ಈದ್‌ ಮಿಲಾದ್‌: ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ

KannadaprabhaNewsNetwork |  
Published : Aug 25, 2026, 01:45 AM IST
ಪೋಟೋ: 24ಎಸ್‌ಎಂಜಿಕೆಪಿ05: ಬಿ.ನಿಖಿಲ್ | Kannada Prabha

ಸಾರಾಂಶ

ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈದ್ ಮಿಲಾದ್‌ ಹಬ್ಬದ ಭದ್ರತೆಗಾಗಿ ಇಡೀ ಜಿಲ್ಲೆಯಲ್ಲಿ ಸುಮಾರು 3000 ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 12 ಕೆಎಸ್‌ಆರ್‌ಪಿ ತುಕುಡಿಗಳು, ಒಂದು ಆರ್‌ಎಎಫ್ ತುಕುಡಿ ಹಾಗೂ ಒಂದು ಎಸ್‌ಐಆರ್ ತುಕುಡಿಯನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ 21 ಡಿಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಶಾಂತಿ ಸಭೆಗಳನ್ನು ನಡೆಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಮಸೀದಿ ಹಾಗೂ ವಿವಿಧ ಸಮಿತಿ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗಿದೆ. ಅಗತ್ಯ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಕೂಡ ನೀಡಲಾಗಿದೆ ಎಂದರು.

ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕಂಟ್ರೋಲ್ ಪ್ಲಾನ್ ಮತ್ತು ಎಕ್ಸೈಸ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕಗಳ ಡೆಸಿಬಲ್ ಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಹೊರಡಿಸಿರುವ ಎಲ್ಲಾ ಆದೇಶಗಳನ್ನು ಮಸೀದಿ ಹಾಗೂ ಸಮಿತಿ ಮುಖಂಡರಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.

ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ಅಥವಾ ಹಬ್ಬದ ಸಂದರ್ಭದಲ್ಲಿ ಇತರೆ ಸಮುದಾಯಗಳಿಗೆ ಧಕ್ಕೆ ತರುವಂತಹ ಹೇಳಿಕೆ, ಕೃತ್ಯ ಅಥವಾ ದ್ವೇಷ ಮೂಡಿಸುವ ಪ್ರಯತ್ನ ಕಂಡುಬಂದರೆ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

13 ಮಂದಿ ಗಡಿಪಾರು, 312 ಮಂದಿಗೆ ಭದ್ರತಾ ಕ್ರಮ: ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದಾದವರ ವಿರುದ್ಧ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸುಮಾರು 13 ಮಂದಿಯನ್ನು ಗಡಿಪಾರು ಮಾಡಲಾಗಿದ್ದು, 110ರ ಅಡಿಯಲ್ಲಿ 312 ಮಂದಿಯ ವಿರುದ್ಧ ಸೆಕ್ಯುರಿಟಿ ಪ್ರೊಸೀಡಿಂಗ್ಸ್ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿರುವವರು, ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ರೀಲ್ಸ್‌ಗಳ ಮೇಲೂ ನಿಗಾ: ವೈರಲ್ ಆಗಿರುವ ರೀಲ್ಸ್‌ಗಳನ್ನು ಪೊಲೀಸರು ಈಗಾಗಲೇ ಗಮನಿಸಿದ್ದು, ಅವುಗಳ ವಿರುದ್ಧ ಡಿಆರ್ ಪ್ರಕ್ರಿಯೆ ಆರಂಭಿಸಿ, ಸಂಬಂಧಪಟ್ಟ ವಿಷಯಗಳನ್ನು ಡಿಲೀಟ್ ಮಾಡಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿರುವ ವಿಷಯವನ್ನು ಪರಿಶೀಲಿಸಬೇಕು. ದ್ವೇಷ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯವನ್ನು ಹಂಚಿಕೊಂಡರೆ ಅಂತಹವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 36 ಚೆಕ್‌ಪೋಸ್ಟ್‌ಗಳು: ಜಿಲ್ಲಾದ್ಯಂತ 36 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮ ಸಾಗಾಣಿಕೆ ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಈಗಾಗಲೇ ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಈದ್ ಹಬ್ಬವನ್ನು ಆಚರಿಸೋಣ ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಯುವಕರು ಸಮಾಜಕ್ಕೆ ಕೊಡುಗೆ ನೀಡಿ: ಮಾ.ಸ ನಂಜುಂಡಸ್ವಾಮಿ
ವಿವಿಧ ಪ್ರದೇಶಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ, ಪರಿಶೀಲನೆ