲಾಹನ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ಜನರನ್ನು ಒಟ್ಟು ಸೇರಿಸುವುದೇ ಹಬ್ಬದ ಸಾರ. ಈ ಹಬ್ಬದೊಂದಿಗೆ ಸಮಾಜದಲ್ಲಿ ಸೌಹಾರ್ದತೆ ಹೆಚ್ಚಲಿ. ಸಮಾಜವನ್ನು ಕಟ್ಟಲು ಎಲ್ಲರೂ ಒಟ್ಟಿಗೆ ದುಡಿಯೋಣ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್‌. ಶುಭ ಹಾರಿಸಿದರು. ನಮಾಜಿನ ನಿಯಮಗಳ ಬಗ್ಗೆ ಮೌಲಾನ ಮುಫ್ತಿ ರಿಯಾಝುಲ್‌ ಹಕ್‌ ರಶಾದಿ ಮಾಹಿತಿ ನೀಡಿದರು. ಎಸ್‌.ಎಂ ರಶೀದ್‌ ವಂದಿಸಿದರು. ಅಹ್ಮದ್‌ ಬಾವ ಬಜಾಲ… ನಿರೂಪಿಸಿದರು.

ಡ್ರಗ್ಸ್‌ಗೆ ಕಡಿವಾಣ ಅಗತ್ಯ:

ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್ ಹಾಗೂ ಸ್ಥಳೀಯ ಖತೀಬರಾದ ಅಬ್ದುಲ್ ನಾಸಿರ್ ಸಅದಿ ನೇತೃತ್ವದಲ್ಲಿ ಹಬ್ಬ ಆಚರಿಸಲಾಯಿತು. ಮಕ್ಕಳು ಡ್ರಗ್ಸ್‌ನಂತಹ ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ, ಅದಕ್ಕೆ ಕಡಿವಾಣ ಹಾಕಿ ದೀನೀ ಬೋಧಕರನ್ನಾಗಿ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಖತೀಬರು ಕರೆ ನೀಡಿದರು. ಈದ್ ನಮಾಝ್ ಬಳಿಕ ಖುತುಬಾ ಪಾರಾಯಣ ನಡೆಸಿ, ಪ್ರಾರ್ಥನೆ ಸಲ್ಲಿಸಲಾಯಿತು.ಬಿಜೆಎಂ ಮಾಜಿ ಅಧ್ಯಕ್ಷ ಬಿ.ಎನ್. ಅಬ್ಬಾಸ್, ಸಂಚಾಲಕರಾದ ಬಿ. ಫಕ್ರುದ್ದಿನ್, ಮೊಯಿದಿನ್ ಕುಂಜಿ, ಅಶ್ರಫ್ ಕೆ.ಇ., ಎಚ್.ಎಸ್. ಹನೀಫ್, ಎಂ.ಎಚ್. ಮೊಹಮ್ಮದ್, ಅಬ್ದುಲ್ ಸಲಾಂ, ಅಬ್ದುಲ್ ಹಮೀದ್, ನಝೀರ್ ಬಜಾಲ್ ಪಾಲ್ಗೊಂಡರು.

ಇದಲ್ಲದೆ, ನಗರದ ಪ್ರಮುಖ ಮಸೀದಿಗಳಾದ ಕುದ್ರೋಳಿ ಸಲಫಿ ಮಸೀದಿ ಮೈದಾನ, ಕುದ್ರೋಳಿ ಜಾಮಿಯಾ ಮಸೀದಿ, ವಾಸ್‌ಲೇನ್‌ ಮಸ್ಜಿದುಲ್ ಎಹ್ಸಾನ್‌, ಕಂಕನಾಡಿ, ಪಂಪ್‌ವೆಲ್, ಬೋಳಾರ ಇತ್ಯಾದಿ ಮಾತ್ರಲ್ಲದೆ, ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಹಬ್ಬದ ನಮಾಜ್ ಮತ್ತು ಪ್ರವಚನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!