ಕಸ್ತೂರಿರಂಗನ್ ವರದಿ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರ: ನೆಂಪೆ ದೇವರಾಜ್

KannadaprabhaNewsNetwork |  
Published : Aug 25, 2026, 01:45 AM IST
ಫೊಟೋ 24 ಟಿಟಿಎಚ್ 01: ಮಲೆನಾಡು ಹೋರಾಟ ಕ್ರಿಯಾಸಮಿತಿ ವತಿಯಿಂದ ಕಸ್ತೂರಿರಂಗನ್ ವರದಿ ವಿರೋದಿಸಿ ರೈತರ 600 ಅರ್ಜಿಗಳ ಸಹಿತ ಸೋಮವಾರ ತಹಶೀಲ್ದಾರ್ ಎಸ್.ರಂಜಿತ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯ್ತು. | Kannada Prabha

ಸಾರಾಂಶ

ಕಸ್ತೂರಿರಂಗನ್ ವರದಿಯ ಹಿಂದೆ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರವಿದೆ. ರಾಜಕೀಯ ಧುರೀಣರು ವರದಿಯನ್ನು ತಮ್ಮ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು ಎಂದು ಮಲೆನಾಡು ಹೋರಾಟ ಕ್ರಿಯಾಸಮಿತಿ ಸಂಚಾಲಕ ನೆಂಪೆ ದೇವರಾಜ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕಸ್ತೂರಿರಂಗನ್ ವರದಿಯ ಹಿಂದೆ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರವಿದೆ. ರಾಜಕೀಯ ಧುರೀಣರು ವರದಿಯನ್ನು ತಮ್ಮ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು ಎಂದು ಮಲೆನಾಡು ಹೋರಾಟ ಕ್ರಿಯಾಸಮಿತಿ ಸಂಚಾಲಕ ನೆಂಪೆ ದೇವರಾಜ್ ಎಚ್ಚರಿಸಿದರು.

ಕಸ್ತೂರಿರಂಗನ್ ವರದಿಯನ್ನು ಕೈ ಬಿಡುವಂತೆ ಆಗ್ರಹಿಸಿ ಮಲೆನಾಡು ಹೋರಾಟ ಕ್ರಿಯಾಸಮಿತಿ ವತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ, ಕಸ್ತೂರಿರಂಗನ್ ವರದಿ ಮಲೆನಾಡಿನ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ರಾಜಕೀಯ ಧುರೀಣರಿಗೆ ಕಸ್ತೂರಿರಂಗನ್ ವರದಿಯ ಬಗ್ಗೆ ಕಾಳಜಿಗಿಂತ ಮುಖ್ಯವಾಗಿ ತಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು. ಈ ವರದಿಯನ್ನು ವಿರೋದಿಸಿ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅವಿರತ ಹೋರಾಟ ನಡೆಸಲು ತಿರ್ಮಾನಿಸಿದ್ದು, ಈ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.

ಈ ಪ್ರದೇಶದ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದೇ, ವೈಜ್ಞಾನಿಕವಾಗಿ ದೆಹಲಿಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾಡಿದ ವರದಿಯಾಗಿದೆ. ಈ ವರದಿಯ ಹಿಂದೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದೆ. ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಈ ಭಾಗವನ್ನು ನಿರ್ಜನ ಪ್ರದೇಶ ಮಾಡುವ ಮೂಲಕ ಪಶ್ಚಿಮ ಘಟ್ಟವನ್ನು ಉದ್ಯಮಿಗಳಿಗೆ ಮೋಜಿನ ತಾಣವಾಗಿ ಟೂರಿಸಂ ತಾಣವಾಗಿ ರೂಪಿಸುವ ತಂತ್ರಗಾರಿಯೂ ಇದೆ. ಪರಿಸರ ಸೂಕ್ಷ್ಮ ವಲಯದ ನೆಪದಲ್ಲಿ ಅಡಕೆಗೆ ಔಷಧ ಸಿಂಪರಣೆಗೆ ತಡೆ ಮತ್ತು ರಸಗೊಬ್ಬರ ಹಾಕದಂತೆ ನಿರ್ಭಂಧ ಹೇರುವ ಪ್ರಯತ್ನ ನಡೆದಿದೆ. ರಸಗೊಬ್ಬರ ಹಾಕದೇ ಈ ಮಣ್ಣಿನಲ್ಲಿ ಬೆಳೆ ಬೆಳೆಯುವುದು ಅಸಾಧ್ಯ ಎಂದರು.

ಶಿವಾನಂದ ಕರ್ಕಿ ಮಾತನಾಡಿ, ಕಸ್ತೂರಿರಂಗನ್ ವರದಿಯಂತಹ ಕರಾಳ ಮಸೂದೆಯನ್ನು ಪ್ರಶ್ನಿಸಲಾಗದೇ ದಾಸ್ಯದಿಂದ ಬದುಕುವಂತಾಗಿದೆ. ಶಾಸನ ಮಾಡುವ ಶಾಸಕರುಗಳಿಗೆ ಜನರ ಸಮಸ್ಯೆಯೇ ಮರೆತು ಹೋಗಿದೆ. ಸದನದಲ್ಲಿ ಈ ಬಗ್ಗೆ ಚಕಾರ ಎತ್ತದೇ ಧಾರ್ಮಿಕ ವಿಚಾರಗಳ ಮೂಲಕ ಜನರು ಪ್ರಶ್ನೆ ಮಾಡದಂತೆ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಈಗ ಮೈ ಮರೆತರೆ ನಮ್ಮ ಭವಿಷ್ಯ ಕರಾಳವಾದೀತು ಎಂದರು.

ಪ್ರೊ.ಜೆ.ಎಲ್. ಪದ್ಮನಾಭ್ ಮಾತನಾಡಿ, ಕಸ್ತೂರಿರಂಗನ್ ವರದಿ ಮಲೆನಾಡಿಗೆ ಮರಣ ಶಾಸನವಾಗಿದೆ. ಮಲೆನಾಡಿನ ಜನರ ಬೆನ್ನಿಗೆ ಇರಿಯುವ ಈ ವರದಿ ವಿರೋದಿ ಹೋರಾಟದ ಮುಂಚೂಣಿಯ ನೇತೃತ್ವವನ್ನು ಯುವ ಜನತೆ ವಹಿಸಬೇಕಿದೆ ಎಂದು ಹೇಳಿದರು.

ಮಲೆನಾಡು ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಹೊಸಕೊಪ್ಪ ಸುಂದರೇಶ್, ಹುಲ್ಲತ್ತಿ ದಿನೇಶ್, ಕೋಣಂದೂರು ಅಶೋಕ್, ಜೋಡಿಗೆರೆ ದಿವಾಕರ್, ಹೊಸಕೊಪ್ಪ ಈಶ್ವರ್, ಸುಧಾಕರ್ ಕುಪ್ಪಳಿ, ಹೊನ್ನಾನಿ ದೇವರಾಜ್, ಕಿರಣ್ ಬೀಸು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಯುವಕರು ಸಮಾಜಕ್ಕೆ ಕೊಡುಗೆ ನೀಡಿ: ಮಾ.ಸ ನಂಜುಂಡಸ್ವಾಮಿ
ವಿವಿಧ ಪ್ರದೇಶಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ, ಪರಿಶೀಲನೆ