ಅಧಿಕ ಮಾಸದ ಏಕಾದಶಿಗೆ ವೈಶಿಷ್ಟ್ಯಪೂರ್ಣ ಮಹತ್ವವಿದ್ದು, ಈ ಸಂದರ್ಭದಲ್ಲಿ ಭಗವಂತನ ನಾಮಸ್ಮರಣೆ, ಹರಿಕೀರ್ತನೆ ಹಾಗೂ ಭಜನೆ ನಡೆಸುವುವ ಅವಕಾಶ ಬೆಂಗಳೂರು ಹಾಗೂ ಭಟ್ಕಳದವರಿಗೆ ಸಿಕ್ಕಿರುವುದು ವಿಶೇಷ ಪುಣ್ಯಫಲ ಪಡೆಯಲು ಸಹಕಾರಿ.
ಕನ್ನಡಪ್ರಭ ವಾರ್ತೆ ಭಟ್ಕಳ
ಅಧಿಕ ಮಾಸದ ಏಕಾದಶಿಗೆ ವೈಶಿಷ್ಟ್ಯಪೂರ್ಣ ಮಹತ್ವವಿದ್ದು, ಈ ಸಂದರ್ಭದಲ್ಲಿ ಭಗವಂತನ ನಾಮಸ್ಮರಣೆ, ಹರಿಕೀರ್ತನೆ ಹಾಗೂ ಭಜನೆ ನಡೆಸುವುವ ಅವಕಾಶ ಬೆಂಗಳೂರು ಹಾಗೂ ಭಟ್ಕಳದವರಿಗೆ ಸಿಕ್ಕಿರುವುದು ವಿಶೇಷ ಪುಣ್ಯಫಲ ಪಡೆಯಲು ಸಹಕಾರಿ ಎಂದು ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ವಡೇರ ಮಠದಲ್ಲಿ ಅಧಿಕ ಜ್ಯೇಷ್ಠ ಮಾಸ ಹಾಗೂ ಮಠಕ್ಕೆ ೫೫೦ ವರ್ಷಗಳನ್ನು ಪೂರೈಸಿದ ಈ ಸಂದರ್ಭ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಭಟ್ಕಳವು ಪ್ರಥಮ ಹಾಗೂ ದ್ವಿತೀಯ ಯತಿವರ್ಯರ ಬೃಂದಾವನಗಳನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಶ್ರೀ ನಾರಾಯಣ ತೀರ್ಥ ಶ್ರೀಗಳಿಂದಲೇ ಕೆಳದಿ ರಾಯರಿಂದ ಮಠಕ್ಕೆ ವಡೇರ ಬಿರುದು ಲಭಿಸಿದ್ದು, ಅದು ದೊರೆತು ೫೫೦ ವರ್ಷಗಳು ಪೂರ್ಣಗೊಂಡಿವೆ. ಅಧಿಕ ಮಾಸದ ಏಕಾದಶಿ ಅಖಂಡ ಭಜನಾ ಮಹೋತ್ಸವದಲ್ಲಿ ಭಜನೆಯ ಪಾಳಿಗಳು ಭಕ್ತಿಯಿಂದ ಭಜಿಸಿದ್ದಾರೆ ಎಂದು ಶ್ರೀಗಳು ನುಡಿದರು.
ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯದಲ್ಲಿ ದೇವರ ಸಂಪ್ರಿತಿಗಾಗಿ ಲಕ್ಷ ಕುಂಕುಮಾರ್ಚನೆ, ಲಕ್ಷ ತುಳಸಿ ಅರ್ಚನೆ, ಅಪೂಪದಾನ ಸೇರಿದಂತೆ ನಡೆದ ವಿವಿಧ ಸೇವೆಗಳು ಆಧ್ಯಾತ್ಮಿಕ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹತ್ತು ಸಮಸ್ತರ ಉಪಾಧ್ಯಕ್ಷ ನರೇಂದ್ರ ನಾಯಕ, ಅಧಿಕ ಮಾಸದ ಈ ಕಾರ್ಯಕ್ರಮಗಳ ಯಶಸ್ಸಿಗೆ ಸಮಾಜದ ಎಲ್ಲರ ಸಹಕಾರ ದೊರೆತಿದ್ದು, ಅದರ ಶ್ರೇಯಸ್ಸು ಎಲ್ಲರಿಗೂ ಸಲ್ಲಬೇಕು. ಆಗಾಗ ಶ್ರೀಗಳು ನಮಗೆ ಮೊಕ್ಕಾಂ ಮಾಡಿ ಭಕ್ತರಿಗೆ ಮಾರ್ಗದರ್ಶನ ನೀಡಬೇಕು ಎಂದು ಶ್ರೀಗಳಲ್ಲಿ ವಿನಂತಿಸಿದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಗಣಪತಿ ಪ್ರಭು ಪಾದಪೂಜೆ ನೇರವೇರಿಸಿದರು. ಉದ್ಯಮಿ ದಿನೇಶ್ ಪೈ, ಸಮಾಜದ ಮುಖಂಡರಾದ ಗಣಪತಿ ಪ್ರಭು, ಮಂಜುನಾಥ ಪ್ರಭು, ರಾಜೇಶ್ ಕಾಮತ, ಗಣಪತಿ ಪುತ್ತು ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಸನ್ನ ಪ್ರಭು ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.