ವಿಧಾನಸಭೆ ಚುನಾವಣೆ ಮೀರಿಸುವಂತೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ

KannadaprabhaNewsNetwork | Published : Feb 10, 2025 1:45 AM

ಸಾರಾಂಶ

ಒಟ್ಟು 14 ಕ್ಷೇತ್ರಗಳ ಪೈಕಿ ಸಾಲಗಾರರ 2 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಉಳಿದ 12 ಕ್ಷೇತ್ರಗಳಿಗೆ 34 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನೂರಾರು ಸಂಖ್ಯೆಯಲ್ಲಿ ಬಂದ ಮತದಾರರನ್ನು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮುಖಂಡರ ಮನವಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪಿಎಲ್‌ಡಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ವಿಧಾನಸಭೆ ಚುನಾವಣೆಯನ್ನೂ ಮೀರಿಸುವಂತೆ ಜಿದ್ದಾಜಿದ್ದಿನಿಂದ ನಡೆಯಿತು.

ಒಟ್ಟು 14 ಕ್ಷೇತ್ರಗಳ ಪೈಕಿ ಸಾಲಗಾರರ 2 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಉಳಿದ 12 ಕ್ಷೇತ್ರಗಳಿಗೆ 34 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶನಿವಾರ ಬೆಳಗ್ಗೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನೂರಾರು ಸಂಖ್ಯೆಯ ಮುಖಂಡರು ಹಾಗೂ ಕಾರ್ಯಕರ್ತರು ಮತದಾನ ಕೇಂದ್ರದ ಬಳಿ ಆಗಮಿಸಿ ಮತದಾರರನ್ನು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಸಾಲಗಾರರ ಕ್ಷೇತ್ರಕ್ಕೆ 11 ಮತಗಟ್ಟೆಗಳಲ್ಲಿ ಮತದಾನ ನಡೆದರೆ, ಸಾಲಗಾರರಲ್ಲದ ಒಂದು ಕ್ಷೇತ್ರಕ್ಕೆ 6 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ವಯೋವೃದ್ದರ ಮತದಾನಕ್ಕೆ ಸಹಾಯಕರನ್ನು ಕರೆದುಕೊಂಡು ಹೋಗುವ ವಿಚಾರವಾಗಿ ಕೆಲಕಾಲ ಎರಡು ಪಕ್ಷದ ಮುಖಂಡರ ನಡುವೆ ಮಾತಿನ ಚಕಮಕಿ ನಡೆದವು. ಈ ವೇಳೆ ಪೊಲೀಸರು ಎರಡು ಪಕ್ಷದ ಮುಖಂಡರನ್ನು ನಿಯಂತ್ರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸರತಿ ಸಾಲಿನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು.

13 ಸ್ಥಾನಗಳ ಸಾಲಗಾರರ ಕ್ಷೇತ್ರದ 2157 ಮತದಾರರ ಪೈಕಿ ವಾರ್ಷಿಕ ಮಹಾಸಭೆಗೆ ಗೈರು ಮತ್ತು ಕನಿಷ್ಠ ವ್ಯವಹಾರ ನಡೆಸಿಲ್ಲ ಎಂಬ ಕಾರಣಕ್ಕೆ 1383 ಮಂದಿ ಮತದಾರರನ್ನು ಅನರ್ಹಗೊಳಿಸಲಾಗಿತ್ತು. ಸಾಲಗಾರರಲ್ಲದ 1 ಕ್ಷೇತ್ರದ 2611 ಮತದಾರರ ಪೈಕಿ 1745 ಮತದಾರರು ಸೇರಿ ಒಟ್ಟು 1640 ಮಂದಿ ಷೇರುದಾರರನ್ನು ಮಾತ್ರ ಅರ್ಹ ಮತದಾರರೆಂದು ಪ್ರಕಟಣೆ ಹೊರಡಿಸಲಾಗಿತ್ತು. ನಂತರ ಎಚ್ಚೆತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗಿ 1850 ಮಂದಿಗೆ ಷೇರುದಾರರಿಗೆ ಮತಚಲಾಯಿಸುವ ಆದೇಶ ತಂದಿದ್ದರು. ಹಾಗಾಗಿ ಮತದಾರರ ಸಂಖ್ಯಾಬಲ 3490 ಕ್ಕೇರಿತ್ತು.

ಸಾಲಗಾರರ 13 ಕ್ಷೇತ್ರ ಹಾಗೂ ಸಾಲಗಾರರಲ್ಲದ 1 ಕ್ಷೇತ್ರದ ಒಟ್ಟು 3490 ಮಂದಿ ಅರ್ಹ ಮತದಾರರ ಪೈಕಿ 2404 ಮಂದಿ ಮತ ಚಲಾಯಿಸಿದ್ದಾರೆ. ಹಾಗಾಗಿ ಶೇ.68.8ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಪಂ ಇಒ ಸತೀಶ್ ತಿಳಿಸಿದ್ದಾರೆ.

ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಡಿವೈಎಸ್‌ಪಿ ಬಿ. ಚಲುವರಾಜು, ಪಟ್ಟಣ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್ ಹಾಗೂ ರಾಜೇಂದ್ರ ಸ್ಥಳದಲ್ಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

Share this article