)
ಶಿವಾನಂದ ಗೊಂಬಿ
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದ್ದ ಅಡುಗೆ ಅನಿಲ ಕೊರತೆ ನೀಗಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಬುಕ್ಕಿಂಗ್ ಅವಧಿ ಇದೀಗ ಗ್ರಾಮೀಣ ಪ್ರದೇಶದಲ್ಲಿ ಶಾಪವಾಗಿ ಪರಿಣಮಿಸಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಾಗಿರುವ ತಾರತಮ್ಯ ಈಗಲಾದರೂ ನಿವಾರಿಸಿ ಪುಣ್ಯಕಟ್ಕೊಳ್ಳಿ ಎಂಬ ಕೂಗು ಜೋರಾಗಿದೆ.ಅಮೆರಿಕ, ಇರಾನ್, ಇಸ್ರೇಲ್ ನಡುವೆ ಯುದ್ಧ ತಾರಕ್ಕೇರಿದ್ದ ವೇಳೆ ಎಲ್‌ಪಿಜಿ ಸರಬರಾಜು ತೊಂದರೆಯಾಗಿತ್ತು. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಂತೂ ಹೇಳ ತೀರದಂತಾಗಿತ್ತು. ಹೋಟೆಲ್‌ಗಳೆಲ್ಲ ಕಟ್ಟಿಗೆಗೆ ಮೊರೆ ಹೋಗಿದ್ದವು. ಆಗಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರವೂ ನಗರ ಪ್ರದೇಶದಲ್ಲಿ ಗೃಹ ಬಳಕೆಗಾಗಿ 25 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಅಂತರದಲ್ಲಿ ಬುಕ್ಕಿಂಗ್‌ಗೆ ಅವಕಾಶ ನಿಗದಿಗೊಳಿಸಲಾಗಿತ್ತು. ಇದೀಗ ಎಲ್‌ಪಿಜಿ ಸಮಸ್ಯೆ ಇಲ್ಲ. ಮೊದಲು ಎಷ್ಟು ಬರುತ್ತಿತ್ತೋ ಅಷ್ಟೇ ಪ್ರಮಾಣದಲ್ಲಿ ದೇಶಾದ್ಯಂತ ಸರಬರಾಜು ಆಗುತ್ತಿದೆ. ಆದರೂ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ ಮಾಡದೆ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ತೊಂದರೆಯಾಗುತ್ತಿದೆ.ಅವಿಭಕ್ತ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಇರುವುದರಿಂದ ಅವರಿಗೆ 20-25 ದಿನಗಳಲ್ಲಿ ಸಿಲಿಂಡರ್ ಖಾಲಿ ಆಗುತ್ತಿದೆ. ಬಳಿಕ ಬುಕ್ಕಿಂಗ್ ಮಾಡಲು 20 ದಿನ ಕಾಯಬೇಕು. ಹೀಗಾಗಿ ಅವರು ಅಷ್ಟು ಕಟ್ಟಿಗೆ ಬಳಸಿಯೇ ಅಡುಗೆ ಮಾಡಬೇಕಾದ ಪರಿಸ್ಥಿತಿ ಇದೆ. ಆದರಿಂದ ನಗರ ಪ್ರದೇಶಗಳಂತೆ ಗ್ರಾಮೀಣದಲ್ಲಿ 25 ದಿನಕ್ಕೆ ಸಿಲಿಂಡರ್ ಬುಕ್ಕಿಂಗ್ ಅವಧಿ ಇಳಿಸಿದರೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಕಟ್ಟಿಗೆ ಬಳಿಸಿ ಅಡುಗೆ ತಯಾರಿಸುವುದರಿಂದ ಅದರ ಹೊಗೆ ಸೇವಿಸಿ ತಾಯಂದಿರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜತೆಗೆ ಪರಿಸರವೂ ನಾಶವಾಗುತ್ತದೆ ಎಂದರಿತ ನರೇಂದ್ರ ಮೋದಿ ನೇತೃತ್ವದ ಸರ್ಕಾರವೂ ಉಜ್ಜಲ್ ಯೋಜನೆಯಡಿ 10.58 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸಿದೆ. ಇದೀಗ ಬುಕ್ಕಿಂಗ್ ಅವಧಿ ಹೆಚ್ಚಿಸಿದ್ದರಿಂದ ನಾವು ಅನಿವಾರ್ಯವಾಗಿ ಕಟ್ಟಿಗೆಯಿಂದ ಅಡುಗೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಟ್ಟಿಗೆಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಹಲವರು ಕಂಡ ಕಂಡ ಮರ-ಗಿಡಗಳನ್ನು ಕಡಿದು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಬುಕ್ಕಿಂಗ್ ಅವಧಿ ಕಡಿತಗೊಳಿಸಿ ಎಂದು ಕೇಂದ್ರ ಸರ್ಕಾರವನ್ನು ಜನರು ಆಗ್ರಹಿಸಿದ್ದಾರೆ.ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಅಡುಗೆ ಅನಿಲದ ಕೊರತೆಯಿಂದ ಸರ್ಕಾರ ಬುಕ್ಕಿಂಗ್ ಅವಧಿ ದಿನ ಹೆಚ್ಚಿಸಿತ್ತು. ಇದೀಗ ಜಿಲ್ಲೆಗೆ ಬೇಕಾಗುವಷ್ಟು ಎಲ್‌ಪಿಜಿ ಲಭ್ಯವಿದೆ.
ಕಲ್ಮೇಶ್ವರ ಹುಲ್ಜತ್ತಿ, ಸುಳ್ಳ ಗ್ರಾಮ