ಸಿದ್ದಾಪುರ: ತಾಲೂಕಿನ ಗಡಿಭಾಗವಾದ ಶಿಗೇಹಳ್ಳಿ, ಕೋಡಗದ್ದೆ, ಕಲಗದ್ದೆ- ಬೆಳಗದ್ದೆಯ ಅಡಕೆ ತೋಟಕ್ಕೆ ಹಾಗೂ ಭತ್ತದ ಗದ್ದೆಗಳಿಗೆ ಆನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ಪ್ರಥಮ ಬಾರಿಗೆ ನಾಶಪಡಿಸಿದ ಘಟನೆ ತಡವಾಗಿ ತಿಳಿದುಬಂದಿದೆ.
ಈಗ ಕಾಡಾನೆಗಳು ತೋಟ- ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಉಂಟುಮಾಡಿರುವುದರಿಂದ ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಸ್ಥಳೀಯರಾದ ರವೀಂದ್ರ ಆರ್. ಹೆಗಡೆ, ವಿಶ್ವೇಶ್ವರ ಜಿ. ಹೆಗಡೆ, ಪರಮೆಶ್ವರ ಹೆಗಡೆ, ರಮಾಕಾಂತ ಹೆಗಡೆ, ಗಿರೀಶ ಹೆಗಡೆ, ರಾಜು ಹೆಗಡೆ, ಆನಂದ ಹೆಗಡೆ, ಮಂಜುನಾಥ ಹೆಗಡೆ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ತೋಟ- ಗದ್ದೆಗಳಿಗೆ ದಾಳಿ ನಡೆಸಿ ಬೆಳೆ ಹಾನಿ ಮಾಡಿದ ಆನೆಗಳ ಹಿಂಡನ್ನು ಊರಿನವರು ಹಾಗೂ ಅರಣ್ಯ ಇಲಾಖೆಯವರು ಕೂಗಿ, ಪಟಾಕಿ ಹೊಡೆದು ಹಾಗೂ ಜಾಗಟೆ ಬಾರಿಸಿ ಅವುಗಳನ್ನು ಸಮೀಪದ ಕಾಡಿಗೆ ಓಡಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಪುನಃ ತೋಟ-ಗದ್ದೆಗಳಿಗೆ ದಾಳಿ ನಡೆಸಿದರೆ ಗತಿ ಏನು ಎನ್ನುವುದು ಬೆಳೆಗಾರರದ್ದಾಗಿದೆ.ಈ ರೀತಿ ಆನೆಗಳ ಹಿಂಡು ತಾಲೂಕಿನಲ್ಲಿ ಹಾವಳಿ ಎಬ್ಬಿಸಿದ್ದು ಕಳೆದ ಎರಡು ದಶಕಗಳಿಂದ ಎಲ್ಲಿಯೂ ತಿಳಿದುಬಂದಿಲ್ಲ. ಒಬ್ಬಂಟಿ ಆನೆಗಳು ಸಾಗುವುದನ್ನು ಕಂಡು ತಾಲೂಕಿನ ಶಿವಮೊಗ್ಗದ ಗಡಿಭಾಗದ ಅನೇಕರು ಭಯಪಟ್ಟವರಿದ್ದಾರೆ. ವನ್ಯಜೀವಿ ತಜ್ಞರ ಪ್ರಕಾರ ದಾಂಡೇಲಿ ಭಾಗದಿಂದ, ಶಿವಮೊಗ್ಗದ ಭದ್ರಾ ಅರಣ್ಯದತ್ತ ಓಡಾಡುವ ಆನೆಗಳ ದಾರಿ ಇದಾಗಿದೆ. ಒಂಟಿ ಆನೆಗಳು ನೇರವಾಗಿ ಸಾಗುತ್ತವೆ. ಹಿಂಡು ಇದ್ದಾಗ ಈ ರೀತಿ ವರ್ತಿಸುತ್ತವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೇನುನೊಣ ಕಚ್ಚಿ ನಾಲ್ವರು ಅಸ್ವಸ್ಥಭಟ್ಕಳ: ತಾಲೂಕಿನಲ್ಲಿ ಮಂಗಳವಾರ ಎರಡು ಪ್ರತ್ಯೇಕ ಕಡೆ ಜೇನುನೋಣ ದಾಳಿ ಮಾಡಿ ನಾಲ್ವರನ್ನು ಅಸ್ವಸ್ಥಗೊಳಿಸಿದೆ.ಪಟ್ಟಣದ ಜಾಲಿಕೋಡಿಯಲ್ಲಿ ಮನೆಯ ಒಳಗಡೆ ಇದ್ದ ಒಂದೇ ಕುಟುಂಬದರಾದ ಮಾಸ್ತಮ್ಮ ಮಂಜಪ್ಪ ನಾಯ್ಕ(70), ಜಾನಕಿ ನಾಯ್ಕ(37) ಹಾಗೂ ಸುರೇಶ ನಾಯ್ಕ(45) ಮೇಲೆ ಏಕಾಏಕಿ ಜೇನುನೊಣ ದಾಳಿ ಮಾಡಿದೆ. ಜೇನುನೊಣ ಕಚ್ಚಿ ತೀವ್ರ ಅಸ್ವಸ್ಥರಾದ ಮೂವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಮಂಗಳವಾರ ಶಿರಾಲಿಯ ಮಲ್ಲಾರಿ ನಿವಾಸಿ ಗಣಪತಿ ಮಂಜಯ್ಯ ನಾಯ್ಕ(55) ಮಾರುಕಟ್ಟೆಗೆ ಬರುವ ವೇಳೆ ಶಿರಾಲಿ ಬಂಗಾರಮಕ್ಕಿ ಕ್ರಾಸ್ ಬಳಿ ಜೇನುನೊಣ ದಾಳಿ ಮಾಡಿದ್ದು, ಇವರು ಕೂಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.