ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಪುಟ್ಟಪ್ಪ, ಭಾನುವಳ್ಳಿ ಗ್ರಾಮದಲ್ಲಿ 1999ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಶಿವಪ್ಪ ಹಾಗೂ ಸಮಾದ ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಜಿಪಂ ಪರಿಶಿಷ್ಟರ ಅನುದಾನದಲ್ಲಿ ರಾಜವೀರ ಮದಕರಿ ನಾಯಕ ಮಹಾದ್ವಾರ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸಿ, ಶಿಲಾನ್ಯಾಸ ನೆರವೇರಿಸಿದ್ದರು ಎಂದರು.
ಆದರೆ, ಗ್ರಾಮದ ಹಾಲುಮತ ಸಮಾಜದ ಕೆಲ ಕಿಡಿಗೇಡಿಗಳು 7.11.2023ರಂದು ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲು ಪ್ರಯತ್ನಿಸಿದ್ದಾರೆ. ಆಗ ನಮ್ಮ ಸಮಾಜದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗೂ ಮಾಹಿತಿ ನೀಡಿ, ಊರಿನಲ್ಲಿ ಶಾಂತಿ ಸ್ಥಾಪಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ನಮ್ಮ ಯಾವುದೇ ಮಾತನ್ನು ಗಣನೆಗೆ ತೆಗೆದುಕೊಳ್ಳದೇ, 9.1.2024ರ ಮಧ್ಯರಾತ್ರಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಈ ಬಗ್ಗೆ ಡಿಸಿಗೆ ಮನವಿ ಮಾಡಿ, ಹೋರಾಟ ನಡೆಸಿದರೂ ಸ್ಪಂದಿಸಿಲ್ಲ ಎಂದು ದೂರಿದರು.ಜಿಲ್ಲಾಡಳಿತವು ಈಚೆಗೆ ಮತ್ತೊಂದು ಸಮುದಾಯದ ಮಾತು ಕೇಳಿ, ಮದಕರಿ ನಾಯಕ ಮಹಾದ್ವಾರ, ವಾಲ್ಮೀಕಿ ವೃತ್ತ ತೆರವುಗೊಳಿಸುವ ಮೂಲಕ ಪರಿಶಿಷ್ಟ ಪಂಗಡದ ನಾಯಕ ಸಮಾಜಕ್ಕೆ ತೀವ್ರ ಅವಮಾನ ಮಾಡಿದೆ. ಸುಮಾರು 16 ದಿನಗಳ ಕಾಲ ಭಾನುವಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಮಾಜ ಬಾಂಧವರು ಪ್ರತಿಭಟನಾ ಧರಣಿ ನಡೆಸಿದ್ದು, 1999ರ ದಾಖಲೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಹ ಒಂದು ಸಮುದಾಯದ ಮಾತು ಕೇಳುತ್ತಿದ್ದು, ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಎಚ್ಚರಿಸಿದರು.
ಭಾನುವಳ್ಳಿ ಕರಿಯಪ್ಪ, ರಂಗಸ್ವಾಮಿ, ನಾರಾಯಣಪ್ಪ ದೊಡ್ಮನಿ, ಅಜಯಕುಮಾರ, ನಾಗಪ್ಪ, ಮಹಾಂತೇಶ ಇತರರು ಇದ್ದರು.