ಕನ್ನಡಪ್ರಭ ವಾರ್ತೆ ವಿಜಯಪುರ
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ನಗರದಲ್ಲಿ ನಿರ್ಮಿಸಲಾದ ವಿಜಯಪುರದ ಕಾರ್ಯ ಮತ್ತು ಪಾಲನೆ ವಿಭಾಗೀಯ ಕಚೇರಿಯ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನೀರಿಗೆ ಆದ್ಯತೆ ನೀಡಿದ ಮಾದರಿಯಲ್ಲೇ ರೈತರಿಗೆ ವಿದ್ಯುತ್ ಒದಗಿಸಲಾಗುತ್ತಿದೆ. ಟಿಸಿ ದುರಸ್ತಿ ಸಕಾಲದಲ್ಲಿ ಆಗಬೇಕು. ಇಲಾಖೆ ಬಹಳಷ್ಟು ಮಾರ್ಪಾಡಾಗುತ್ತಿವೆ. ಬಹಳಷ್ಟು ಅಚ್ಚುಕಟ್ಟಾಗಿ ಕಟ್ಟಲ್ಪಟ್ಟ ಈ ಕಟ್ಟಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಟ್ಟಡವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 2014 ರಿಂದ ಹೊಸ ಅಧ್ಯಾಯವನ್ನು ಆರಂಭಿಸಿ, ಮುಂದಾಲೋಚನೆಯಿಂದ ಈ ಭಾಗದ ಬಳಕೆ-ಬೇಡಿಕೆಯನುಸಾರವಾಗಿ ಅಭಿವೃದ್ಧಿಗೆ ಆದ್ಯತೆ ನೀಡಿ, ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಹೆಚ್ಚಿಸಲಾಗಿದೆ ಎಂದರು.ಸಿವಿಲ್ ಆಸ್ಪತ್ರೆಯಲ್ಲಿ ವಿದ್ಯುತ್ ಉಪ ಕೇಂದ್ರವಾಗಬೇಕು. ಜಾಗ ಖರೀದಿಸಿ ಕೇಂದ್ರ ಆರಂಭಿಸಲಾಗುವುದು. ವಿಜಯಪುರದ ವಿಮಾನ ನಿಲ್ದಾಣದ ಹತ್ತಿರದ ಐನಾಪುರದಲ್ಲಿ 110 ಕೆವಿ ಸ್ಟೇಶನ್ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಐನಾಪುರದಲ್ಲಿ ಈ ವಿದ್ಯುತ್ ಉಪ ಕೇಂದ್ರದಿಂದ ವಿಜಯಪುರ ಏರ್ ಫೋರ್ಟ್, ಮದಭಾವಿ ಹಾಗೂ ಸುತ್ತಲಿನ ಹಳ್ಳಿಗಳಿಗೆ ಅನುಕೂಲವಾಗುತ್ತದೆ. ನಮ್ಮ ಸರ್ಕಾರ ಜಿಲ್ಲೆಯಲ್ಲಿ 110 ಹಾಗೂ 220 ಕೆವಿ ಸ್ಟೇಷನಗಳನ್ನು ನಿರ್ಮಿಸುತ್ತಿದೆ. ಈ ಪೈಕಿ 8 ಕಾಮಗಾರಿಗಳು ಪ್ರಗತಿಯಲ್ಲಿವೆ. 24 ಕಾಮಗಾರಿಗಳು ಅನುಮೋದನೆಗೊಂಡು ವಿವಿಧ ಹಂತದಲ್ಲಿವೆ. ನಮ್ಮ ಜಿಲ್ಲೆಯಲ್ಲಿ ವಿದ್ಯುತ್ ಉಪ ಕೇಂದ್ರಗಳ ಸಂಖ್ಯೆ ಇಂದು ಗಣನೀಯವಾಗಿ ಹೆಚ್ಚಳವಾಗಿವೆ. 2013ರಲ್ಲಿ 27 ಇದ್ದು ಕೇಂದ್ರಗಳು ಇಂದು 66 ಆಗಿವೆ. ಹೆಚ್ಚು ಕಡಿಮೆ ಡಬಲ್ ಆಗಿವೆ. 110 ಕೆವಿ 24 ಇದ್ದುದ್ದು 60 ಆಗಿವೆ. ಅಂದರೆ ಮೂರು ಪಟ್ಟು ಜಾಸ್ತಿಯಾಗಿವೆ. 220 ಕೆವಿ 3 ಇದ್ದವು. ಈಗ 6 ಆಗಿವೆ. ಇವು ಕೂಡಾ ಡಬಲ್ ಆಗಿವೆ. 2016-2017ರಲ್ಲಿ 400 ಕೆವಿ ಸ್ಟೇಶನ್ ನಿರ್ಮಾಣಕ್ಕೆ ಅದನ್ನು ಈ ಮೊದಲು ದೇವರ ಹಿಪ್ಪರಗಿಯಲ್ಲಿ ಮಾಡಲಿಕ್ಕೆ ಪ್ರಯತ್ನ ಮಾಡಿದ್ದೆವು. ಆದರೆ, ಸರ್ಕಾರಿ ಜಮೀನು ಭೂಸ್ವಾಧೀನ ವೆಚ್ಚ ಬಹಳಷ್ಟಾಗಿದ್ದರಿಂದ ಕಷ್ಟವಾಯಿತು. ಹಾಗಾಗಿ ಸರ್ಕಾರಿ ಜಮೀನು ಹಡಗಲಿಯಲ್ಲಿದ್ದುದನ್ನು ಗಮನಿಸಿ, ಅಲ್ಲಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳ ಸಲಹೆ ಮೇರೆಗೆ ಹಡಗಲಿಯಲ್ಲಿ ₹800 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದರು.ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದಲ್ಲಿ ಅಭಿವೃದ್ಧಿ ಬದಲಾವಣೆ ಪರ್ವ ಆರಂಭವಾಗಿದೆ. ನೀರಾವರಿ, ಕೆರೆ ತುಂಬುವ, ವಿದ್ಯುತ್ ಸರಬರಾಜಿನ ಉನ್ನತೀಕರಣ, ಸರ್ಕಾರಿ ಕಟ್ಟಡ, ಸಿಟಿ ಅಂಡರ್ ಗ್ರೌಂಡ್ ಕೇಬಲ್ ಕಾರ್ಯಗಳು ನಡೆದಿವೆ. ಇಂಧನ ಸಚಿವರು ಕೆಲಸ ಮಾಡಿಕೊಡುತ್ತಿದ್ದಾರೆ. ಅಭಿವೃದ್ದಿ ಬಂದಾಗ ನಾನು ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಕಾಲಕಾಲಕ್ಕೆ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ವಿದ್ಯುತ್ ಇಲಾಖೆ ನೇರವಾಗಿ ಜನರನ್ನು ಒಳಗೊಂಡ ಇಲಾಖೆ ಹಾಗಾಗಿ ಇಲಾಖೆ ಅಧಿಕಾರಿಗಳು ಜನರಿಗೆ ವೃಥಾ ತೊಂದರೆ ನೀಡದೆ, ಅವರ ಅರ್ಜಿ ಹಾಗೂ ಕೆಲಸ ಕಾರ್ಯಗಳಿಗೆ ತಕ್ಷಣ ಸ್ಪಂದಿಸಬೇಕು. ವಿಜಯಪುರ ಈಗ ಮೊದಲಿನ ವಿಜಯಪುರವಾಗಿಲ್ಲ. ಸಾಕಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯಲಿಕ್ಕೆ ನೀರು ಸಿಗುತ್ತಿರಲಿಲ್ಲ. ಈಗ ಬಿರುಬೇಸಿಗೆಯಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ಹಚ್ಚುತ್ತಿಲ್ಲ. 10 ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಸಚಿವರಾದ ಎಂ.ಬಿ.ಪಾಟೀಲರ ದೂರದೃಷ್ಟಿಯ ಫಲದಿಂದ ನೀರಾವರಿ ಯೋಜನೆಗಳಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಬಾರದೆ ಇರುವುದಕ್ಕೆ ಸಚಿವರ ಸತತ ಪ್ರಯತ್ನದ ಫಲವಾಗಿದೆ. ಈ ಜಿಲ್ಲೆಯನ್ನು ಅಭಿವೃದ್ದಿ ಪಡಿಸಲು ನೀರಾವರಿ, ವಿದ್ಯುತ್ ಸೇರಿದಂತೆ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿವೆ. 110 ಕೆವಿ ವಿದ್ಯುತ್ ಕೇಂದ್ರ ನನ್ನ ಮತಕ್ಷೇತ್ರದಲ್ಲಿ ಉದ್ಘಾಟನೆಗೊಂಡಿದೆ. ಜಿಲ್ಲೆಗೆ ಕೈಗಾರಿಕಾ ವಲಯಗಳನ್ನು ಸಚಿವರು ಜಿಲ್ಲೆಗೆ ತಂದು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರೆ. ಹೀಗಾಗಿ ವಿಜಯಪುರ ಮುಂಬರುವ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿ ದೇಶ-ವಿದೇಶದ ಜನ ವಿಜಯಪುರಕ್ಕೆ ಬಂದು ನೋಡುವ ಕಾಲ ಸನ್ನಿಹಿತವಾಗಿದೆ ಎಂದರು.ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, 1964 ರಲ್ಲಿ ಆಗಿನ ಮೈಸೂರು ರಾಜ್ಯ ಎಲೆಕ್ಟ್ರಿಸಿಟಿ ಮಂಡಳಿಯಿಂದ ನಿರ್ಮಾಣಗೊಂಡ ಕಟ್ಟಡವು ಸುದೀರ್ಘ 62 ವರ್ಷಗಳ ಬಳಿಕ ಶಿಥಿಲಾವಸ್ಥೆಗೊಂಡಿದ್ದರಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೊಸದಾಗಿ ನಿರ್ಮಿಸುವ ಯೋಜನೆಯನ್ನು 2021 ರಲ್ಲಿ ಕೈಗೊಳ್ಳಲಾಯಿತು. 2024ರಲ್ಲಿ ₹6.25 ಕೋಟಿ ನಿರ್ಮಾಣಗೊಂಡು ಲೋಕಾರ್ಪಣೆಗೊಡಿದೆ ಎಂದು ಹೇಳಲು ಹರ್ಷವೆನಿಸುತ್ತದೆ. ಕಂಪನಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ತಿಕೋಟದಲ್ಲಿ ಕಟ್ಟಡ, ರೈತರಿಗೆ ಅನುಕೂಲ ಪರಿವರ್ತಕ ರಿಪೇರಿ, ಟ್ರಾನ್ಸಪಾರ್ಮರ್ ಟೆಸ್ಟಿಂಗ್ ಘಟಕ ಈಗಾಗಲೇ ಕಾರ್ಯಾರಂಭ ಮಾಡಿ ರೈತರು ದೂರದ ವಿಜಯಪುರಕ್ಕೆ ಅಲೆದಾಡುವುದನ್ನು ತಪ್ಪಿಸಿದೆ. ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ನಗರ ಘಟಕದ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಬ್ಬೀರ ಜಾಗೀರದಾರ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಸಿವಿಲ್ ಅಧೀಕ್ಷಕ ಅಭಿಯಂತರ ತಿಪ್ಪಣ್ಣ ಸೇರಿದಂತೆ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.