ಕನ್ನಡಪ್ರಭ ವಾರ್ತೆ ನಾಗಮಂಗಲ
ಶನಿವಾರ ವಡ್ಡರಹಳ್ಳಿ ಗ್ರಾಮಸ್ಥರಿಂದ ಪಂಚಾಮೃತಾಭಿಷೇಕ ನಡೆಯಿತು. ಫೆ.23ರ ಮಧ್ಯಾಹ್ನ ನಡೆಯುವ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ನಾಡಿನ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಸೋಮನಳಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಈ ಬಾರಿ ವಿಶೇಷವಾಗಿ ಫೆ.15 ರಿಂದ 20ರವರೆಗೆ ದನಗಳ ಜಾತ್ರೆಯನ್ನು ಆಯೋಜಿಸಲಾಗಿದೆ. ಉತ್ತಮ ರಾಸುಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದೆಂದು ಧರ್ಮದರ್ಶಿಗಳು ತಿಳಿಸಿದ್ದಾರೆ.ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ರಾಸುಗಳೊಂದಿಗೆ ಶನಿವಾರದಿಂದಲೇ ಜಾತ್ರೆ ನಡೆಯುವ ಸ್ಥಳಕ್ಕಾಗಮಿಸುತ್ತಿದ್ದಾರೆ. ಫೆ.16 ರಿಂದ 20ರವರೆಗೆ ಹೊಣಕೆರೆ, ಗಂಗನಹಳ್ಳಿ, ಅಲ್ಪಹಳ್ಳಿ, ಸೋಮನಹಳ್ಳಿ ಗ್ರಾಮಸ್ಥರಿಂದ ವಿವಿಧ ಬಗೆಯ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ಫೆ.22ರಂದು ಚಿಣ್ಯ ಗ್ರಾಮದ ಮೂಲ ದೇವಸ್ಥಾನದಲ್ಲಿ ಅಮ್ಮನವರ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ ನಂತರ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಬಳಿಕ ದೇವಾಲಯದ ಹಕ್ಕು ಹೊಂದಿರುವ ಸುತ್ತಮುತ್ತಲ ಗ್ರಾಮಗಳಿಂದ ತಂಬಿಟ್ಟಿನ ಆರತಿ, ಮಡೆ ಅನ್ನದ ನೈವೇದ್ಯ ನಡೆಸಲಾಗುತ್ತದೆ. ಮೆರವಣಿಗೆಯು ದೇಗುಲ ಪ್ರವೇಶಿಸಿದ ಬಳಿಕ 12 ಹಳ್ಳಿ ಗ್ರಾಮಸ್ಥರಿಂದ ಬಿಸಿಲು ಕೊಂಡೋತ್ಸವ ನಡೆಯುತ್ತದೆ. ನಂತರ ಕ್ಷೇತ್ರದ ಓಕಳಿ ಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆಯುವ ಅರಿಶಿಣ, ಕುಂಕುಮ ಮತ್ತು ಸುಣ್ಣ ಬೆರೆಸಿದ ಬಣ್ಣದ ನೀರಿನ ಓಕುಳಿಯಾಟ ಮನಮೋಹಕವಾಗಿರುತ್ತದೆ.
ಕ್ಷೇತ್ರದಲ್ಲಿರುವ ಶ್ರೀ ಆಂಜನೇಯಸ್ವಾಮಿ, ಶ್ರೀ ಕೋಟೆಮಾರಮ್ಮ ಮತ್ತು ಚಿಕ್ಕಮ್ಮದೇವಿ ದೇವಾಲಯಗಳಲ್ಲಿಯೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಕಟ್ಟೆಮನೆ ಚಿಣ್ಯ, ಹೊಣಕೆರೆ, ಗಂಗನಹಳ್ಳಿ, ವಡ್ಡರಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಸೋಮನಹಳ್ಳಿ ಸೇರಿ ಸುತ್ತಮುತ್ತಲಿನ 18 ಗ್ರಾಮಗಳಿಂದ ಜಾತ್ರಾ ಮಹೋತ್ಸವ ನಡೆಯುತ್ತದೆ.
ಮಂಡ್ಯ ಜಿಲ್ಲೆ ಸೇರಿ ಬೆಂಗಳೂರು, ಮೈಸೂರು, ಹಾಸನ, ಭದ್ರಾವತಿ, ಕೋಲಾರ ಹಾಗೂ ತಮಿಳುನಾಡಿನ ಊಟಿ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಭಾವ ಸಮರ್ಪಿಸುವರು.