ಶಿಕ್ಷಣ, ಆರೋಗ್ಯ, ಪರಿಸರ ಅಭಿವೃದ್ಧಿಗೆ ಒತ್ತು ನೀಡಿ: ಸಂಸದ ತುಕಾರಾಂ

KannadaprabhaNewsNetwork |  
Published : Feb 24, 2026, 03:15 AM IST
ಸ | Kannada Prabha

ಸಾರಾಂಶ

ತಾಲೂಕಿನಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಿರುವುದು, ದರೋಜಿ ಭಾಗದ ಮಕ್ಕಳಲ್ಲಿ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

ಸಂಡೂರು: ತಾಲೂಕಿನ ಎಲ್ಲೆಡೆ ರಸ್ತೆ, ಚರಂಡಿಗಳ ನಿರ್ಮಾಣವಾಗಿದೆ. ಇನ್ನು ಮುಂದೆ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಳಸಿಕೊಳ್ಳುವ ಮೂಲಕ ಸಂಡೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಎಂದು ಸಂಸದ ಈ. ತುಕಾರಾಂ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಂಡೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು. ಈ ಕ್ಷೇತ್ರವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂ.೧ ಮಾಡಬೇಕು. ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಅನ್ನಪೂರ್ಣ ಈ ತುಕಾರಾಂ, ತಾಲೂಕಿನಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಿರುವುದು, ದರೋಜಿ ಭಾಗದ ಮಕ್ಕಳಲ್ಲಿ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು. ಅವುಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಡಿಪಿಒ ನಾಗರಾಜ್, ತಾಲೂಕಿನಲ್ಲಿ ಏಪ್ರಿಲ್ ೨೦೨೫ ರಿಂದ ನವಂಬರ್ ೨೦೨೫ರ ಅವಧಿಯಲ್ಲಿ ೮೧ ಬಾಲ ಗರ್ಭಿಣಿಯರ ನೋಂದಣಿಯಾಗಿತ್ತು. ದಾಖಲಾತಿ ಪರಿಶೀಲನೆಯ ನಂತರ ೧೮ ವರ್ಷದೊಳಗಿನ ಬಾಲ ಗರ್ಭಿಣಿಯರ ಸಂಖ್ಯೆ ೬೭ ಆಗಿತ್ತು. ೬೭ ಪ್ರಕರಣಗಳಲ್ಲಿ ೩೩ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನುಳಿದ ೩೪ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ಎಲ್ಲ ಗ್ರಾಪಂ ವ್ಯಾಪ್ತಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ದರೋಜಿ ಕೆರೆಗೆ ಕಾರ್ಖಾನೆಗಳ ತ್ಯಾಜ್ಯ ಸೇರುತ್ತಿರುವುದು ಮತ್ತು ಆ ಭಾಗದ ಮಕ್ಕಳಲ್ಲಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಕುರಿತು ಶಾಸಕರು ಆತಂಕ ವ್ಯಕ್ತಪಡಿಸಿದಾಗ, ಮಾಲಿನ್ಯ ನಿಯಂತ್ರಣ ಅಧಿಕಾರಿ ಉತ್ತರಿಸಿ, ಕೆರೆಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೆರೆಯ ನೀರು ಡಿ ದರ್ಜೆಯದ್ದಾಗಿದ್ದು, ಕೃಷಿ ಮತ್ತು ಮೀನು ಸಾಕಾಣಿಕೆಗೆ ಮಾತ್ರ ಬಳಸಬಹುದಾಗಿದೆ ಎಂಬ ವರದಿ ಬಂದಿದೆ ಎಂದರು.

ಸಂಸದರು ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಕ್ಲಿನಿಕ್ ಆನ್ ವೀಲ್ ಯೋಜನೆಯಲ್ಲಿ ಅಕ್ರಮ ನಡೆದಿದೆ. ಸ್ವಾಮಿಹಳ್ಳಿಯಲ್ಲಿನ ಪಿಎಚ್‌ಸಿ ಕೇಂದ್ರ ಹಾಳು ಬಿದ್ದಿದೆ. ಯಶವಂತನಗರದಲ್ಲಿನ ಎಎನ್‌ಎಂ ಕೇಂದ್ರ ದನದ ದೊಡ್ಡಿಯಾಗಿದೆ. ತಾಲೂಕು ಕೇಂದ್ರದಲ್ಲಿ ೨೫೦ ಬೆಡ್ ಆಸ್ಪತ್ರೆಗೆ ಡಿಪಿಆರ್ ಕಳುಹಿಸಿಕೊಡುವುದು ಸೇರಿದಂತೆ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಿ, ಜನರೇಟರ್ ಮುಂತಾದ ಮೂಲ ಸೌಕರ್ಯಗಳ ಪಟ್ಟಿಯನ್ನು ನೀಡುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಭರತಕುಮಾರಗೆ ತಿಳಿಸಿದರು.

ಸಂಸದರು ಮಾತನಾಡಿ, ಎನ್‌ಎಂಡಿಸಿಗೆ ಸೇರಿದ ಗಣಿಯಿಂದ ಅದಿರು ಅಕ್ರಮವಾಗಿ ಹೊರ ಸಾಗಾಣಿಕೆ ಆಗಿದ್ದು ಹೇಗೆ? ಬನ್ನಿಹಟ್ಟಿಯಲ್ಲಿ ಅಕ್ರಮವಾಗಿ ಲೋಡ್ ಆಗುತ್ತಿದ್ದ ಅದಿರು ಯಾರಿಗೆ ಸೇರಿದ್ದು? ಈ ಪ್ರಕರಣವನ್ನು ಸಿಐಡಿ ಅಥವಾ ಎಸ್‌ಐಟಿಗೆ ಒಪ್ಪಿಸಬೇಕಿದೆ. ಈ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಚಂದ್ರಶೇಖರ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಎಸ್.ನೂರುದ್ದೀನ್, ವಾಡಾ ಅಧ್ಯಕ್ಷ ಅಕ್ಷಯ್‌ಲಾಡ್, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ 90 ಹಳ್ಳಿಯಲ್ಲಿ ನೀರಿನ ಸಮಸ್ಯೆ
ಕೊಪ್ಪಳ: ಊರ ಜಾತ್ರೆ ವೇಳೆ ದಲಿತರು-ಸವರ್ಣೀಯರ ಸಂಘರ್ಷ