ಕಾರವಾರ:
ಅಘನಾಶಿನಿ, ಗಂಗಾವಳಿ, ಚಂಡಿಕಾ, ಗುಂಡಬಾಳ ನದಿಗಳ ಅಬ್ಬರಕ್ಕೆ ನದಿಯ ಇಕ್ಕೆಲಗಳಲ್ಲಿನ ಮನೆಗಳು, ಅಡಕೆ, ತೆಂಗಿನ ತೋಟ ಜಲಾವೃತವಾಯಿತು. ಗ್ರಾಮೀಣ ಪ್ರದೇಶದಲ್ಲಿನ ಸೇತುವೆಗಳ ಮೇಲೆ ನೀರು ಉಕ್ಕೇರಿ ಸಂಪರ್ಕ ಕಡಿತಗೊಂಡಿದೆ. ಕಾರವಾರ ಹೊರತು ಪಡಿಸಿ ಕರಾವಳಿಯ ಎಲ್ಲೆಡೆ ಬುಧವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಕುಮಟಾ ತಾಲೂಕಿನ ಕತಗಾಲ ಬಳಿ ಚಂಡಿಕಾ ನದಿಯ ಪ್ರವಾಹ ಕುಮಟಾ ಶಿರಸಿ ಹೆದ್ದಾರಿಯ ಮೇಲೂ ಹರಿಯಿತು. ಇದರಿಂದ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತು. ಹೆದ್ದಾರಿ ಮೇಲೆ ನೀರಿದ್ದರೂ ಖಾಸಗಿ ಬಸ್ ಓಡಿಸಿದಾಗ ಪ್ರವಾಹದ ನಡುವೆ ಸಿಲುಕಿತು. ಬೋಟ್ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಮುಟ್ಟಿಸಲಾಯಿತು. ಚಂಡಿಕಾ ನದಿಯ ಅಬ್ಬರದಿಂದ ಉಪ್ಪಿನಪಟ್ಟಣ ಸೇತುವೆ ಮೇಲೆ ನೀರು ಪ್ರವಹಿಸುತ್ತಿದೆ. ಇದರಿಂದ ಕತಗಾಲ ಹಾಗೂ ಉಪ್ಪಿನಪಟ್ಟಣ ನಡುವಣ ಸಂಪರ್ಕ ಕಡಿತಗೊಂಡಿದೆ.ಅಘನಾಶಿನಿ ನದಿಯಲ್ಲಿ ಪ್ರವಾಹ ಹೆಚ್ಚುತ್ತಿರುವುದರಿಂದ ಐಗಳಕೂರ್ವೆ ದ್ವೀಪದ ಜನರಿಗೆ ಕಾಳಜಿ ಕೇಂದ್ರಕ್ಕೆ ಆಗಮಿಸುವಂತೆ ಸೂಚಿಸಲಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಗುಂಡಬಾಳ ನದಿಗೆ ಪ್ರವಾಹ ಬಂದಿದ್ದರಿಂದ ಚಿಕ್ಕನಕೋಡ ಗ್ರಾಪಂ ವ್ಯಾಪ್ತಿಯ ಹಿತ್ತಲಕೇರಿ ಹಾಗೂ ಹರಿಜನಕೇರಿ ಮಜರೆಯ ಮನೆಗಳು ಜಲಾವೃತವಾಗಿವೆ. ಇಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಹೊನ್ನಾವರ ಬೆಂಗಳೂರು ಹೆದ್ದಾರಿಯ ವರ್ನಕೇರಿ ಬಳಿ ಗುಡ್ಡ ಕುಸಿತು ಸಂಚಾರ ಸ್ಥಗಿತಗೊಂಡಿದೆ. ಮಣ್ಣು ತೆರವು ಕಾರ್ಯಾಚರಣೆಗೆ ಭಾರಿ ಮಳೆ ಅಡ್ಡಿಯಾಗಿದೆ.
ಭಾರಿ ಮಳೆ ಹಿನ್ನೆಲೆ ಸಾತೊಡ್ಡಿ ಫಾಲ್ಸ್ ಸೇರಿದಂತೆ ಯಲ್ಲಾಪುರ ತಾಲೂಕಿನ ಜಲಪಾತಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮಳೆ ಇಳಿಮುಖ ವಾಗುವವರೆಗೆ ನಿರ್ಬಂಧ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.