ದಾವಣಗೆರೆ: ಮುಸ್ಲಿಂ ಬಾಂಧವರು ಬುಧವಾರ ನಗರದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ವಿನೋಬನಗರ, ಕೆಟಿಜೆ ನಗರ, ಭಗತ್ ಸಿಂಗ್ ನಗರ, ಲೇಬರ್ ಕಾಲನಿ ಇತರೆ ಭಾಗಗಳಲ್ಲಿಯೂ ಮೆರವಣಿಗೆ ಮೂಲಕ ಬಂದು ಅಂಬೇಡ್ಕರ್ ವೃತ್ತದಲ್ಲಿ, ಗಾಂಧಿ ವೃತ್ತದಲ್ಲಿ ಸೇರಿ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಲಘು ಉಪಾಹಾರ, ತಂಪು ಪಾನೀಯ, ಮಜ್ಜಿಗೆ, ನೀರು ವಿತರಿಸುತ್ತಿದ್ದ ದೃಶ್ಯ ಕಂಡುಬಂತು. ಮುಸ್ಲಿಂ ಯುವಕರು, ಹಿರಿಯರು, ಮಕ್ಕಳು ಸಂತಸ ಹಂಚಿಕೊಂಡರು.
ವಾಹನ ಸವಾರರು, ಬಸ್ಸುಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ಮಿಲಾದ್ ಮೈದಾನ ತಲುಪಿದ ಬಳಿಕ ಬೃಹತ್ ಧಾರ್ಮಿಕ ಸಭೆ ನಡೆಯಿತು. ಪ್ರವಾದಿ ಮಹಮ್ಮದ್ ಪೈಗಂಬರರ ಜೀವನ, ಮಾನವೀಯ ಮೌಲ್ಯಗಳು, ಸಹೋದರತ್ವ, ಶಾಂತಿ ಹಾಗೂ ಸೌಹಾರ್ದದ ಮಹತ್ವ ಕುರಿತು ಧಾರ್ಮಿಕ ಮುಖಂಡರು ಸಂದೇಶ ನೀಡಿದರು.ಈದ್ ಮಿಲಾದ್ ಆಚರಣೆಯ ಮೂಲಕ ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಸಹೋದರತ್ವ ಮತ್ತಷ್ಟು ಬಲಗೊಳ್ಳಬೇಕು ಎಂಬ ಆಶಯ ವ್ಯಕ್ತವಾಯಿತು. ಸಮಾಜದ ಗಣ್ಯರು, ಮುಖಂಡರು, ಯುವಕರು ಇತರರು ಭಾಗವಹಿಸಿ ಶುಭಾಷಯ ವಿನಿಮಯ ಮಾಡಿಕೊಂಡರು.
-26ಕೆಡಿವಿಜಿ40, 41, 42, 43: