ಶಿವಾನಂದ ಗೊಂಬಿ
ಕುರುಡು ಕಾಂಚಣ ಕುಣಿಯುತಲಿತ್ತು.. ಕಾಲಿಗೆ ಬಿದ್ದವರ ತುಳಿಯುತಲಿತ್ತು..!
ಇದು 1938ರಲ್ಲಿ ದ.ರಾ. ಬೇಂದ್ರೆ ಅವರು ಬರೆದ ನಾದಲೀಲೆ ಕವನ ಸಂಕಲನದ ಹಾಡು. ಇದು ಈಗಿನ ಚುನಾವಣೆಗೆ ತಕ್ಕದಾಗಿದೆ. ಚುನಾವಣಾ ಆಯೋಗದ ಕಣ್ತಪ್ಪಿಸಿ ಕೋಟಿ ಕೋಟಿ ಹಣ ಸರಬರಾಜು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ ಎಂಬುದಕ್ಕೆ ಇತ್ತೀಚಿಗೆ ಪೊಲೀಸರು, ಐಟಿ ಅಧಿಕಾರಿಗಳ ದಾಳಿಯಿಂದ ದೊರೆತಿರುವ ಹಣವೇ ಸಾಕ್ಷಿ. ಹಣದೊಂದಿಗೆ ಬಗೆಬಗೆಯ ಗಿಫ್ಟ್ ಕೊಡುವ ಮೂಲಕ ಮತದಾರರಿಗೆ ಆಮಿಷ ಒಡ್ಡುವ ಕೆಲಸ ನಡೆಯುತ್ತಿದೆ.ಹಾಗಂತ ಜಿಲ್ಲಾ ಚುನಾವಣಾ ಶಾಖೆಯೇನೂ ಸುಮ್ಮನೆ ಕುಳಿತಿಲ್ಲ. ಜಿಲ್ಲೆಯಲ್ಲಿ ಬರೋಬ್ಬರಿ 28 ಚೆಕ್‌ಪೋಸ್ಟ್ ತೆರೆದು ನಿತ್ಯ ಹೊರಗಿನಿಂದ ಬರುತ್ತಿರುವ ವಾಹನಗಳ ತಪಾಸಣೆ ಮಾಡುತ್ತಿದೆ. ಜತೆಗೆ ಸಂಶಯ ಬಂದವರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಮಾ. 16ರಿಂದ ನೀತಿ ಸಂಹಿತೆ ಜಾರಿಯಾದ ದಿನದಿಂದ ಈ ವರೆಗೆ ಬರೋಬ್ಬರಿ ₹ 20,28,90,470 ನಗದು ಪತ್ತೆಯಾಗಿದೆ. ಅದರಲ್ಲಿ ₹ 18 ಕೋಟಿ ಧಾರವಾಡದ ಮನೆಯೊಂದರಲ್ಲಿ ಪತ್ತೆಯಾಗಿದ್ದರೆ, ₹ 2 ಕೋಟಿಗೂ ಅಧಿಕ ಹಣ ಕುಂದಗೋಳ ತಾಲೂಕಿನ ರಾಮನಕೊಪ್ಪದ ಮನೆಯೊಂದರಲ್ಲಿ ಪತ್ತೆಯಾಗಿದೆ. ಉಳಿದಂತೆ ಹಣವೆಲ್ಲವೂ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿರುವುದಾಗ ಪತ್ತೆಯಾಗಿರುವುದು.
ಚುನಾವಣೆಯೆಂದರೆ ಮದ್ಯಾರಾಧನೆ, ಗಿಫ್ಟ್ ಇರುವುದು ಮಾಮೂಲಿ. ಆದರೆ ಲಕ್ಷಗಟ್ಟಲೇ ಮೌಲ್ಯದ ಡ್ರಗ್ಸ್ ಕೂಡ ಪತ್ತೆಯಾಗಿರುವುದು ಈ ಚುನಾವಣೆ ಮತದಾರರನ್ನು ಭ್ರಷ್ಟರನ್ನಾಗಿ ಅಷ್ಟೇ ಮಾಡುತ್ತಿಲ್ಲ. ಬದಲಿಗೆ ಚಟಗಾರರನ್ನಾಗಿ ಮಾಡುತ್ತಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕಳವಳವನ್ನುಂಟು ಮಾಡುತ್ತಿದೆ.
ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಅಕ್ರಮ ತಡೆಯುವ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದೆಯಾದರೂ ಅವರ ಕಣ್ತಪ್ಪಿಸಿ ಅಲ್ಲಲ್ಲಿ ಅಕ್ರಮಗಳು ನಡೆಯುತ್ತಿವೆ.