ಸಾಮಾಜಿಕ ಅಸಮಾನತೆ ತೊಲಗಿಸಿ ಸಾಮರಸ್ಯದ ಸಮಾಜ ನಿರ್ಮಿಸಿ: ಅರುಣಕುಮಾರ ಜಿ.

KannadaprabhaNewsNetwork |  
Published : Nov 03, 2026, 02:30 AM IST
ಕುಷ್ಟಗಿ ಪಟ್ಟಣದ ವಾಸವಿ ದೇವಸ್ಥಾನದ ಆವರಣದಲ್ಲಿ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನ ಕಾರ್ಯಕ್ರಮದಲ್ಲಿ ದಕ್ಷಿಣ ಮತ್ತು ಉತ್ತರ ಪ್ರಾಂತಗಳ ಆರ್‌ಎಸ್‌ಎಸ್ ಪ್ರಚಾರಕ ಅರುಣಕುಮಾರ ಜಿ. ಅವರು ವಿಶೇಷ ಬೌದ್ಧಿಕ್‌ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಯಿತು. ಬಳಿಕ ಪಟ್ಟಣದ ವಾಸವಿ ದೇವಸ್ಥಾನದ ಆವರಣದಲ್ಲಿ ಬೌದ್ಧಿಕ್‌ ನಡೆಯಿತು. ಆರ್‌ಎಸ್‌ಎಸ್ ಪ್ರಚಾರಕ ಅರುಣಕುಮಾರ ಜಿ. ವಿಶೇಷ ಉಪನ್ಯಾಸ ನೀಡಿದರು.

ಕುಷ್ಟಗಿ: ಸಮಾಜದಲ್ಲಿನ ಜಾತಿ, ಮೇಲು-ಕೀಳು ಮತ್ತು ಅಸಮಾನತೆಯ ಭಾವನೆಗಳನ್ನು ತೊಲಗಿಸಿ ಎಲ್ಲರೂ ಒಂದಾಗಿ ಬಾಳುವ ಸಾಮರಸ್ಯದ ಸಮಾಜ ನಿರ್ಮಾಣ ಮಾಡಬೇಕು ಎಂದು ದಕ್ಷಿಣ ಮತ್ತು ಉತ್ತರ ಪ್ರಾಂತಗಳ ಆರ್‌ಎಸ್‌ಎಸ್ ಪ್ರಚಾರಕ ಅರುಣಕುಮಾರ ಜಿ. ಹೇಳಿದರು.

ಪಟ್ಟಣದ ವಾಸವಿ ದೇವಸ್ಥಾನದ ಆವರಣದಲ್ಲಿ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ವಿಶೇಷ ಬೌದ್ಧಿಕ್ ಉಪನ್ಯಾಸ ನೀಡಿದರು. ದೇಶದ ಅಭಿವೃದ್ಧಿಯಲ್ಲಿ ಮಾತೃಶಕ್ತಿಯ ಕೊಡುಗೆ ಅಪಾರವಾಗಿದೆ. ಮಹಿಳೆಯರು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಮನೆಯ ನಿರ್ವಹಣೆಯಿಂದ ಹಿಡಿದು ಇಸ್ರೋವರೆಗೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ಮಹಿಳೆಯರನ್ನು ಮತ್ತಷ್ಟು ಸಬಲರನ್ನಾಗಿ ಮಾಡುವ ಅಗತ್ಯವಿದೆ ಎಂದರು.

ಕಳೆದ 100 ವರ್ಷಗಳಿಂದ ಆರ್‌ಎಸ್‌ಎಸ್ ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಸಂಘಟಿತ ಸಮಾಜ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದೆ. ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಜಗತ್ತು ಇಂದು ಹಿಂದೂತ್ವದ ವಿಚಾರಗಳನ್ನು ಒಪ್ಪಿಕೊಳ್ಳುತ್ತಿದೆ. ಸಮಾಜದಲ್ಲಿ ಸಾಮರಸ್ಯ ಬೆಳೆಸಿ ಎಲ್ಲರೂ ಒಗ್ಗೂಡಿ ಬಾಳುವ ವಾತಾವರಣ ನಿರ್ಮಿಸಬೇಕಿದೆ ಎಂದು ತಿಳಿಸಿದರು.

ನಮ್ಮ ದೇಹವನ್ನು ಶುದ್ಧವಾಗಿಟ್ಟುಕೊಳ್ಳುವ ಜತೆಗೆ ಮನಸ್ಸನ್ನೂ ಗಟ್ಟಿಗೊಳಿಸಬೇಕು. ಸಮಾಜದಲ್ಲಿರುವ ಜಾತೀಯತೆ, ಮೇಲು-ಕೀಳು ಭಾವನೆ ಹಾಗೂ ಕೀಳರಿಮೆಯನ್ನು ಮೊದಲು ನಮ್ಮ ಮನಸ್ಸಿನಿಂದಲೇ ತೆಗೆದುಹಾಕಬೇಕು. ಬಸವಣ್ಣ, ರಾಮಾನುಜಾಚಾರ್ಯ, ಮಧ್ವಾಚಾರ್ಯ ಮತ್ತು ಶಂಕರಾಚಾರ್ಯರಂತಹ ಮಹಾಪುರುಷರು ವಿವಿಧ ಸಮುದಾಯಗಳಿಂದ ಬಂದವರಾಗಿದ್ದು, ಅವರ ಆದರ್ಶಗಳನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಭೇದಭಾವ ಮರೆತು ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಗಿಡಗಳನ್ನು ನೆಟ್ಟು ಬೆಳೆಸಬೇಕು, ನೀರನ್ನು ಉಳಿಸಬೇಕು. ಸ್ವದೇಶಿ ಭಾವನೆ ಬೆಳೆಸಿಕೊಳ್ಳುವುದರೊಂದಿಗೆ ಕನ್ನಡ ಭಾಷೆಯ ಉಳಿವಿಗೂ ಆದ್ಯತೆ ನೀಡಬೇಕು. ಮಕ್ಕಳಿಗೆ ಮನೆಯಿಂದಲೇ ಕನ್ನಡ ಕಲಿಸುವ ಕೆಲಸವಾಗಬೇಕು. ಭಾರತದ ಎಲ್ಲ ಭಾಷೆಗಳೂ ಭಾರತಮಾತೆಯ ಮಕ್ಕಳಿದ್ದಂತೆ. ಅನ್ಯ ಭಾಷೆಗಳ ಅವಲಂಬನೆ ಕಡಿಮೆ ಮಾಡಿ ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನಗಳ ಬಗ್ಗೆ ಜಾಗ್ರತರಾಗಿರಬೇಕು. ಸ್ವಾವಲಂಬಿ ಹಾಗೂ ಪ್ರಬಲ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಡಾ. ರವಿಕುಮಾರ್ ದಾನಿ ಮಾತನಾಡಿ, ಪ್ರತಿಯೊಬ್ಬರೂ ದಾನ-ಧರ್ಮದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಸಿದವರಿಗೆ ಅನ್ನ ನೀಡುವ ಮೂಲಕ ಮಾನವೀಯತೆ ಮೆರೆಯಬೇಕು. ನಡೆ-ನುಡಿಯಲ್ಲಿ ಶುದ್ಧತೆ ಕಾಪಾಡಿಕೊಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕು. ಧರ್ಮದ ರಕ್ಷಣೆಗೆ ನೀಡುವಷ್ಟೇ ಮಹತ್ವವನ್ನು ಗಿಡಮರಗಳ ರಕ್ಷಣೆಗೂ ನೀಡಬೇಕು ಎಂದು ಹೇಳಿದರು.

ಶಾಸಕ ದೊಡ್ಡನಗೌಡ ಪಾಟೀಲ ಇದ್ದರು.

ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದ ಮುಸ್ಲಿಂ ಮುಖಂಡ:

ವಿಜಯದಶಮಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ನಡೆದ ಅದ್ಧೂರಿ ಪಥಸಂಚಲನದಲ್ಲಿ ಸ್ಥಳೀಯ ಮುಸ್ಲಿಂ ಮುಖಂಡ ಲಾಡಸಾಬ್ ಕೊಳ್ಳಿ ಭಾಗವಹಿಸಿ ಗಮನ ಸೆಳೆದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಪಥಸಂಚಲನದಲ್ಲಿ ನೂರಾರು ಗಣವೇಷಧಾರಿ ಸ್ವಯಂಸೇವಕರು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಪಥಸಂಚಲನದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಅವರಲ್ಲಿ ಲಾಡಸಾಬ್ ಕೊಳ್ಳಿ ಅವರ ಹೆಜ್ಜೆಗಳು ಭಾರತದ ಐಕ್ಯತೆ, ಸೋದರತೆಗೆ ಸಾಕ್ಷಿಯಾಗಿದ್ದವು.

ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಪಟ್ಟಣದ ನಿವಾಸಿಗಳು ಸ್ವಯಂಸೇವಕರ ಮೇಲೆ ಹೂವಿನ ಮಳೆ ಸುರಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಹಲವರು ತಮ್ಮ ಮನೆಗಳ ಮುಂದೆ ನಿಂತು ಪುಷ್ಪವೃಷ್ಟಿ ಮಾಡುವ ಮೂಲಕ ಸಂಭ್ರಮದಲ್ಲಿ ಪಾಲ್ಗೊಂಡರು.ಕುಷ್ಟಗಿ ಸಿಪಿಐ ವಿಶ್ವನಾಥ ಹಿರೇಗೌಡರ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ಪಥಸಂಚಲನದಲ್ಲಿ ದೋಟಿಹಾಳ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡ ಲಾಡಸಾಬ್ ಕೊಳ್ಳಿ ಭಾಗವಹಿಸಿದ್ದರು.

ಪ್ರೇರೇಪಣೆ ನೀಡುತ್ತೇನೆ:‌ ನಮ್ಮ ತಾಲೂಕಿನಲ್ಲಿ ಆರ್‌ಎಸ್‌ಎಸ್ ಸಂಘಟನೆಯು ಮೊದಲು ದೋಟಿಹಾಳ ಗ್ರಾಮದಲ್ಲಿ ಆರಂಭವಾಗಿತ್ತು. ನಾನು ಚಿಕ್ಕಂದಿನಿಂದಲೂ ಆರ್‌ಎಸ್‌ಎಸ್‌ನ ಅಭಿಮಾನಿಯಾಗಿದ್ದು, ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ಇದೇ ಕಾರಣಕ್ಕೆ ಇಂದು ಪಥಸಂಚಲನದಲ್ಲಿ ಭಾಗವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಪ್ರೇರೇಪಣೆ ನೀಡುತ್ತೇನೆ ಎಂದು ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ ಲಾಡಸಾಬ್ ಕೊಳ್ಳಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಗಿಯತ್ತ ಮುಖ ಮಾಡಿದ ರೈತ
ಸಹಕಾರ ಸಾಕು, ಕ್ಷೇತ್ರದಲ್ಲಿ ಕಾರ್ಯಕರ್ತರು ಸ್ವತಂತ್ರರಾಗಿ ಗುರುತಿಸಿಕೊಳ್ಳಿ: ಶಾಸಕಿ ಎಂ.ಪಿ. ಲತಾ