4 ದಿನಗಳಿಂದ ವಿದ್ಯುತ್-ನೀರು ವ್ಯತ್ಯಯ: ದಿಢೀರ್ ಪ್ರತಿಭಟನೆ

KannadaprabhaNewsNetwork |  
Published : May 27, 2025, 12:57 AM IST
 | Kannada Prabha

ಸಾರಾಂಶ

ಯಳಂದೂರು ತಾಲೂಕಿನ ಹೊನ್ನೂರು, ಮೆಳ್ಳಹಳ್ಳಿ, ದುಗ್ಗಹಟ್ಟಿ, ಅಂಬಳೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಹಾಗೂ ನೀರು ವ್ಯತ್ಯಯ ಖಂಡಿಸಿ ರೈತ ಸಂಘದ ಸದಸ್ಯರು ಸಮವಾರ ಸಂಜೆ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಹೊನ್ನೂರು, ಮೆಳ್ಳಹಳ್ಳಿ, ದುಗ್ಗಹಟ್ಟಿ, ಅಂಬಳೆ, ಕಂದಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳೆದ ೪ ದಿನಗಳಿಂದ ಕುಡಿಯುವ ನೀರು ಹಾಗೂ ವಿದ್ಯುತ್ ವ್ಯತ್ಯಯವಾಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಲು ಕ್ರಮ ವಹಿಸುತ್ತಿಲ್ಲ ಎಂದು ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸಮೀಪದ ಸಂತೆಮರಹಳ್ಳಿ ವಿದ್ಯುತ್ ಉಪಕೇಂದ್ರದ ಬಳಿ ಸೋಮವಾರ ಸಂಜೆ ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಗ್ರಾಮಗಳ ವ್ಯಾಪ್ತಿಯಲ್ಲಿ ಜಂಗಲ್ ಕಂಟಿಂಗ್ ಆಗಿಲ್ಲ. ಹಾಗಾಗಿ ಗಾಳಿ ಮಳೆಗೆ ಮರಗಳು ವಿದ್ಯುತ್ ಕಂಬಗಳು ಉರುಳಿವೆ. ಇದನ್ನು ಸರಿಪಡಿಸುವಲ್ಲಿ ಸೆಸ್ಕಾಂನ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ಈ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಅಲ್ಲದೆ ವಿದ್ಯುತ್ ಇಲ್ಲದ ನೆಪವೊಡ್ಡಿ ಕುಡಿಯುವ ನೀರು ಪೂರೈಕೆಯಲ್ಲೂ ವ್ಯತ್ಯಾಸವಾಗುತ್ತಿದೆ. ಹೊನ್ನೂರು ಗ್ರಾಮದಲ್ಲಿ ಕೆಲವು ಕಡೆ ಕುಡಿಯುವ ನೀರೇ ಬರುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಇಡೀ ಗ್ರಾಮಗಳಲ್ಲಿ ಕಗ್ಗತ್ತಲು ಆವರಿಸುತ್ತದೆ. ಇದರಿಂದ ಕಳ್ಳತನದ ಆತಂಕ ಎದುರಾಗಿದೆ. ಅಲ್ಲದೆ ರೈತರು ಹಾಗೂ ಸಾರ್ವಜನಿಕರು, ಮಕ್ಕಳು, ವಯೋವೃದ್ಧರು ಮನೆಯ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.ಅಲ್ಲದೆ ಜಲ್‌ಜೀವನ್ ಮಿಷನ್‌ನಡಿಯಲ್ಲಿ ಟ್ಯಾಂಕ್‌ನಲ್ಲಿ ಸಾರ್ವಜನಿಕರಿಗೆ ಪೂರೈಕೆಯಾಗುವ ನೀರು ಕಲುಷಿತವಾಗುತ್ತಿದೆ. ಇದರಿಂದ ಗಂಟಲು ಬೇನೆ, ನೆಗಡಿ ಸೇರಿದಂತೆ ಅನೇಕ ರೋಗಗಳು ಬಾಧಿಸುತ್ತಿದೆ. ಇಲ್ಲಿಗೆ ಒಂದೇ ತೆರನಾದ ನೀರು ತುಂಬಿಸಬೇಕು. ಕುಡಿಯುವ ನೀರನ್ನು ನಿಗಧಿತ ಸಮಯದಲ್ಲಿ ಬಿಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಇಇ ಸೂಕ್ತ ನಿಗಾವಹಿಸಬೇಕು. ಪಿಡಿಒ ಕ್ರಮ ವಹಿಸಬೇಕು, ಸೆಸ್ಕಾಂನಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಿ ಜಂಗಲ್ ಕಟಿಂಗ್ ತೆರವುಗೊಳಿಸಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕು ಎಂದು ಸೆಸ್ಕಾಂನ ಎಇಇ ಲಿಂಗರಾಜು, ನೀರಾವರಿ ಇಲಾಖೆಯ ಎಇಇ ಚಂದ್ರಶೇಖರ್‌ ಮೂರ್ತಿ, ಜೆಇ ಅನುಶ್ರೀ, ಹೊನ್ನೂರು ಪಿಡಿಒ ನಿರಂಜನ್‌ರವರಿಗೆ ಎಚ್ಚರಿಕೆ ನೀಡಿದರು. ಈ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.ತುಂತುರು ಮಳೆಯಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ವಾಹನಗಳ ಸಂಚಾರಕ್ಕೆ ತೊಡಕಾಯಿತು. ರೈತ ಸಂಘದ ಚಾಮಲಾಪುರ ಸಿದ್ದಲಿಂಗಸ್ವಾಮಿ, ಬಸವಣ್ಣ, ಅಂಬಳೆ ಶಿವಕುಮಾರಸ್ವಾಮಿ, ಸಿದ್ದೇಶ್, ಗೌಡಹಳ್ಳಿ ಪ್ರಭು, ಹೊನ್ನೂರು ಪ್ರಸನ್ನ, ಪುಟ್ಟಮಾದೇಗೌಡ, ಮಹೇಂದ್ರ, ಅಂಬರೀಶ್, ಶ್ರೀಧರ್, ಸಂಜು, ಪ್ರಮೋದ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ