ಕನ್ನಡಪ್ರಭ ವಾರ್ತೆ ಯಲ್ಲಾಪುರ
ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಮುಂಡಗೋಡ ರಸ್ತೆಯ ಲಿಂಗನಕೊಪ್ಪ ಶಾಲೆ ಬಳಿಯ ಹಲವಾರು ಮನೆಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯದ ಜೊತೆಗೆ ಲಿಂಗನಕೊಪ್ಪ ಶಾಲೆ ಬಳಿಯ ಮನೆಗಳಲ್ಲಿ ವೋಲ್ಟೇಜ್ ಏರಿಳಿತದಿಂದ ಹಲವಾರು ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದೇ ರೀತಿಯ ಸಮಸ್ಯೆಗಳು ವರದಿಯಾಗಿವೆ. ಕೆಲವು ಮನೆಗಳಲ್ಲಿ ಹಲವಾರು ದಿನಗಳಿಂದ ಬೆಳಕೇ ಇಲ್ಲವಾಗಿದೆ.ಹಲವಾರು ಸವಾಲುಗಳ ನಡುವೆಯೂ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ನಿರಂತರ ವಿದ್ಯುತ್ ಪೂರೈಕೆಗೆ ಶ್ರಮಿಸುತ್ತಿದ್ದಾರೆ. ಆದರೆ, ನಿರಂತರ ಮಳೆಯಿಂದಾಗಿ ಅವರ ಪ್ರಯತ್ನಕ್ಕೆ ಅಡ್ಡಿಯಾಗುತ್ತಿದ್ದು, ವಿದ್ಯುತ್ ತಂತಿಗಳು ಮತ್ತು ಕಂಬಗಳಿಗೆ ಮತ್ತಷ್ಟು ಹಾನಿಯಾಗುತ್ತಿದೆ.
ಹವಾಮಾನ ವೈಪರೀತ್ಯದ ನಡುವೆಯೂ ಇಲ್ಲಿನ ನಿವಾಸಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಹೆಸ್ಕಾಂ ಸಿಬ್ಬಂದಿಯ ಸಮರ್ಪಣಾ ಮನೋಭಾವ ಹಾಗೂ ಬದ್ಧತೆ ಶ್ಲಾಘನೀಯ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿದ್ಯುತ್ ಪೂರೈಕೆಗೆ ಮುಂದಾಗಿದ್ದು, ಅವರ ಪ್ರಯತ್ನಕ್ಕೆ ಅಲ್ಲಿನ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.